ಬೆಂಗಳೂರು : ವಿದ್ಯಾರ್ಥಿ ಜೀವನದ ಎರಡನೇ ಅತೀ ಮಹತ್ವದ ಘಟ್ಟ ಎನಿಸಿದ ದ್ವಿತೀಯ ಪಿಯುಸಿ ಪರೀಕ್ಷೆಯು ನಾಳೆಯಿಂದ ರಾಜ್ಯಾದ್ಯಂತ ಆರಂಭವಾಗಲಿದೆ.
ಮಾರ್ಚ್ 29ರ ವರೆಗೂ ವಿವಿಧ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ 65 ಕೇಂದ್ರಗಳನ್ನು ತೆರೆಯುವ ಮೂಲಕ ಪೆರೀಕ್ಷೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಜತೆಗೆ ಪೊಲೀಸ್ ಬಂದೋಬಸ್ತಿಗೂ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳನ್ನು ಬಂದ್ ಮಾಡಲಾಗುತ್ತದೆ. ಸೈಬರ್ ಸೆಂಟರ್, ಟ್ಯೂಷನ್ ಕೇಂದ್ರಗಳು, ಗೇಮ್ಸ್ ಕೇಂದ್ರಗಳ ಮೇಲೂ ವಿಶೇಷ ನಿಗಾ ಇಡಲಾಗುತ್ತದೆ. ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿದ್ದವರನ್ನು ವಶಕ್ಕೆ ಪಡೆಯುವುದು ಸೇರಿದಂತೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮೊಬೈಲ್ ಪೋನ್, ಸ್ಮಾರ್ಟ್ ವಾಚ್, ಹಿಯರ್ ಪೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿಸಲಾಗಿದೆ. ವಿದ್ಯಾರ್ಥಿಗಳು ಸಮಯ ನೋಡಿಕೊಳ್ಳಲು ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರದ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪರೀಕ್ಷಾ ಸಿದ್ದತೆ :
ಒಟ್ಟು ಪರೀಕ್ಷಾ ಕೇಂದ್ರಗಳ ಸಂಖ್ಯೆ – 1109
ಪರೀಕ್ಷೆ ಬರೆಯಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ – 7,26,224
ಪರೀಕ್ಷೆ ಬರೆಯಲಿರುವ ಒಟ್ಟು ವಿದ್ಯಾರ್ಥಿನಿಯರ ಸಂಖ್ಯೆ – 3,25,053
ಪರೀಕ್ಷೆ ಬರೆಯಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ – 3,47,038
ಪರೀಕ್ಷೆ ಬರೆಯಲಿರುವ ಖಾಸಗಿ ವಿದ್ಯಾರ್ಥಿಗಳ ಸಂಖ್ಯೆ – 25,847
ಪರೀಕ್ಷೆ ಬರೆಯಲಿರುವ ಪುನರಾವರ್ತಿತ ವಿದ್ಯಾರ್ಥಿಗಳು – 70,586
ವಿದ್ಯಾರ್ಥಿಗಳಿಗೆ ಸಲಹೆ ಏನು :
ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳ ಸಾಗಣೆ ಮತ್ತು ಸಂಗ್ರಹಣೆ, ಮೌಲ್ಯಮಾಪನ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗುತ್ತದೆ. ಮೌಲ್ಯಮಾಪನ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ನಿಗಾ ವಹಿಸಲಾಗುತ್ತದೆ. ಪರೀಕ್ಷಾ ಕರ್ತವ್ಯದಲ್ಲಿ ನಿರತರಾಗುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮೊಬೈಲ್ ಪೋನ್ ಬಳಕೆ ನಿಷೇಧಿಸಲಾಗಿದೆ.
ಈ ಬಾರಿ ಪ್ರಶ್ನೆಪತ್ರಿಕೆಯ ಸ್ವರೂಪದಲ್ಲಿ ಬದಲಾವಣೆ ಮಾಡಲಾಗಿದ್ದು, ಒಂದು ಅಂಕದ 20 ಪ್ರಶ್ನೆಗಳು ಇರುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಅತಂಕ ಪಡದೆ ಧೈರ್ಯದಿಂದ ಪರೀಕ್ಷೆ ಬರೆಯುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದೆ.
