ದೆಹಲಿ: ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್‌ಕ್ಲಿಕ್ ಸೇರಿದಂತೆ ಇತರ ಮಾಧ್ಯಮಗಳ ಜೊತೆಗೆ ಕೆಲಸ ಮಾಡುವ ವೃತ್ತಿಪರ ಪತ್ರಕರ್ತರು, ಅಂಕಣಕಾರರು ಹಾಗೂ ಹೋರಾಟಗಾರರ ಮನೆ ಮತ್ತು ಕಚೇರಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ದಾಳಿಯನ್ನು ‘ಅಘಾತಕಾರಿ’ ಎಂದು ಹೇಳಿರುವ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್ ), ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಪತ್ರಕರ್ತರನ್ನು ಅಪರಾಧಿಗಳ ತರ ಬಿಂಬಿಸುವುದು ಮತ್ತು ಮಾಧ್ಯಮಗಳನ್ನು ಬೆದರಿಸುವುದನ್ನು ನಿಲ್ಲಿಸುವಂತೆ ಅದು ಸರ್ಕಾರವನ್ನು ಸೋಮವಾರ ಆಗ್ರಹಿಸಿದೆ. ದೆಹಲಿ ಪೊಲೀಸರು ನ್ಯೂಸ್ ಕ್ಲಿಕ್ ವಿರುದ್ಧ ಯುಎಪಿಎ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ದೆಹಲಿ, ಮುಂಬೈ ಮತ್ತು ಹೈದರಾಬಾದ್‌ನ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಯುಸಿಎಲ್, “ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್‌ಕ್ಲಿಕ್ ಪೋರ್ಟಲ್ ಹಾಗೂ ಅವರು ಬೆಂಬಲಿಸುವ ಎಲ್ಲಾ ಸ್ವತಂತ್ರ ಪತ್ರಕರ್ತರು ಮತ್ತು ಸಂಸ್ಥೆಗಳ ಮೇಲಿನ ದಾಳಿಯು ಸಂಘಟಿತ ಬೇಟೆಯ ಭಾಗವಾಗಿದ್ದು, ಪೋರ್ಟಲ್‌ನಲ್ಲಿ ಬಿತ್ತರವಾಗುವ ವರದಿಗಳು ಆಡಳಿತಕ್ಕೆ ನುಂಗಲಾಗದ ತುತ್ತಾಗಿರುವ ಕಾರಣಕ್ಕೆ ಈ ದಾಳಿ ನಡೆದಿದೆ” ಎಂದು ಪ್ರತಿಪಾದಿಸಿದೆ. ನ್ಯೂಸ್‌ಕ್ಲಿಕ್ ಮತ್ತು ಅದರ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ವಿರುದ್ಧ ಇಡಿ, ಐಟಿ ಮತ್ತು ಸಿಬಿಐನಿಂದ ಪ್ರಕರಣಗಳು ಇದ್ದರೂ, ಅವರು ಹಾಗೂ ಅವರ ಪತ್ರಕರ್ತರು ಹಿಂದೆ ಸರಿಯದೆ ತಮ್ಮ ವೃತ್ತಿಪರ ಜವಾಬ್ದಾರಿಯನ್ನು ನಿರ್ಭಯವಾಗಿ ನಿರ್ವಹಿಸುತ್ತಿರು ಬಗ್ಗೆ ಪಿಯುಸಿಎಲ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಕ್ಲಿಕ್ ವಿರುದ್ಧ ‘ಯುಎಪಿಎ’ ದಾಖಲು; 2 ಪತ್ರಕರ್ತರು ವಶಕ್ಕೆ!
“ನ್ಯೂಸ್‌ಕ್ಲಿಕ್ ಮತ್ತು ಪ್ರಬೀರ್ ಪುರ್ಕಾಯಸ್ಥ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಮುಂದಿನ ವಾರ ದೆಹಲಿ ಹೈಕೋರ್ಟ್‌ನ ಮುಂದೆ ಪಟ್ಟಿ ಮಾಡಲಾಗುತ್ತಿರುವ ಸಮಯದಲ್ಲಿ ಈ ದಾಳಿ ನಡೆದಿದ್ದು, ಅಲ್ಲದೆ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಆದೇಶ ನೀಡಲಾಗಿತ್ತು. ಆದರೆ ಸಾರ್ವಜನಿಕ ಅಭಿಪ್ರಾಯ ಮತ್ತು ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಸಲುವಾಗಿ ಈ ದಾಳಿಗಳನ್ನು ನಡೆಸಲಾಗಿದೆ” ಎಂದು ಪಿಯುಸಿಎಲ್ ಅಭಿಪ್ರಾಯಪಟ್ಟಿದೆ.
