ಇಲಾಖೆಗಳಲ್ಲಿ ಕನ್ನಡ ಭಾಷೆ ಅನುಸರಿಸದಿದ್ದರೆ ಕಠಿಣ ಕ್ರಮ: ಶಾಲಿನಿ ರಜನೀಶ್‌

ಬೆಂಗಳೂರು: ಎಲ್ಲ ಇಲಾಖೆಗಳು ಕನ್ನಡದಲ್ಲೇ ಆಡಳಿತ ನಡೆಸುವ ಸಂಬಂಧ ಹಲವು ಬಾರಿ ಸೂಚನೆಗಳನ್ನು ನೀಡಿದರೂ ಪಾಲನೆ ಆಗದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಜೂನ್‌ 25 ಬುಧವಾರದಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಷಾ ನೀತಿ ಅನುಸರಿಸುವುದು ಎಲ್ಲ ಅಧಿಕಾರಿಗಳು ಮತ್ತು ನೌಕರರ ಕರ್ತವ್ಯ. ಇದನ್ನು ಉಲ್ಲಂಘಿಸುವವರ ವಿರುದ್ಧ ವೈಯಕ್ತಿಕವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸರಕಾರದ ಪತ್ರ ವ್ಯವಹಾರಗಳಲ್ಲಿ ಕಡತದ ಟಿಪ್ಪಣಿಗಳನ್ನು ಕನ್ನಡದಲ್ಲಿ ಮಾಡುವಂತೆ ಸೂಚಿಸಿದರೂ ಪರಿಣಾಮಕಾರಿಯಾಗಿ ಪಾಲನೆ ಆಗದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಿಸಿದ್ದಾರೆ. ಅವರ ಸೂಚನೆಯಂತೆ ಕಡತದಗಳ ಟಿಪ್ಪಣಿ ಮತ್ತು ಪತ್ರ ವ್ಯವಹಾರಗಳು ಕನ್ನಡದಲ್ಲಿ ಬಾರದಿದ್ದರೆ, ಅಂತವುಗಳನ್ನು ಹಿಂದಿರುಗಿಸಿ ಸೂಕ್ತ ಸಮಜಾಯಿಷಿ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿ ಚಲೋ| ನ್ಯಾಯ ಸಿಗುವವರೆಗೂ ಇಲ್ಲೇ ಇರುತ್ತೇವೆ: ಕಾರಳ್ಳಿ ಶ್ರೀನಿವಾಸ್

ಡಿಸಿ-ಸಿಇಒಗಳ ಇಂಗ್ಲಿಷ್‌ ಕಾರ್ಯಸೂಚಿ: ಪ್ರಾಧಿಕಾರ ವರದಿ

ಇತ್ತೀಚೆಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಗಳು ಕೆಡಿಪಿ ಸಭೆಯ ಕಾರ್ಯಸೂಚಿಯನ್ನು ಇಂಗ್ಲಿಷ್‌ನಲ್ಲಿ ಹೊರಡಿಸುತ್ತಾರೆ ಮತ್ತು ವಿಶೇಷವಾಗಿ ಕಾಮಗಾರಿ ಇಲಾಖೆಗಳು ತಮ್ಮೆಲ್ಲ ಮಾಹಿತಿಗಳನ್ನು ಇಂಗ್ಲಿಷ್‌ನಲ್ಲಿ ಮಂಡಿಸುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಸಿಇಒಗಳು ಅನುಮೋದಿಸುತ್ತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ವರದಿ ಮಾಡಿರುತ್ತಾರೆ.

ಭಾಷಾ ನೀತಿ ಪೂರ್ಣಪ್ರಮಾಣದಲ್ಲಿ ಅನುಸರಿಸುವುದು ಕರ್ತವ್ಯ ಕೂಡ ಆಗಿದೆ. ಆದ್ದರಿಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಶಾಲಿನಿ ರಜನೀಶ್‌ ಸುತ್ತೋಲೆಯಲ್ಲಿ ಪುನರುತ್ಛರಿಸಿದ್ದಾರೆ.

ಇದನ್ನೂ ನೋಡಿ: ಘೋಷಿತ ತುರ್ತು ಪರಿಸ್ಥಿತಿ ಮತ್ತು ಅಘೋಷಿತ ತುರ್ತು ಪರಿಸ್ಥಿತಿಯ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತೆರೆದಿಡುವ ಪುಸ್ತಕ

Donate Janashakthi Media

Leave a Reply

Your email address will not be published. Required fields are marked *