ಮದ್ದೂರು: ಜಿಲ್ಲಾ ಬೀದಿ ವ್ಯಾಪಾರಸ್ಥರ ಸಂಘವು, “ನಗರದ ಪೇಟೆಬೀದಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಬೀದಿ ವ್ಯಾಪಾರಿಗಳನ್ನು ತೆರವು ಮಾಡಿಸಲಾಗಿದೆ” ಎಂದು ಆರೋಪಿಸಿ ನಗರಸಭಾ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಏಕಾಏಕಿ ಬೀದಿ ಬದಿ ವ್ಯಾಪಾರಿಗಳನ್ನು ಪೇಟೆಬೀದಿಯಿಂದ ತೆರವು ಮಾಡಿರುವ ಕ್ರಮ ಖಂಡಿಸಿ ನಗರಸಭಾ ಅಧಿಕಾರಿಗಳು ಹಾಗೂ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ. ಕುಮಾರಿ ಮಾತನಾಡಿ, ನಗರದ ಪೇಟೆ ಬೀದಿಯ ರಸ್ತೆ ವಿಸ್ತರಣೆ ಮಾಡುವುದಾದರೆ ಮಾಡಲಿ. ಅದರೆ ನಗರದ ಪೇಟೆ ಬೀದಿಯಲ್ಲಿ ಸುಮಾರು 275 ಜನ ಬೀದಿಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದು, ಇವರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ಪೇಟೆಬೀದಿಯಿಂದ ತೆರವುಗೊಳಿಸಿದರೆ ಇವರ ಜೀವನೋಕ್ಕೆ ತುಂಬಾ ತೊಂದರೆಯಾಗುತ್ತದೆ ಎಂದರು.
ಇದನ್ನೂ ಓದಿ: ಅಳಿಸಲಾರದ ಮುಸ್ಲಿಂ ಶಿಕ್ಷಕಿ ಫಾತೀಮಾ ಶೇಕ್
ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಸಂರಕ್ಷಣಾ ಕಾಯ್ದೆ 2014ರ ಅನ್ವಯ ನಗರದ ಪೇಟೆಬೀದಿಯಲ್ಲಿರುವ ಸುಮಾರು 275 ಜನ ಬೀದಿಬದಿ ವ್ಯಾಪಾರಿಗಳೆಂದು ಸರ್ವೇ ಮಾಡಿ ಗುರುತಿನ ಚೀಟಿ ವಿತರಣೆ ಮಾಡಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ (ಜೋನ್) ಮಾಡುವವರಗೆ ಬೀದಿಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿದ ನಗರಸಭಾ ಪೌರಾಯುಕ್ತೆ ರಾಧಿಕಾ, ಬೀದಿಬದಿ ವ್ಯಾಪಾರಿಗಳಿಗೆ ಕಾನೂನಿನ ಪ್ರಕಾರ ವ್ಯಾಪಾರ ಮಾಡಲು ಪರ್ಯಾಯ ಸ್ಥಳ ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಿಐಟಿಯು ಮುಖಂಡರಾದ ಪ್ರದೀಪ್, ಚಂದ್ರು, ಜಯರಾಮು, ಮಕ್ಬಲ್ ಪಾಷ, ರೂಪ, ಶಿವಕುಮಾರ್, ಶಿವಚನ್ನಪ್ಪ, ಮಹಾಲಕ್ಷ್ಮಿ, ಮಹೇಂದ್ರ, ಬೀದಿ ಬದಿ ವ್ಯಾಪಾರಿಗಳಾದ ರೂಪ, ರಮೇಶ್, ಶಾಂತರಾಜು, ಕುಮಾರ, ನಾರಾಯಣ, ಸಂಪತ್ ಸೇರಿದಂತೆ ಇತರರು ಇದ್ದರು.
ಇದನ್ನೂ ನೋಡಿ: ನಮ್ಮ ಆಹಾರ: ತಪ್ಪು ಒಪ್ಪುಗಳು| ಡಾ. ಎನ್.ಬಿ. ಶ್ರೀಧರ Janashakthi Media