“ಸಂವಿಧಾನದ ವಿಧಿ 19(1)(ಎ) ಅಡಿಯಲ್ಲಿ ಸಾಂವಿಧಾನಿಕ ಹಕ್ಕಿನ ಪ್ರಕ್ರಿಯೆಯನ್ನು ಭಯೋತ್ಪಾದನೆ ಸಂಬಂಧಿತ ಅಪರಾಧ ಅಥವಾ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಸವಾಲೆಸೆಯುವ ಕಾನೂನುಬಾಹಿರ ಚಟುವಟಿಕೆ ಎಂದು ಬಿಂಬಿಸಲಾಗುತ್ತಿದೆ. ದಾಳಿಗೊಳಗಾದ ಪತ್ರಕರ್ತರು ಮತ್ತು ಮಾಧ್ಯಮ ವೃತ್ತಿಪರರು ಭಯೋತ್ಪಾದನೆಯ ಉದ್ದೇಶಗಳಿಗಾಗಿ ಚೀನಾದ ಹಣವನ್ನು ಬಳಸುತ್ತಿದ್ದಾರೆ ಎಂಬ ಕಾಲ್ಪನಿಕ ಕಥೆಯ ನಿರೂಪಣೆ ಕಟ್ಟಲು ಸರ್ಕಾರ ಮಾಡಿದ ಅಧಿಕಾರದ ದುರುಪಯೋಗವಲ್ಲದೇ ಬೇರೇನೂ ಅಲ್ಲ” ಎಂದು ಪಿಯುಸಿಎಲ್ ಕಿಡಿ ಕಾರಿದೆ.
ಇದನ್ನೂ ಓದಿ: ‘ನ್ಯೂಸ್ ಕ್ಲಿಕ್’ ಕಚೇರಿಯನ್ನು ಜಪ್ತಿ ಮಾಡಿದ ದೆಹಲಿ ಪೊಲೀಸರು : ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆ
ಪತ್ರಕರ್ತರನ್ನು ಬಂಧಿಸಿ ಗಂಟೆಗಟ್ಟಲೆ ವಿಚಾರಣೆಗೆ ಒಳಪಡಿಸಿದ್ದು, ಅವರಿಗೆ ಕಿರುಕುಳ ನೀಡಲು ಮತ್ತು ಬೆದರಿಸುವ ಪ್ರಯತ್ನವಾಗಿದೆ ಎಂಬುವುದು ಸ್ಪಷ್ಟವಾಗಿದೆ. ಸಾರ್ವಜನಿಕ ಮನಸ್ಸಿನಲ್ಲಿ ಸ್ವತಂತ್ರ ಪತ್ರಕರ್ತರೆಂದರೆ ದೇಶ ವಿರೋಧಿಗಳು ಎಂಬಂತೆ ಬಿಂಬಿಸುವುದು ಈ ದಾಳಿಯ ಉದ್ದೇಶವಾಗಿದೆ ಎಂದು ಪಿಯುಸಿಎಲ್ ಹೇಳಿದೆ.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು 180 ರಾಷ್ಟ್ರಗಳಲ್ಲಿ 161 ನೇ ಸ್ಥಾನದಲ್ಲಿದ್ದು, ಭಯೋತ್ಪಾದಕ ಕಾನೂನುಗಳ ಅಡಿಯಲ್ಲಿ ಪತ್ರಕರ್ತರ ಮೇಲೆ ನಡೆಸಲಾಗುವ ಇಂತಹ ದಾಳಿಗಳು ಮತ್ತು ಕಿರುಕುಳಗಳು ಭಾರತದಲ್ಲಿ ಪತ್ರಿಕೋದ್ಯಮದ ಪಕ್ರಿಯೆಯನ್ನು ಇನ್ನಷ್ಟು ಅನಿಶ್ಚಿತಗೊಳಿಸುತ್ತವೆ ಎಂದು ಪಿಯುಸಿಎಲ್ ಹೇಳಿದ್ದು, ಇಂತಹ ದಾಳಿಯು “ಭಾರತವು ‘ಪ್ರಜಾಪ್ರಭುತ್ವಗಳ ತಾಯಿ’ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ” ಎಂಬ ಸರ್ಕಾರದ ಹೇಳಿಕೆಯನ್ನು ವ್ಯಂಗ್ಯಕ್ಕೀಡು ಮಾಡುತ್ತದೆ ಎಂದು ಪಿಯುಸಿಎಲ್ ತಿಳಿಸಿದೆ.
