ಬೆಂಗಳೂರು, ಜ.03: “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020” ಕಾಯ್ದೆಯನ್ನು ಕೊನೆಗೂ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದ್ದು, ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟಿದೆ.
ಈ ಕುರಿತು ರಾಜ್ಯ ಬಿಜೆಪಿ ಘಟಕ ತನ್ನ ಅಧೀಕೃತ ಟ್ವೀಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, “ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೊಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ವಿರುದ್ಧದ ಕಾನೂನನ್ನೂ ಕೂಡಾ ಜಾರಿಗೆ ತರಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಈ ಕಾಯ್ದೆಯ ಮೂಲಕ ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ಬಿಜೆಪಿ ಸರ್ಕಾರ ಮುಂದಾಗಿದೆ. ಇದೇ ಕಾರಣಕ್ಕೆ ವಿರೋಧ ಪಕ್ಷಗಳ ತೀವ್ರ ವಿರೋಧಗಳ ನಡುವೆಯೂ ಈ ಕಾಯ್ದೆಯನ್ನು ವಿಧಾನ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಆದರೆ ಬಿಜೆಪಿ ಸರ್ಕಾರಕ್ಕೆ ವಿಧಾನ ಪರಿಷತ್ನಲ್ಲಿ ಬಹುಮತ ಇಲ್ಲ. ಇದೇ ಕಾರಣಕ್ಕೆ ಪರಿಷತ್ನಲ್ಲಿ ಈ ಕಾಯ್ದೆ ಸಂಬಂಧ ಉಂಟಾದ ದೊಡ್ಡ ಮಟ್ಟದ ಗಲಾಟೆ ಮತ್ತು ಆನಂತರದ ಬೆಳವಣಿಗೆಯಲ್ಲಿ ಜೆಡಿಎಸ್ ಪಕ್ಷದ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಣ್ಮುಂದೆ ಇಂದೆ.
ಬಿಜೆಪಿ ಸುಗ್ರೀವಾಜ್ಞೆ ಮೂಲಕ ಗೋಹತ್ಯಾ ನಿಷೇಧ ಕಾಯ್ದೆಗೆ ಮುಂದಾಗುತ್ತಿದೆ. ಆಹಾರ ಹಕ್ಕಿನ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ. ಜನಪರ ಕಾಳಜಿಗಿಂತ ಬಿಜೆಪಿಗೆ ಹಿಂದುತ್ವದ ಅಜೆಂಡ ಮುಖ್ಯವಾಗಿದೆ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸಿವೆ.