ಸುರತ್ಕಲ್: ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನಮನಸ್ಕ ಸಂಘಟನೆಗಳು ನಡೆಸಲುದ್ದೇಶಿಸಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿಗೆ ಇಂದು ಚಾಲನೆ ನೀಡಲಾಗಿದೆ.
ಟೋಲ್ ಗೇಟ್ ಪರಿಸರದಲ್ಲಿ ಇಂದು ಬೆಳಗ್ಗೆಯಿಂದ ಧರಣಿ ಕುಳಿತಿರುವ ಹೋರಾಟಗಾರರು, ಭರವಸೆಗಳು ಬೇಡ, ಟೋಲ್ ನಿಲ್ಲಿಸಿ ಎಂದು ಒತ್ತಾಯಿಸುತ್ತಿದ್ದರಲ್ಲದೆ, ಅಕ್ರಮ ಟೋಲ್ ಗೇಟ್ ತೆರವು ಆಗುವವರೆಗೆ ಅನಿರ್ದಿಷ್ಟಾವಧಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಧರಣಿನಿರತರು ರಾಜ್ಯ ಬಿಜೆಪಿ ಸರಕಾರ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೈ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಉಮಾನಾಥ ಕೋಟ್ಯಾನ್ ಸೇರಿದಂತೆ ಕರಾವಳಿಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಹೋರಾಟದ ಹಿನ್ನೆಲೆಯಲ್ಲಿ ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿಯ ಹಿನ್ನೆಲೆಯಲ್ಲಿ ಸುರತ್ಕಲ್ ಟೋಲ್ಗೇಟ್ನಿಂದ 200 ಮೀಟರ್ ದೂರದಲ್ಲಿ ಹಗಲು ರಾತ್ರಿ ಧರಣಿ ಆರಂಭವಾಗಿದೆ. ಇಂದು(ಅಕ್ಟೋಬರ್ 28) ಬೆಳಗ್ಗೆಯಿಂದ ಧರಣಿ ಕುಳಿತಿರುವ ಹೋರಾಟಗಾರರು, ಭರವಸೆಗಳು ಬೇಡ, ಟೋಲ್ ನಿಲ್ಲಿಸಿ ಎಂದು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಅಕ್ರಮ ಟೋಲ್ ಗೇಟ್ ತೆರವು ಆಗುವವರೆಗೆ ಅನಿರ್ದಿಷ್ಟಾವಧಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಸುರತ್ಕಲ್ ಟೋಲ್‌ಗೇಟ್ ಮೂಲಕ ಕಳೆದ ಆರು ವರ್ಷಗಳಿಂದ ಅಕ್ರಮವಾಗಿ ಟೋಲ್ ಸಂಗ್ರಹಿಸುತ್ತಿರುವ ನವಯುಗ ಕಂಪನಿಯ ಟೋಲ್‌ಗೇಟ್ ತೆರವುಗೊಳಿಸುವಂತೆ ಮತ್ತು ತಕ್ಷಣದಿಂದಲೇ ಟೋಲ್ ಸಂಗ್ರಹ ನಿಲ್ಲಿಸುವಂತೆ ಆಗ್ರಹಿಸಲಾಗುತ್ತಿದೆ. ಒಪ್ಪಂದವನ್ನು ಉಲ್ಲಂಘಿಸಿ ಸಾರ್ವಜನಿಕರಿಂದ ದಬ್ಬಾಳಿಕೆಯ ಮೂಲಕ ಟೋಲ್ ವಸೂಲಿ ಮಾಡುತ್ತಿರುವ ನವಯುಗ ಕಂಪನಿಯ ಲೂಟಿಯನ್ನು ತಡೆಯುವ ಬದಲು, ಲೂಟಿ ಮಾಡಲು ಬಿಜೆಪಿ ಸರ್ಕಾರ ಅನುವು ಮಾಡಿಕೊಟ್ಟಿರುವುದನ್ನು ಧರಣಿ ನಿರತರು ಖಂಡಿಸಿದರು.
ಇದನ್ನೂ ಓದಿ : ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹ; ಅಕ್ಟೋಬರ್ 28ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ
ಹೆಜಮಾಡಿ ಟೋಲ್‌ಗೇಟ್ ಮೂಲಕ ಸಂಗ್ರಹ ಆರಂಭಗೊಂಡ ಕೂಡಲೇ ಸುರತ್ಕಲ್ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕೆಂಬ ಒಪ್ಪಂದವಿದ್ದರೂ, 2016ರಿಂದ ಇಲ್ಲಿಯವರೆಗೆ ಅಕ್ರಮವಾಗಿ ಸಾರ್ವಜನಿಕರಿಂದ ನೂರಾರು ಕೋಟಿ ಸಂಗ್ರಹಿಸಲು ಬಿಟ್ಟಿರುವುದೇ ಸರಕಾರದ ದೊಡ್ಡ ಅಪರಾಧವಾಗಿದೆ. ಸದರಿ ಖಾಸಗಿ ಕಂಪನಿಯಿಂದ ಅಕ್ರಮವಾಗಿ ಸಂಗ್ರಹಿಸಲಾದ ಒಟ್ಟು ಮೊತ್ತವನ್ನು ರಾಜ್ಯ ಸರಕಾರ ವಶಪಡಿಸಬೇಕೆಂದು ಆಗ್ರಹಿಸಿದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಸುರತ್ಕಲ್ ಎನ್‌ಐಟಿಕೆ ಟೋಲ್ ಗೇಟ್ ಮುಚ್ಚುವವರೆಗೆ ನಾವು ಇಲ್ಲಿ ಶಾಂತಿಯುತ ಹೋರಾಟ ಮಾಡುತ್ತೇವೆ. ಸಂಸದ ನಳಿನ್ ಕುಮಾರ್ ಅವರು ಟೋಲ್ ಗೇಟ್ ತೆರವು ಮಾಡುವ ಭರವಸೆ ನೀಡಿದಂತೆ ನವೆಂಬರ್ 7ಕ್ಕೆ ಮುಕ್ತಾಯವಾಗಲಿದೆ. ಅಲ್ಲಿಯವರೆಗೆ ಇದೇ ರೀತಿ ಧರಣಿ ಕುಳಿತು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಟೋಲ್ ಮುಚ್ಚದಿದ್ದರೆ ಈ ಬಗ್ಗೆ ನ್ಯಾಯಾಲಯಕ್ಕೆ ಹೋಗಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಅಧಿಕಾರದಲ್ಲಿ ಇರುವ ಅವರು ಕೋರ್ಟ್ಗೆ ಹೋಗುವ ಬದಲು ಇದನ್ನು ಮಾಡಲಾಗದೆ ಇರುವುದಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಮಾತನಾಡಿ, ಇದು ಜನಪರ ಹೋರಾಟ, ಟೋಲ್ ಗೇಟ್ ತೆರವು ಆಗುವವರೆಗೆ ಶಾಂತಿಯುತ ಹೋರಾಟ ಮಾಡುತ್ತೇವೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಜನರು ಈ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಆಗ್ರಹಿಸಿದರು.
ಧರಣಿನಿರತರು ರಾಜ್ಯ ಬಿಜೆಪಿ ಸರಕಾರ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ವೈ.ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಉಮಾನಾಥ ಕೋಟ್ಯಾನ್ ಸೇರಿದಂತೆ ಕರಾವಳಿಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವರಾದ ಬಿ ರಮನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವ, ಕಾಂಗ್ರೆಸ್ ಮುಖಂಡರಾದ ಪ್ರತಿಭಾ ಕುಳಾಯಿ, ನಾಗೇಶ್ ಉದ್ಯಾವರ, ರಮೇಶ್ ಕಾಂಚನ್, ಸಿಪಿಐ ಮುಖಂಡ ಬಿ ಶೇಖರ್, ಕರುಣಾಕರ ಮಾರಿಪಳ್ಳ, ವಿ ಕುಕ್ಯಾನ್, ಸಿಪಿಐ(ಎಂ) ಮುಖಂಡ ಯೋಗೀಶ್ ಜೆಪ್ಪಿನಮೊಗರು ಡಿವೈಎಫ್ಐ ಮುಖಂಡ ಬಿ ಕೆ ಇಮ್ತಿಯಾಜ್, ವಕೀಲ ದಿನೇಶ್ ಹೆಗ್ಡೆ, ರಾಘವೇಂದ್ರ ರಾವ್, ಮುಹಮ್ಮದ್ ಕುಂಜತ್ತಬೈಲ್ ಮೊದಲಾದವರು ನೇತೃತ್ವ ವಹಿಸಿದ್ದಾರೆ.
ಸದ್ಯ ಈ ಅನಿರ್ಧಿಷ್ಟಾವಧಿ ಧರಣಿಯನ್ನು ನವೆಂಬರ್ 7ರವರೆಗೆ ಶಾಂತಿಯುತವಾಗಿ ನಡೆಸಿ ಆ ಬಳಿಕವೂ ಟೋಲ್ ಗೇಟ್ ತೆರವು ಆಗದೇ ಇದ್ದರೆ ಹೋರಾಟದ ಸ್ವರೂಪ ಬೇರೆಯಾಗಿರುತ್ತೆ ಎಂದು ಹೋರಾಟಗಾರರು ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.