ಇದನ್ನೂ ಓದಿ: ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಮೇಲೆ ದಾಳಿ : ಜಾಗೃತ ನಾಗರಿಕರು ಕರ್ನಾಟಕ ಆಕ್ರೋಶ
ಸೋಮವಾರ ನಡೆದ ದಾಳಿಯಲ್ಲಿ ಪ್ರಮುಖವಾಗಿ ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ, ಎನ್‌ಡಿಟಿವಿಯ ಮಾಜಿ ವ್ಯವಸ್ಥಾಪಕ ಸಂಪಾದಕ ಔನಿಂದ್ಯೋ ಚಕ್ರವರ್ತಿ, ಹಿರಿಯ ಪತ್ರಕರ್ತ ಮತ್ತು ಸಂಶೋಧಕ ಪರಂಜಯ್ ಗುಹಾ ಠಾಕುರ್ತಾ, ಹಿರಿಯ ಪತ್ರಕರ್ತರಾದ ಊರ್ಮಿಳೇಶ್, ಅಭಿಸಾರ್ ಶರ್ಮಾ, ಭಾಷಾ ಸಿಂಗ್, ಸುಬೋಧ್ ವರ್ಮಾ, ಅನುರಾಧ ರಾಮನ್, ಅದಿತಿ ನಿಗಮ್, ಪ್ರಾಂಜಲ್, ಸುಮೇಧಾ ಪಾಲ್ ಮತ್ತು ಮುಕುಂದ್ ಝಾ ಮತ್ತು ಸೇರಿದಂತೆ ಹಲವರ ಮನೆ ಕಚೇರಿಗಳನ್ನು ಪೊಲೀಸರು ತನಿಖೆ ನಡೆಸಿದ್ದಾರೆ.
ಅಷ್ಟೆ ಅಲ್ಲದೆ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಸಂಜಯ್ ರಾಜೌರಾ, ಇತಿಹಾಸಕಾರ ಸೊಹೈಲ್ ಹಶ್ಮಿ, ಲೇಖಕಿ ಗೀತಾ ಹರಿಹರನ್, ದೆಹಲಿ ಸೈನ್ಸ್ ಫೋರಂನ ರಘುನಂದನ್, ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಆಫ್ ಇಂಡಿಯಾದ ಕಿರಣ್ ಚಂದ್ರ ಅವರ ಸಾಧನಗಳನ್ನು ಪೊಲೀಸರು ಶೋಧಿಸಿ ವಶಪಡಿಸಿಕೊಂಡಿದ್ದಾರೆ.
ಜೊತೆಗೆ ಮುಂಬೈನಲ್ಲಿರುವ ಸಬ್‌ರಂಗ್ ಇಂಡಿಯಾದ ತೀಸ್ತಾ ಸೆಟಲ್ವಾಡ್ ಮತ್ತು ಜಾವೇದ್ ಆನಂದ್ ಅವರ ಕಚೇರಿ ಮತ್ತು ನಿವಾಸದ ಮೇಲೂ ದೆಹಲಿ ಪೊಲೀಸರು ದಾಳಿ ನಡೆಸಿದ್ದು, ಸಿಪಿಐ(ಎಂ) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರ ಮನೆ ಮೇಲೂ ದಾಳಿ ನಡೆಸಿ ಅವರ ಬಳಿ ಇದ್ದ ಅತಿಥಿಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ವಿಡಿಯೊ ನೋಡಿ: ಕೊಬ್ಬರಿಗೆ ಕನಿಷ್ಟ ಬೆಂಬಲ ಬೆಲೆ ಘೋಷಣೆಗೆ ತೆಂಗು ಬೆಳೆಗಾರರ ಆಗ್ರಹ Janashakthi Media