ಈ ಬಾರಿಯೂ ಹಿಜಾಬ್‌ಗಿಲ್ಲ ಅವಕಾಶ :
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕೇಂದ್ರಗಳಿಗೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ ಎಂದು ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಆದರೆ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷಾ ಸಮಯದಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ವಿವಿಧ ಕಾಲೇಜುಗಳ ಪ್ರಾಂಶುಪಾಲರ ಬಳಿ ವಿನಂತಿಸಿಕೊಂಡಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪಿಯು ಕಾಲೇಜು ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ಇಂತಹ ಮನವಿಗಳನ್ನು ಪರಿಗಣಿಸದಂತೆ ಸೂಚನೆಗಳನ್ನು ನೀಡಿದೆ. ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ಕೋರಿದ್ದಾರೆ. ಮತ್ತೊಂದೆಡೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ ಸಿ ನಾಗೇಶ್ ಹಿಜಾಬ್ ಕುರಿತ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಪರೀಕ್ಷೆಯ ಸಮಯದಲ್ಲಿ ಹಿಜಾಬ್ ಅನ್ನು ಅನುಮತಿಸುವ ಪ್ರಶ್ನೆಯೇ ಇಲ್ಲ. ಈ ಹಿಜಾಬ್ ಕಾರಣದಿಂದ ಯಾವುದೇ ವಿದ್ಯಾರ್ಥಿಯು ಪರೀಕ್ಷೆಗಳನ್ನು ಬಿಟ್ಟುಬಿಡುತ್ತಾರೆ ಎಂದು ನಾವು ಭಾವಿಸುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ ನಾಗೇಶ್ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಯೋಚಿಸಬೇಕಿದ್ದ ಸರ್ಕಾರ ಪದೇ ಪದೇ ಹಿಜಾಬ್ ವಿಚಾರವನ್ನು ಮುಂದೆ ಮಾಡಿ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುತ್ತಿರುವುದಲ್ಲದೆ ಕಳೆದೊಂದು ವರ್ಷದಿಂದ ಇದೇ ವಿಚಾರವಾಗಿ ಒಂದರ್ಥದಲ್ಲಿ ವಿದ್ಯಾರ್ಥಿನಿಯರಿಗೆ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತಿದೆ ಎಂದೇ ಹೇಳಲಾಗುತ್ತಿದೆ. ಮುಂದಾದರೂ ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಬಹುದಾ ಎಂಬುದನ್ನು ಕಾದುನೋಡಬೇಕಾಗಿದೆ.
ಇದನ್ನೂ ಓದಿ : ದ್ವಿತೀಯ ಪಿಯುಸಿ ಪರೀಕ್ಷೆ ; ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿದ ಬಿಎಂಟಿಸಿ
20 ಪ್ರಶ್ನೆಗಳಲ್ಲಿ 12 ಬಹುಆಯ್ಕೆ ಪ್ರಶ್ನೆಗಳು :
ಈ ಹಿಂದಿನ ವರ್ಷಗಳಲ್ಲಿ ಈ ಮಾದರಿಯ 5 ಅಥವಾ 6 ಪ್ರಶ್ನೆಗಳನ್ನು ಮಾತ್ರ ಕೇಳಲಾಗುತ್ತಿತ್ತು. ಆದರೆ ಈ ಸಲ ಅದನ್ನು ಹೆಚ್ಚಿಸಲಾಗಿದೆ. ಈ 20 ಪ್ರಶ್ನೆಗಳಲ್ಲಿ 12 ಬಹುಆಯ್ಕೆ ಪ್ರಶ್ನೆಗಳು, ಕೆಲವು ಬಿಟ್ಟಸ್ಥಳ ತುಂಬಿರಿ ಮತ್ತು ಹೊಂದಿಸಿ ಬರೆಯಿರಿ ಇತ್ಯಾದಿ ಮಾದರಿಯಲ್ಲಿ ಇರಲಿವೆ. ಈ ಬದಲಾವಣೆ ಹೊರತಾಗಿ ಇನ್ನುಳಿದಂತೆ ಪ್ರಶ್ನೆ ಪತ್ರಿಕೆ ಮಾದರಿಯು ಮೊದಲಿನಂತೆಯೇ ಉಳಿಯುತ್ತದೆ ಎಂದು ಕೆಎಸ್‌ಇಎಬಿಯ ನಿರ್ದೇಶಕ ಗೋಪಾಲಕೃಷ್ಣ ಹೇಳಿದ್ದಾರೆ.
ಅನುತ್ತೀರ್ಣಗೊಳ್ಳುವ ಭಯವಿಲ್ಲ :
ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣರಾಗುವಂತೆ ಮಾಡುವ ಉದ್ದೇಶದಿಂದ ಪ್ರಶ್ನೆಪತ್ರಿಕೆ ಮಾದರಿಯನ್ನು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ. ಬಹು ಆಯ್ಕೆ ಪ್ರಶ್ನೆಗಳಿದ್ದರೆ ಹೆಚ್ಚು ಅಂಕ ತೆಗೆಯಲು ಸಾಧ್ಯವಾಗುತ್ತದೆ. ಆ ಕಾರಣದಿಂದ ಈ ಮಾದರಿಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ವಿವಿಧ ವಿಭಾಗದಲ್ಲಿ ಕ್ರಮವಾಗಿ 2 ಅಂಕದ 11 ಪ್ರಶ್ನೆಗಳನ್ನು ನೀಡಿದೆ. 3 ಅಂಕದ 4 ಪ್ರಶ್ನೆಗಳು, 4 ಅಂಕದ 6 ಪ್ರಶ್ನೆಗಳು, 5 ಮತ್ತು 6 ಅಂಕದ 2 ಪ್ರಶ್ನೆಗಳನ್ನು ನೀಡಲಾಗಿದೆ. ಒಟ್ಟಾರೆ 80 ಅಂಕಗಳಿಗೆ ವಿಸ್ತ್ರತವಾಗಿ ವಾಕ್ಯ ರೂಪದಲ್ಲಿ ಉತ್ತರಿಸುವ ಪ್ರಶ್ನೆಗಳಿವೆ. ಇದರಲ್ಲಿ ಸಂದರ್ಭ ಸೂಚಿಸಿ ಬರೆಯುವುದು, ಸ್ವಾರಸ್ಯ ರೂಪದಲ್ಲಿ ಉತ್ತರ, ಪದ್ಯದ ಭಾವಾರ್ಥ, ಭಾಷಾಭ್ಯಾಸ, ಪ್ರಬಂಧ, ಪತ್ರಲೇಖನ ಮತ್ತು ಗಾದೆ ಮಾತು ವಿಸ್ತರಿಸಿ ಬರೆಯುವ ಪ್ರಶ್ನೆಗಳನ್ನು ನೀಡಲಿದೆ.
ಹೊಸ ಮಾದರಿಯ ಪ್ರಶ್ನೆಪತ್ರಿಕೆ ಬಿಡುಗಡೆ :
ಅಧಿಕೃತ ಜಾಲತಾಣದಿಂದ ಪ್ರಶ್ನೆ ಪತ್ರಿಕೆಯನ್ನೂ ಸಹ ಡೌನ್ಲೋಡ್ ಮಾಡಿಕೊಳ್ಳಬಹುದು. ಅಲ್ಲಿ ಈ ಬಾರಿಯ ಹೊಸ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಗಿದೆ. ಆ ಕಾರಣದಿಂದ ನೀವೂ ಹೆಚ್ಚಿನ ಅಭ್ಯಾಸವನ್ನು ಮಾಡುವುದಕ್ಕೆ ಇದು ಸಹಾಯವಾಗಲಿದೆ. ಈ ಸಲ 6 ಲಕ್ಷ ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆಯುತ್ತಿದ್ದಾರೆ. ಈ ಹಿಂದಿನಿಂದಲೂ ಪರೀಕ್ಷೆ ಬರೆದವರಲ್ಲಿ ಉತ್ತೀರ್ಣರಾಗುವವರ ಸಂಖ್ಯೆ ಕಡಿಮೆ ಇದೆ. ಪ್ರತಿ ವರ್ಷ ದ್ವಿತೀಯ ಪಿಯುಸಿಯಲ್ಲಿ ಪಾಸಾದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 60ಕ್ಕಿಂತ ಮೀರುತ್ತಿಲ್ಲ. ಹೀಗಾಗಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ಕಪಕ್ಕದ ಕೆಲ ರಾಜ್ಯಗಳಲ್ಲಿ ಫಲಿತಾಂಶ ಸುಧಾರಿಸಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇದರಿಂದ ರಾಜ್ಯದಲ್ಲಿಯೂ ಇಂತದ್ದೊಂದು ಪ್ರಯತ್ನಕ್ಕೆ ಈ ಸಲ ಮುಂದಾಗಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ದ್ವಿತೀಯ ಪಿಯುಸಿ ಪರೀಕ್ಷೆ ಈಗ ಮತ್ತಷ್ಟು ಸುಲಭ!
