ಬೆಂಗಳೂರು: ರಾಜ್ಯ ಸರಕಾರವು ಬಿಜೆಪಿ ನಾಯಕ ಹಾಗೂ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷ ಡಾ.ಬಿ.ಡಿ.ಭೂಕಾಂತ್ ರಿಗೆ ಕಲ್ಪಿಸಿದ್ದ ರಾಜ್ಯ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವ ಸೌಲಭ್ಯವನ್ನು ಹಿಂಪಡೆದು ಆದೇಶಿಸಲಾಗಿದೆ.
ರಾಜ್ಯ ಸರಕಾರವು ಇತ್ತೀಚೆಗಷ್ಟೇ 54 ನಿಗಮ, ಮಂಡಳಿಗಳ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವ ಸೌಲಭ್ಯಗಳನ್ನು ಒದಗಿಸಿ ಹೊರಡಿಸಿತ್ತು. ಇದರಲ್ಲಿ, ಶಿವಮೊಗ್ಗ ಜಿಲ್ಲೆಯ ಬಿಜೆಪಿ ನಾಯಕ ಡಾ.ಬಿ.ಡಿ.ಭೂಕಾಂತ್ ಹೆಸರು ಕಾಣಿಸಿಕೊಂಡಿದ್ದು, ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಭೂಕಾಂತ್ ಕಾಂಗ್ರೆಸ್ ಪಕ್ಷದವರಲ್ಲ. ಅವರು ಸರಕಾರದ ಯಾವುದೆ ನಿಗಮ, ಮಂಡಳಿಗೆ ಅಧ್ಯಕ್ಷರಲ್ಲ. ಬದಲಾಗಿ, ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಕ್ಕೆ ಅಧ್ಯಕ್ಷರಾಗಿದ್ದಾರೆ. ಮತ್ತೆ ಯಾವ ಕಾರಣಕ್ಕೆ ಅವರಿಗೆ ರಾಜ್ಯ ಸಚಿವ ಸ್ಥಾನಮಾನದ ಸೌಲಭ್ಯ ಕಲ್ಪಿಸಲಾಯಿತು ಎಂದು ಕಾಂಗ್ರೆಸ್ನಲ್ಲಿ ಅಸಮಾಧಾನ ಭುಗಿಲೆದ್ದಿತ್ತು.
ಈ ಸಂಬಂಧ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೇರಿದಂತೆ ಪ್ರಮುಖ ನಾಯಕರು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೆ, ರಾಜ್ಯ ಸರಕಾರವು ಭೂಕಾಂತ್ ಅವರಿಗೆ ನೀಡಿದ್ದ ಸೌಲಭ್ಯವನ್ನು ಹಿಂಪಡೆದು ಆದೇಶ ಹೊರಡಿಸಿದೆ.
ಇದನ್ನೂ ನೋಡಿ: ಮುಚ್ಚುವ ಅಂಚಿನಿಂದ.. ನೂರರ ಸಂಭ್ರಮದವರೆಗೆ – ಸರಕಾರಿ ಶಾಲೆಯ ಕಥೆ Janashakthi Media
