ಮುಂಬೈ : ಮೂವರು ವ್ಯಕ್ತಿಗಳು, 42 ವರ್ಷದ ಮಹಿಳೆಯೊಬ್ಬರ ಮನೆಗೆ ನುಗ್ಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಸಿಗರೇಟ್‌ನಿಂದ ಆಕೆಯ ಖಾಸಗಿ ಭಾಗಗಳಿಗೆ ಸುಟ್ಟು ಗಾಯಗೊಳಿಸಿರುವ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ.
ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಸಿಗರೇಟಿನಿಂದ ಆಕೆಯ ಖಾಸಗಿ ಅಂಗಗಳನ್ನು ಸುಟ್ಟು, ಎದೆ ಮತ್ತು ಎರಡೂ ಕೈಗಳ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದು, ಈ ವಿಷಯವನ್ನು ಯಾರಿಗಾದ್ರೂ ಹೇಳಿದ್ರೆ, ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಮಹಿಳೆಯು ತನ್ನ ನೆರೆಹೊರೆಯವರಿಗೆ ತನ್ನ ಸಂಕಟವನ್ನು ವಿವರಿಸಿದ ನಂತ್ರ ವಿಷಯ ಬೆಳಕಿಗೆ ಬಂದಿದೆ. ನಂತರ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್‌ಗಳಾದ 376 (ಅತ್ಯಾಚಾರ), 376ಡಿ (ಸಾಮೂಹಿಕ ಅತ್ಯಾಚಾರ), 377 (ಅನೈಸರ್ಗಿಕ ಲೈಂಗಿಕ ಕ್ರಿಯೆ), 324 ( ಮಾರಕವಾದ ಆಯುಧದಿಂದ ಘಾಸಿಯುಂಟು ಮಾಡುವುದು) ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರ ಹುಡುಕಾಟ ನಡೆಯುತ್ತಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುರ್ಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಪ್ರಖರಣಗಳು ಹೆಚ್ಚಾಗುತ್ತಲೇ ಇವೆ. ಇತ್ತೀಚೆಗೆ ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನು ಆಚರಿಸಲಾಗಿದೆ. ಆದರೂ ದೌರ್ಜನ್ಯ ಪ್ರಕರಣಗಳು ನಿಲ್ಲುತ್ತಿಲ್ಲ. ಗಂಡಿನ ಮನಸ್ಥಿತಿಯೂ ಇದಕ್ಕೆ ಕಾರಣವಾಗಿದೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಅನಾದಿ ಕಾಲದಿಂದಲೂ ಮಹಿಳೆ ದೌರ್ಜನ್ಯಕ್ಕೊಳಗಾಗ್ತಿದ್ದಾಳೆ. ಪ್ರತಿ 10 ನಿಮಿಷಕ್ಕೆ ಒಬ್ಬ ಮಹಿಳೆ ದೌರ್ಜನ್ಯಕ್ಕೆ ಬಲಿಯಾಗ್ತಿದ್ದಾಳೆ. ಹೊರಗಿನವರಿಂದ ಮಾತ್ರವಲ್ಲ ನಮ್ಮ ಆಪ್ತರು, ಕುಟುಂಬಸ್ಥರಿಂದಲೇ ಮಹಿಳೆ ಮೇಲೆ ಹಿಂಸಾಚಾರ ನಡೆಯುತ್ತಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಮಹಿಳೆಯರಿಗೆ ರಕ್ಷಣೆ, ಭದ್ರತೆ ನೀಡಬೇಕು. ಸಮಾನ ಹಕ್ಕುಗಳು ಜಾರಿಯಾಗಬೇಕು. ಗಂಡಿನ ಮನಸ್ಥಿತಿ ಬದಲಾಗಬೇಕು ಎಂದು ಜನಪರ ಸಂಘಟನೆಗಳು ಆಗ್ರಹಿಸುತ್ತಾ ಬಂದಿವೆ.