ಕಬ್ಬು ಬೆಳೆಗಾರರ ನಿರಂತರ ಹೋರಾಟಕ್ಕೆ ಕೊನೆಗೂ ಫಲ: ಪ್ರತಿ ಟನ್ ಕಬ್ಬಿಗೆ 3,300 ರೂ ನಿಗದಿ

ಬೆಂಗಳೂರು : ಕಳೆದ 9 ದಿನಗಳಿಂದ ಕಬ್ಬು ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡಿದ್ದರು. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಇದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ  ನೇತೃತ್ವದಲ್ಲಿ ನಡೆದ ಸಾಲು ಸಾಲು ಸಭೆ ಬೆನ್ನಲ್ಲೇ ಇದೀಗ ಪ್ರತಿ ಟನ್ ಕಬ್ಬಿಗೆ ಒಟ್ಟು 3,300 ರೂ. ನೀಡಲು ನಿರ್ಧರಿಸಲಾಗಿದೆ. ಆ ಮೂಲಕ ಕಬ್ಬು ಬೆಳೆಗಾರರ ನಿರಂತರ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ.

ವಿಧಾನಸೌಧದಲ್ಲಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರತಿ ಟನ್ ಕಬ್ಬಿಗೆ ಒಟ್ಟು 3,300 ರೂ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಟನ್ ಕಬ್ಬಿಗೆ 3200 ರೂ. ದರ ನಿಗದಿ ಮಾಡಲಾಗಿದ್ದು, ಜೊತೆಗೆ 100 ರೂ. ಸೇರಿಸಿ ಕೊಡುತ್ತೇವೆ. ಅಂದರೆ ಸರ್ಕಾರದಿಂದ 50 ರೂ., ಕಾರ್ಖಾನೆಯಿಂದ 50 ರೂ. ನೀಡಲಾಗುತ್ತೆ. ಇದಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪುವ ವಿಶ್ವಾಸವಿದೆ ಎಂದರು.

ಶೇ.11.25ರಷ್ಟು ರಿಕವರಿ ಇದ್ದರೆ ಟನ್‌ಗೆ 3250 ರೂ. ಮಾಲೀಕರು ನೀಡಬೇಕು. ಇದಕ್ಕೆ ಸರ್ಕಾರದಿಂದ 50 ರೂ. ಹೆಚ್ಚುವರಿಯಾಗಿ ಪಾವತಿಸಲು ತೀರ್ಮಾನಿಸಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ರಿಕವರಿ ಕಡಿಮೆಯಾದರೆ ದರ ಸಹ ವ್ಯತ್ಯಾಸವಾಗಲಿದೆ. ಶೇ.10.25ರಷ್ಟು ರಿಕವರಿ ಇದ್ದರೆ ಟನ್‌ಗೆ 3200 ರೂ. ದರ ನಿಗದಿಪಡಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಕೈಗೊಳ್ಳುವ ತೀರ್ಮಾನಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಸಿಎಂ ಹೇಳಿದ್ದಾರೆ.

ಸಿಎಂ ನೇತೃತ್ವದ ಸಭೆಯ ಪ್ರಮುಖ ಅಂಶಗಳೇನು?

  • ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿಯೇ, ಸಕ್ಕರೆ ಎಂಎಸ್ಪಿ ಹೆಚ್ಚಳ ಸೇರಿದಂತೆ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಕೋರಿ ಪ್ರಧಾನಿಯವರಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅವರು ಸಮಯ ನೀಡಿದರೆ ನಾಳೆಯೇ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗಲು ಸಿದ್ಧರಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ರೈತರ ಹಿತದೃಷ್ಟಿಯಿಂದ ಕೈಗೊಳ್ಳುವ ತೀರ್ಮಾನಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಸಿಎಂ ತಿಳಿಸಿದ್ದಾರೆ.
  • ಸಕ್ಕರೆಗೆ ಎಮ್‌ಎಸ್ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರ. ಇದೇ ರೀತಿ ಕಬ್ಬಿಗೆ ಎಫ್‌ಆರ್‌ಪಿ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಎಥೆನಾಲ್ ಹಂಚಿಕೆ ನಿಗದಿಪಡಿಸುವವರು ಕೇಂದ್ರ ಸರ್ಕಾರ. ಸಕ್ಕರೆ ರಫ್ತು ಮಿತಿ ನಿಗದಿಪಡಿಸುವವರು ಸಹ ಕೇಂದ್ರ ಸರ್ಕಾರ.
  • ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಎಫ್‌ಆರ್‌ಪಿ ನಿಗದಿಪಡಿಸುವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಸರ್ಕಾರ ದಿನಾಂಕ 6-05-2025ರಂದು ಕಬ್ಬಿಗೆ ಎಫ್‌ಆರ್‌ಪಿ ನಿಗದಿಪಡಿಸಿದೆ. ಈ ಎಫ್‌ಆರ್‌ಪಿಯಲ್ಲಿ ಸಾಗಾಟ ಮತ್ತು ಕಟಾವು ವೆಚ್ಚ ಸಹ ಸೇರಿದೆ. ಸಕ್ಕರೆಯ ಎಂಎಸ್ಪಿ ಹೆಚ್ಚಳ ಮಾಡುವಂತೆ ಈ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸಿದ್ದೇವೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಎಂಎಸ್ಪಿ ಹೆಚ್ಚಳ ಮಾಡಿಲ್ಲ ಎಂದು ಸಿಎಂ ತಿಳಿಸಿದ್ದಾರೆ.
  • ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್‌ಆರ್‌ಪಿ ವೈಜ್ಞಾನಿಕವಾಗಿಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ರಿಕವರಿ ಕಡಿಮೆ ತೋರಿಸುತ್ತಿವೆ. ಇದನ್ನು ತಪ್ಪಿಸಲು ಪ್ರತಿ ಕಾರ್ಖಾನೆ ಎದುರು ಸರ್ಕಾರದ ವತಿಯಿಂದ ಪ್ರಯೋಗಾಲಯ ತೆರೆಯಬೇಕು. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.
  • ತೂಕದಲ್ಲಿ ಮೋಸ, ರಿಕವರಿ ಕಡಿಮೆ ತೋರಿಸುವುದು ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಕುರಿತು ಕಬ್ಬು ಬೆಳೆಗಾರರಿಗೆ ಇರುವ ಎಲ್ಲಾ ಅಹವಾಲುಗಳನ್ನು ಬಗೆಹರಿಸಲಾಗುವುದು ಎಂದು ರೈತ ಮುಖಂಡರಿಗೆ ಸರ್ಕಾರದ ಸಚಿವರು ತಿಳಿಸಿದ್ದಾರೆ.
Donate Janashakthi Media

Leave a Reply

Your email address will not be published. Required fields are marked *