ಪಾರ್ಶ್ವವಾಯು ಕಾರಣಕ್ಕೆ 2050 ರ ವೇಳೆಗೆ ವಾರ್ಷಿಕ 1 ಕೋಟಿ ಸಾವು: ಅಧ್ಯಯನ

ಜಿನೇವಾ: ತುರ್ತು ಕ್ರಮ ಕೈಗೊಳ್ಳದ ಹೊರತು, ಜಾಗತಿಕವಾಗಿ ಪಾರ್ಶ್ವವಾಯು(ಸ್ಟ್ರೋಕ್‌)ನಿಂದ ಸಾಯುವವರ ಸಂಖ್ಯೆಯು 2050 ರ ವೇಳೆಗೆ 50% ರಷ್ಟು ಹೆಚ್ಚಾಗುತ್ತದೆ ಎಂದು ವಿಶ್ವ ಸ್ಟ್ರೋಕ್ ಸಂಸ್ಥೆ ಮತ್ತು ಲ್ಯಾನ್ಸೆಟ್ ನರವಿಜ್ಞಾನ ಆಯೋಗದ ಹೊಸ ಅಧ್ಯಯನವು ಅಂದಾಜಿಸಿದೆ. ಸ್ಟ್ರೋಕ್‌ನಿಂದಾಗಿ ಈ ವೇಳೆಗೆ ವರ್ಷವೊಂದಕ್ಕೆ 97 ಲಕ್ಷ ಸಾವುಗಳು ಜಾಗತಿಕಾಗಿ ಉಂಟಾಗಲಿದ್ದು, 2.3 ಟ್ರಿಲಿಯನ್‌ ಅಮೆರಿಕನ್ ಡಾಲರ್‌ಗಳಷ್ಟು ವೆಚ್ಚ ಮಾಡಬೇಕಾಗಿ ಬರಬಹುದು ಎಂದು ಅಧ್ಯಯನವು ಹೇಳಿದೆ.

ಜಾಗತಿಕವಾಗಿ ಪಾರ್ಶ್ವವಾಯು ಹೊರೆಯನ್ನು ಕಡಿಮೆ ಮಾಡಲು ಪ್ರಾಯೋಗಿಕ ಶಿಫಾರಸುಗಳನ್ನು ಒತ್ತಿಹೇಳುವ ನಾಲ್ಕು ಸಂಶೋಧನಾ ಪ್ರಬಂಧಗಳನ್ನು ವಿಶ್ವ ಸ್ಟ್ರೋಕ್ ಸಂಸ್ಥೆ ಮತ್ತು ಲ್ಯಾನ್ಸೆಟ್ ನರವಿಜ್ಞಾನ ಆಯೋಗವು ಜಂಟಿಯಾಗಿ ಪ್ರಕಟಿಸಿವೆ. ವರದಿಯನ್ನು ಲ್ಯಾನ್ಸೆಟ್ ನ್ಯೂರಾಲಜಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಅಧ್ಯಯನವು ಪಾರ್ಶ್ವವಾಯು ಸಮಸ್ಯೆಯು  ಪ್ರಾಥಮಿಕವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ. 2020 ರಲ್ಲಿ ಸ್ಟ್ರೋಕ್‌ನಿಂದಾಗಿ ಸಾಯುವವರ ಸಂಖ್ಯೆ 66 ಲಕ್ಷ ಇದ್ದು, 2050 ರ ವೇಳೆಗೆ ಇದರ ಸಂಖ್ಯೆಯು 97 ಲಕ್ಷಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಧ್ಯಯನವು ಅಂದಾಜಿಸಿದೆ.

ಇದನ್ನೂ ಓದಿ: ಗ್ರಾಮಪಂಚಾಯಿತಿಯಲ್ಲಿ ಗೆಲ್ಲಿಸಲು ಶಕ್ತಿ ಇಲ್ಲದವರು ಬಿಜೆಪಿ ನಿಯಂತ್ರಿಸ್ತಿದ್ದಾರೆ? ರೇಣುಕಾಚಾರ್ಯ ಆರೋಪ

ಬಿಕ್ಕಟ್ಟನ್ನು ಎದುರಿಸುವಲ್ಲಿ ಸಾಕ್ಷ್ಯಾಧಾರಿತ, ಪ್ರಾಯೋಗಿಕ ಪರಿಹಾರಗಳ ನಿರ್ಣಾಯಕ ಪಾತ್ರವನ್ನು ವರದಿಯು ಒತ್ತಿಹೇಳಿದ್ದು, ಪಾರ್ಶ್ವವಾಯುಗಳಿಗೆ ಸಂಬಂಧಿಸಿದ ಸಾವುಗಳನ್ನು ಎದುರಿಸಲು 12 ಶಿಫಾರಸುಗಳನ್ನು ಮಾಡಿದೆ. ಅವುಗಳಲ್ಲಿ ಸ್ಟ್ರೋಕ್‌ ಕಣ್ಗಾವಲು, ತಡೆಗಟ್ಟುವಿಕೆ, ತೀವ್ರ ಆರೈಕೆ ಮತ್ತು ಪುನರ್ವಸತಿ ಬಗ್ಗೆ ಹೇಳಲಾಗಿದೆ.

ಸ್ಟ್ರೋಕ್‌ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗೆ ಮಾರ್ಗದರ್ಶನ ನೀಡಲು ನಿಖರವಾದ ಸಾಂಕ್ರಾಮಿಕ ರೋಗಶಾಸ್ತ್ರೀಯ ಸ್ಟ್ರೋಕ್ ಡೇಟಾ ಕಣ್ಗಾವಲು ವ್ಯವಸ್ಥೆಗಳನ್ನು ಸ್ಥಾಪಿಸಲು ಅಧ್ಯಯನ ಶಿಫಾರಸು ಮಾಡಿದೆ. ಜೊತೆಗೆ ತರಬೇತಿ ಮತ್ತು ಜಾಗೃತಿಗಾಗಿ ಮೊಬೈಲ್ ಮತ್ತು ಡಿಜಿಟಲ್ ತಂತ್ರಜ್ಞಾನಗಳ ವ್ಯಾಪಕ ಬಳಕೆಯ ಮೂಲಕ ಸಾರ್ವಜನಿಕ ಜಾಗೃತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪೋಷಿಸಲು ವರದಿಯು ಸಲಹೆ ನೀಡಿದೆ.

ತೀವ್ರತರವಾದ ಪಾರ್ಶ್ವವಾಯು ಆರೈಕೆ ಸೇವೆಗಳ ನಿಖರವಾದ ಯೋಜನೆ, ಸಾಮರ್ಥ್ಯ ವೃದ್ಧಿ, ತರಬೇತಿ, ಸೂಕ್ತ ಸಲಕರಣೆಗಳನ್ನು ಒದಗಿಸುವುದು, ಚಿಕಿತ್ಸೆ, ಕೈಗೆಟುಕುವ ಔಷಧಿಗಳು ಮತ್ತು ಸಾಕಷ್ಟು ಸಂಪನ್ಮೂಲಗಳನ್ನು ನಿಯೋಜಿಸುವುದಕ್ಕೆ ವರದಿಯು ಆದ್ಯತೆ ನೀಡಿದೆ.

ವರ್ಲ್ಡ್ ಸ್ಟ್ರೋಕ್ ಆರ್ಗನೈಸೇಶನ್‌ನ ಚುನಾಯಿತ ಅಧ್ಯಕ್ಷ ಮತ್ತು ಆಯೋಗದ ಪ್ರಮುಖ ಲೇಖಕ ಪ್ರೊಫೆಸರ್ ಜಯರಾಜ್ ಪಾಂಡಿಯನ್, ಸ್ಟ್ರೋಕ್‌ನಿಂದಾಗಿ ಉಂಟಾಗುವ ಸಾವಿನ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ

Donate Janashakthi Media

Leave a Reply

Your email address will not be published. Required fields are marked *