ಬೆಂಗಳೂರು : 7ನೇ ವೇತನ ಆಯೋಗ ಹಾಗೂ ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಹುತೇಕ ಸರಕಾರಿ ಕಚೇರಿಗಳಿಗೆ ಬೀಗ ಬಿದ್ದಿದೆ. ಸುಮಾರು 6 ಲಕ್ಷ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಚಿವಾಲಯ, ವಿಧಾನ ಸಭೆ, ವಿಧಾನ ಪರಿಷತ್ ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಅನಿರ್ದಿಷ್ಠಾವಧಿ ಪ್ರತಿಭಟನೆಗೆ ಅವಕಾಶ ಕೊಡದೇ, ತಕ್ಷಣವೇ ನಮ್ಮ ಬೇಡಿಕೆ ಈಡೇರಿಸಬೇಕು. ಕೊರೊನಾ ಸಮಯದಲ್ಲಿ ಕೆಲಸ ಮಾಡಿದ್ದೇವೆ, ಪ್ರವಾಹದ ಸಂದರ್ಭದಲ್ಲಿ ದೇಣಿಗೆ ನೀಡಿದ್ದೇವೆ. ನಾವು ಯಾವುದೇ ಬ್ಲಾಕ್ ಮೇಲ್ ಮಾಡುತ್ತಿಲ್ಲ, ಪ್ರತಿಭಟನೆ ನಮ್ಮ ಹಕ್ಕು ಎಂದು ಪ್ರತಿಭಟನಾನಿರತ ಸರ್ಕಾರಿ ಉದ್ಯೋಗಿಗಳು ಒತ್ತಾಯಿಸಿದ್ದಾರೆ.
ಸರ್ಕಾರಿ ನೌಕರರ ರಕ್ಷಣೆಗಾಗಿ ಪಂಜಾಬ್, ರಾಜಸ್ಥಾನ, ಛತ್ತಿಸ್ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ಸರ್ಕಾರಗಳ ಮಾದರಿಯಲ್ಲಿ NPS ರದ್ದುಗೊಳಿಸಿಬೇಕು, OPSಯನ್ನ ಜಾರಿಗೆ ತರಬೇಕೆಂದು ನೌಕರರು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ : ಎಸ್ಮಾ ಜಾರಿಯಾದರೂ ಹೆದರಲ್ಲ-ಜೈಲಿಗೆ ಹೋಗಲು ಸಿದ್ಧ; ನಾಳೆಯಿಂದ ಸರ್ಕಾರಿ ನೌಕರರ ಮುಷ್ಕರ ಆರಂಭ
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸಿಎಂ ನಿರ್ಧಾರ ಕೈಗೊಳ್ಳುವವರೆಗೆ ನೌಕರರ ಪ್ರತಿಭಟನೆಯ ನಿರ್ಧಾರವನ್ನು ಹಿಂಪಡೆಯುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಯ್ಕೆ ನೀಡಿದ್ದೇ., ಸರ್ಕಾರದ ನಿರ್ಧಾರಕ್ಕೆ ಕಾಯುತ್ತೇವೆ. ಸರ್ಕಾರದ ಅಂತಿಮ ಅಧಿಕೃತ ಆದೇಶ ಹೊರಬರುವವರೆಗೆ ಮುಷ್ಕರ ಹಿಂತೆಗೆದುಕೊಳ್ಳುವುದಿಲ್ಲ, ಸಿಎಂ ಬಾಯಿ ಮಾತಿಗೆ ಭರವಸೆ ನೀಡಿದರೇ ಸಾಕಾಗುವುದಿಲ್ಲ ಎಂದು ಪ್ರತಿಭಟನೆಕಾರರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆ ಇಂದು ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಕಚೇರಿಗಳು, ಬೆಸ್ಕಾಂ, BWSSB,ಬಿಬಿಎಂಪಿ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಗ್ರಾಮ ಪಂಚಾಯಿತಿ, ಪುರಸಭೆ ಕಚೇರಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ (ಐಸಿಯು, ಎಂಐಸಿಯು ಹೊರತುಪಡಿಸಿ), ಕಂದಾಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್ಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಜಲಮಂಡಳಿ, ಬಿಬಿಎಂಪಿ ಆಸ್ಪತ್ರೆಗಳು, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಆಗಿವೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ, ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ವಿವಿಧ ಸಂಗಟನೆಗಳ ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದೆ.