ಬಳ್ಳಾರಿ: ಶಾಲೆಯ ಛಾವಣಿ ಕುಸಿದು ತಲೆಗೆ ಗಾಯವಾಗಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದ ಹಾಜರಾಬಿ(14) ಮೃತ ವಿದ್ಯಾರ್ಥಿನಿ. ಮೆಹಬೂಬಸುಬಾನ್ ಎಂಬುವವರ ಪುತ್ರಿಯಾಗಿದ್ದ ಈಕೆ ಶಂಕರಬಂಡೆಯ ಮಾದರಿ ಸಮೂಹ ಸಂಪನ್ಮೂಲ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು.
8ನೇ ತರಗತಿ ನಡೆಸಲಾಗುತ್ತಿದ್ದ ಕೊಠಡಿಯ ಮೇಲ್ಛಾವಣಿ ಶಿಥಿಲಗೊಂಡಿತ್ತು. ಕೆಲವು ತಿಂಗಳ ಹಿಂದೆ ತರಗತಿ ನಡೆಯುವ ವೇಳೆ ಹಾಜರಾಬೀ ತಲೆಯ ಮೇಲೆ ಛಾವಣಿ ಮುರಿದು ಬಿದ್ದಿತ್ತು. ಈ ವೇಳೆ ಆಕೆಗೆ ಗಾಯವಾಗಿತ್ತು. ಈ ಘಟನೆ ಎರಡು ತಿಂಗಳ ನಂತರ ಬಾಲಕಿಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಶನಿವಾರ ಅಸಹಜವಾಗಿ ವರ್ತಿಸಿ ಮೃತಳಾಗಿದ್ದಾಳೆ ಎಂದು ಆಕೆಯ ಸಹಪಾಠಿಗಳು ತಿಳಿಸಿದ್ದಾರೆ.
ಶಾಲಾ ಕೊಠಡಿಗಳು ಶಿಥಿಲಾವಸ್ಥೆಯನ್ನು ತಲುಪಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದಾದ ನಂತರ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ, ಗಾಯಗೊಂಡಿದ್ದ ಹಾಜರಾಬೀ ಹೊರನೋಟಕ್ಕೆ ಆರೋಗ್ಯವಾಗಿ ಇದ್ದಳು. ಆದರೆ, ಶನಿವಾರ ಏಕಾಏಕಿ ಆರೋಗ್ಯದಲ್ಲಿ ವೈಪರೀತ್ಯ ಕಾಣಿಸಿ ಮೃತಳಾಗಿದ್ದಾಳೆ ಎನ್ನಲಾಗಿದೆ.
ಸರಕಾರಿ ಶಾಲೆಗಳ ಕಟ್ಟಡಗಳು ಬಹಳಷ್ಟು ಕಡೆ ಶಿಥಿಲಾವಸ್ಥೆಯಲ್ಲಿ ಇವೆ. ಸರಕಾರ ಹಾಗೂ ಶಿಕ್ಷಣ ಇಲಾಖೆ ಸರಿಯಾದ ಗಮನ ನೀಡುತ್ತಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಶಾಲಾ ಛಾವಣಿ ಕುಸಿದು ಸಾವು – ನೋವುಗಳ ವರದಿ ಆಗುತ್ತಲೇ ಇದೆ ಆದರೆ ಸರಕಾರ ಮತ್ತು ಶಿಕ್ಷಣ ಇಲಾಖೆ ಇನ್ನೂ ನಿದ್ರಾವಸ್ಥೆಯಲ್ಲಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.