ಬೆಂಗಳೂರು: ನಗರದ ಎಚ್‌ಎಸ್‌ಆರ್ ಬಡಾವಣೆಯ ಸೆಕ್ಟರ್-7ರಲ್ಲಿ ಕುಡಿದ ಮತ್ತಿನಲ್ಲಿದ್ದ ವಿದ್ಯಾರ್ಥಿಯೊಬ್ಬ ವೇಗವಾಗಿ, ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಪಾದಚಾರಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಹೋಟೆಲ್‌ವೊಂದರಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡಿಕೊಂಡಿದ್ದ ಅವರು, ರಾಜೀವ್ ಗಾಂಧಿ ನಗರದ ಪಿಜಿಯಲ್ಲಿದ್ದರು, ಮೃತ ವ್ಯಕ್ತಿಯನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಿವಾಸಿ ಸಂತೋಷ್ (28) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : ಕಾರವಾರ | ಶಿಕ್ಷಕರ ಪ್ರೀತಿ ವಿಶ್ವಾಸ ನೆನಪಿಟ್ಟುಕೊಂಡು ತಪ್ಪು ಮಾಡದಂತೆ ಎಚ್ಚರಿಕೆ ವಹಿಸಿದ್ದೇನೆ – ಬಸವರಾಜ ಹೊರಟ್ಟಿ
ಆ ಸಂದರ್ಭದಲ್ಲಿ ಸಂತೋಷ್ ಅವರು, ಸ್ನೇಹಿತರೊಂದಿಗೆ ಊಟ ಮುಗಿಸಿ ಪಿಜಿಗೆ ನಡೆದುಕೊಂಡು ಹೋಗುತ್ತಿದ್ದರು, ಎಚ್‌ಎಸ್‌ಆರ್ ಲೇಔಟ್ ಸಂಚಾರಿ ಪೊಲೀಸರ ಮಾಹಿತಿ ಪ್ರಕಾರ, ಲೇಔಟ್‌ನ 27ನೇ ಕ್ರಾಸ್ ಬಳಿ ತಡರಾತ್ರಿ ಘಟನೆ ನಡೆದಿದೆ.
ಡಿಕ್ಕಿಯ ರಭಸಕ್ಕೆ ಸಂತೋಷ್ ಅವರು ಸಾಕಷ್ಟು ದೂರ ಗಾಳಿಯಲ್ಲಿ ಹಾರಿಹೋಗಿ ಬಿದ್ದಿದ್ದರು. 23 ವರ್ಷದ ಅಬ್ದುಲ್ ರೆಹಮಾನ್ ಎಂಬವರು ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದ ಆಡಿ ಕಾರು ಸಂತೋಷ್ ಅವರಿಗೆ ಗುದ್ದಿದೆ. ಆದರೂ, ಕಾರು ನಿಲ್ಲಿಸದ ಆರೋಪಿ, ರಸ್ತೆ ಬದಿ ನಿಂತಿದ್ದ ಮತ್ತೆರಡು ವಾಹನಗಳಿಗೂ ಗುದ್ದಿದ್ದ.ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಆರೋಪಿ ಅಬ್ದುಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಬಿಎ ವಿದ್ಯಾರ್ಥಿಯಾಗಿರುವ ಆತ, ಎಚ್‌ಎಸ್‌ಆರ್ ಬಡಾವಣೆಯ ಸೆಕ್ಟರ್-7 ನಿವಾಸಿ. ಕಾರು, ಆರೋಪಿಯ ತಾಯಿಯ ಹೆಸರಿನಲ್ಲಿದೆ. ಅಪಘಾತದ ವೇಳೆ ಅಬ್ದುಲ್ ಜೊತೆ, ಆತನ ಸ್ನೇಹಿತನೂ ಇದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
‘ಆರೋಪಿ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದ. ಮದ್ಯ ಸೇವನೆ ಮಟ್ಟವನ್ನು ಖಚಿತಪಡಿಸಿಕೊಳ್ಳಲು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಹಾಗೂ ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಕೊಂಡಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ : ಮಕ್ಕಳ ಸಾಹಿತ್ಯದ ಕೋಲ್ಮಿಂಚು ತಮ್ಮಣ್ಣ ಬೀಗಾರ ಜೊತೆ ಮಾತುಕತೆ Janashakthi Media
