ಹೊನ್ನಾಳಿ (ದಾವಣಗೆರೆ): “ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಕ್ರಿಯರಾಗಿಲ್ಲ ಹಾಗೂ ನಿರ್ವಹಣೆಯಲ್ಲೂ ಸಹ ಸಂಪೂರ್ಣ ವಿಫಲರಾಗಿದ್ದು, ರಾಜೀನಾಮೆ ಕೊಟ್ಟು ಮನೆಗೆ ಹೋಗ್ಲಿ” ಎಂದು ಸ್ವತಃ ಆಡಳಿತ ಪಕ್ಷದ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದ್ದಾರೆ.
ಪಟ್ಟಣದ ಸರಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಅಲ್ಲಿನ ಕೊರೊನಾ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
”ಚಾಮರಾಜನಗರದಲ್ಲಿ 24 ಜನ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸುದ್ಧಿ ತಿಳಿದ ತಕ್ಷಣ ಸಕ್ರಿಯರಾಗಬೇಕಿದ್ದ ಸಚಿವರು ಕಾರ್ಯೋನ್ಮುಖರಾಗಲು ಸಂಪೂರ್ಣ ವಿಫಲರಾಗಿದ್ದಾರೆ. ಇದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರಲು ಇವರೇ ಕಾರಣಕರ್ತರಾಗಿದ್ದಲ್ಲದೆ, ಪ್ರತಿಪಕ್ಷದ ನಾಯಕರಿಗೆ ಸರಕಾರದ ವಿರುದ್ಧ ಟೀಕೆ ಮಾಡಲು ಇವರೇ ಆಹಾರ ಒದಗಿಸಿಕೊಟ್ಟಂತಾಗಿದೆ,” ಎಂದು ಸಚಿವ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಎರಡು ಬಾರಿ ಸಿಎಂ ಅವರಿಗೆ ಕೊರೊನಾ ದೃಢಪಟ್ಟರೂ ಚಿಕಿತ್ಸೆ ಪಡೆದು ಕೋವಿಡ್ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಕಾಲು ಭಾಗ ಕೆಲಸವನ್ನು ಆರೋಗ್ಯ ಸಚಿವರು ಮಾಡುತ್ತಿಲ್ಲ. ಹೀಗಿರುವಾಗಿ ನನಗೆ ಎರಡು ಖಾತೆ ಬೇಕು ಎಂದು ಒತ್ತಾಯ ಬೇರೆ ಮಾಡುತ್ತಾರೆ. ಒಂದು ಖಾತೆಯನ್ನೇ ನಿರ್ವಹಣೆ ಮಾಡಲಿಕ್ಕೆ ಆಗದಿದ್ದ ಸಚಿವರು ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅರ್ಹತೆ ಇದ್ದವರು ಖಾತೆ ವಹಿಸಿಕೊಂಡು ಕೊರೊನಾ ವಿರುದ್ಧ ಸಮರ ಸಾರಲಿದ್ದಾರೆ,” ಎಂದು ಖಡಕ್ಕ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಮಾಡಿ ದಂಧೆ ನಡೆಸುತ್ತಿರುವ ಹಾಗೂ ಮನುಷ್ಯತ್ವವನ್ನೇ ಮರೆತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಆಗ್ರಹಿಸಿದರು.
ಸಚಿವ ಸುಧಾಕರ್ ಮೇಲೆ ರೇಣುಕಾಚಾರ್ಯ ಬಹಿರಂಗವಾಗಿ ಆರೋಪ ಮಾಡುತ್ತಿರುವುದು ಇದೆ ಮೊದಲೇನೂ ಅಲ್ಲ ಈ ಫೆಬ್ರವರಿ ತಿಂಗಳಲ್ಲಿ ಸಚಿವ ಸುಧಾಕರ ಶಾಸಕರ ಕೈಗೆ ಸಿಗೋದೆ ಇಲ್ಲ. ಅವರೇನು ದೇವರ ಲೋಕದಿಂದ ಇಳಿದು ಬಂದವರಾ ಎಂದು ಪ್ರಶ್ನಿಸಿದ್ದರು. ಈಗ ಮತ್ತೆ ಬಹಿರಂಗ ವಾಗ್ದಾಳಿಯನ್ನು ನಡೆಸಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಮೂಲ ಮತ್ತು ವಲಸೆ ಎಂಬ ಮುಸುಕಿನ ಗುದ್ದಾಟ ಇನ್ನೂ ನಿಂತಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಸಚಿವ ಸುಧಾಕರ್ ಮತ್ತು ರೇಣುಕಾಚಾರ್ಯ ಇಬ್ಬರೂ ಯಡಿಯೂರಪ್ಪಗೆ ಆಪ್ತರಾಗಿದ್ದಾರೆ. ಆದರೆ ರೇಣುಕಾಚಾರ್ಯ ಹಲವುದಿನಗಳಿಂದ ವಲಸೆ ಬಂದ ಶಾಸಕರ ಬಗ್ಗೆ ಮಾತನಾಡುತ್ತಲೇ ಇದ್ದರೂ ಸಿಎಂ ಮೌನ ಮುರಿಯದಿರುವುದು ಅಚ್ಚರಿಗೆ ಕಾರಣವಾಗಿದೆ.