ಕೃಪಾಂಕವೂ ಉಂಟು :
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ. 5ರಷ್ಟು ಕೃಪಾಂಕ ನೀಡಲಾಗುತ್ತಿದೆ. ಈ ಕೃಪಾಂಕವನ್ನು ಕೋವಿಡ್ ಕಾರಣದಿಂದ ಕಲಿಕೆ ಮೇಲೆ ಉಂಟಾಗಿರುವ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರಬಂದಿಲ್ಲ. ಶೈಕ್ಷಣಿಕವಾಗಿ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ 2023ರಲ್ಲಿಯೂ ಕೃಪಾಂಕ ನೀಡಲು ನಿರ್ಧಾರ ಮಾಡಿದೆ.
600 ಅಂಕಗಳಿಗೆ ಕನಿಷ್ಠ 210 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಎರಡು ವಿಷಯಗಳಲ್ಲಿ ಶೇಕಡ 5 ರಷ್ಟು ಅಂದರೆ ತಲಾ 5 ಅಂಕ ಸೇರಿ ಗರಿಷ್ಠ 10 ಅಂಕಗಳನ್ನು ಪಡೆಯಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಎಚ್ಚರವಿರಲಿ ಆದರೆ ಮಾಸ್ಕ್ ಕಡ್ಡಾಯವಿಲ್ಲ :
ಈ ಬಾರಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆಯುವುದು ಕಡ್ಡಾಯವಿಲ್ಲ ಎಂದು ತಿಳಿದುಬಂದಿದೆ. ಮಾಸ್ಕ್ ಕಡ್ಡಾಯಗೊಳಿಸುವುದು, ಬಿಡುವುದು ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು.
ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಲಭ್ಯ :
ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳ ಕೇಂದ್ರಗಳ ಹೊರತಾಗಿ ಬೇರೆ ಸ್ಥಳಗಳಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಸಂಚರಿಸಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಲಭ್ಯವಾಗಲಿದೆ. ಈ ಹಿಂದೆಯೇ ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿಯು ಉಚಿತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ದಿನಗಳಲ್ಲಿ ಉಚಿತ ಬಸ್ ಸೇವೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಿತ್ತು.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಬಸ್ ಸೇವೆ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ಪರೀಕ್ಷಾ ದಿನ ಸಂಚರಿಸುವಾಗಿ ಬಸ್ ನಿರ್ವಾಹಕರಿಗೆ ಪರೀಕ್ಷೆಯ ಪ್ರವೇಶ ಪತ್ರ ತೋರಿಸುವುದು ಕಡ್ಡಾಯ ಮಾಡಲಾಗಿದೆ. ಇನ್ನೂ ಈ ಕುರಿತಂತೆ ಚಾಲಕ ಮತ್ತು ನಿರ್ವಾಹಕರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ನಿಗಮ ಸಲಹೆ ಸೂಚನೆಯನ್ನು ನೀಡಲಾಗಿದೆ.