ಶಿಮ್ಲಾ: ಹಿಮಾಚಲ ಪ್ರದೇಶಕ್ಕೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದುಕೊಂಡು ಅಧಿಕಾರ ಪಡೆದಿದ್ದು, ರಾಜ್ಯದ 15ನೇ ಮುಖ್ಯಮಂತ್ರಿಯಾಗಿ ಸುಖ್ವಿಂದರ್ ಸಿಂಗ್ ಸುಖು ಮತ್ತು ಉಪಮುಖ್ಯಮಂತ್ರಿಯಾಗಿ ಮುಖೇಶ್ ಅಗ್ನಿಹೋತ್ರಿ ಅಧಿಕಾರ ವಹಿಸಿಕೊಂಡರು.
ಶಿಮ್ಲಾದ ರಿಡ್ಜ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರಳೇಕರ್ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜ್ಯ ಸಭಾ ಸದಸ್ಯರಾದ ಕೆ.ಸಿ. ವೇಣುಗೋಪಾಲ್, ರಾಜೀವ್ ಶುಕ್ಲಾ, ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಸಂಸದೆ ಪ್ರತಿಭಾ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ಹಿಮಾಚಲ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ನಾಲ್ಕು ಬಾರಿ ಶಾಸಕರಾಗಿರುವ ಸುಖ್ವಿಂದರ್ ಸಿಂಗ್ ಸುಖು ಮುಖ್ಯಮಂತ್ರಿಯಾಗಿದ್ದಾರೆ. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
2017ರ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ರಾಜ್ಯದಲ್ಲಿ ಅಧಿಕಾರ ನಡೆಸುವ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲಿದೆ ಎಂಬುದು ಮತ್ತೆ ಸಾಬೀತಾಗಿದೆ.
ಡಿಸೆಂಬರ್ 08ರಂದು ಘೋಷಣೆಯಾದ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಜಯಗಳಿಸಿದೆ. ಈ ಮೂಲಕ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿ 2ನೇ ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ 40, ಬಿಜೆಪಿ 25 ಹಾಗೂ ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.