40% ಲಂಚ ಪ್ರಕರಣ: ತನಿಖೆಗೆ ನ್ಯಾ.ನಾಗಮೋಹನ್‍ದಾಸ್ ನೇತೃತ್ವದ ಸಮಿತಿ‌ ರಚನೆ

ಬೆಂಗಳೂರು: ಬಿಜೆಪಿ ಸರಕಾರದ ಅವಧಿಯಲ್ಲಾದ ಕಾಮಗಾರಿಗಳು,ಟೆಂಡರ್, ಪ್ಯಾಕೇಜ್ ಗಳು,ಪುನರ್ ಅಂದಾಜು, ಹೆಚ್ಚುವರಿ ಅಂದಾಜು, ಬಾಕಿ ಬಿಡುಗಡೆ ಬಗ್ಗೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾಡಿದ ಆರೋಪಗಳ ತನಿಖೆಗೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.‌

ಈ ಸಮಿತಿಯು ಸ್ಥಳ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ, ವಿವರವಾದ ತನಿಖೆ ನಡೆಸಿ, ಲೋಪದೋಷಗಳ ಮಾಹಿತಿ ಹಾಗೂ ಅದಕ್ಕೆ ಕಾರಣರಾದ ಆರೋಪಿಗಳನ್ನು ಪತ್ತೆ ಮಾಡಿ ಸಂಪೂರ್ಣ ವರದಿಯನ್ನು ಸೂಕ್ತ ಶಿಫಾರಸ್ಸಿನೊಂದಿಗೆ 30 ದಿನಗಳ ಒಳಗೆ ಸಲ್ಲಿಸಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ತನಿಖಾ ಸಮಿತಿಗೆ ಸಂಬಂಧಪಟ್ಟಂತೆ ಅಗತ್ಯವಾದ ಕಡತಗಳು, ದಾಖಲಾತಿಗಳನ್ನು ಆಯಾ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಒದಗಿಸಬೇಕು. ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಖುದ್ದು ಹಾಜರಿದ್ದು ತನಿಖಾ ಸಮಿತಿಗೆ ಸಂಪೂರ್ಣ ಸಹಕಾರ ನೀಡಬೇಕು. ಸಮಿತಿಗೆ ಅಗತ್ಯವಿದ್ದರೆ, ಅಧ್ಯಕ್ಷರ ಕೋರಿಕೆಯಂತೆ ಗುಣಮಟ್ಟ ಪರೀಕ್ಷೆಗೆ ನೋಂದಾಯಿತ 3ನೇ ಸ್ವತಂತ್ರ ಸಂಸ್ಥೆಯ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದೂ ಆದೇಶದಲ್ಲಿ ಲೋಕೋಪಯೋಗಿ ಇಲಾಖೆ ತಿಳಿಸಿದೆ. ತನಿಖೆಗೆ ಸಂಬಂಧಿಸಿದಂತೆ ಸಹಾಯಕ್ಕೆ ಅಗತ್ಯವಿರುವ ತಾಂತ್ರಿಕ ಸಲಹೆಗಾರರು, ಆರ್ಥಿಕ ಸಲಹೆಗಾರರು ಮತ್ತು ಆಡಳಿತಾತ್ಮಕ ಸಲಹೆಗಾರರನ್ನು ತೆಗೆದುಕೊಳ್ಳಬಹುದು ಎಂದೂ ಆದೇಶದಲ್ಲಿದೆ.

ರಾಜ್ಯದಲ್ಲಿ ಪ್ರಮುಖ ಕಾಮಗಾರಿಗಳನ್ನು ನಡೆಸುವ ಇಲಾಖೆಯಲ್ಲಿ ನಡೆಯುತ್ತಿರುವ ಪ್ಯಾಕೇಜ್‌ ಪದ್ಧತಿ, ಬಾಕಿ ಮೊತ್ತ ಬಿಡುಗಡೆ ಮತ್ತು ಟೆಂಡರ್ ಪ್ರಕ್ರಿಯೆ ಇತ್ಯಾದಿಗಳಲ್ಲಿ ಶೇ 40ಕ್ಕಿಂತಲೂ ಹೆಚ್ಚಿನ ಮೊತ್ತದ ಲಂಚ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಡಿ. ಕೆಂಪಣ್ಣ ಅವರು 2021ರ ಜುಲೈ 6ರಂದು ಪ್ರಧಾನಿ ನರೇಂದ್ರ ಮೋದಿಗೆ ಮತ್ತು 2021ರ ಆಗಸ್ಟ್‌ 30, 2022ರ ಮಾರ್ಚ್‌ 11 ಮತ್ತು ಏಪ್ರಿಲ್‌ 25ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದರು.

ಕಾಮಗಾರಿಗಳನ್ನು ಆರಂಭಿಸುವ ಮೊದಲೇ ಶೇ 25ರಿಂದ ಶೇ 30ರವರೆಗೆ ಜನಪ್ರತಿನಿಧಿಗಳಿಗೆ ಮತ್ತು ಇತರರಿಗೆ ಲಂಚ ನೀಡಬೇಕಾದ ಸ್ಥಿತಿಯ ಬಗ್ಗೆ, ಕಾಮಗಾರಿ ಪೂರ್ಣಗೊಂಡ ಬಳಿಕ ಬಾಕಿ ಬಿಲ್‌ ತೀರುವಳಿ ಮಾಡಲು ಹಣ ಭರವಸೆ ಪತ್ರ (ಎಲ್‌ಒಸಿ) ಬಿಡುಗಡೆಗೆ ಶೇ 5ರಿಂದ ಶೇ6ರವರೆಗೆ, ಹೊರರಾಜ್ಯದ ಗುತ್ತಿಗೆದಾರರಿಗೆ ಪ್ಯಾಕೇಜ್‌ ಪದ್ದತಿಯಿಂದ ಅನುಕೂಲ ಮಾಡಲಾಗುತ್ತಿರುವ ಬಗ್ಗೆ ಮತ್ತು ಈ ಹಿಂದಿನ ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್‌ ಕೇಳುತ್ತಿರುವ ಬಗ್ಗೆ ಆ ದೂರುಗಳಲ್ಲಿ, ಉಲ್ಲೇಖಿಸಿದ್ದರು. ಆದರೆ, ಈ ಗಂಭೀರ ಆರೋಪಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ತನಿಖೆ ನಡೆದಿಲ್ಲ. ಇದೀಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸಬೇಕಿದೆ ಎಂಬ ಕಾರಣಕ್ಕೆ ತನಿಖಾ ಸಮಿತಿ ರಚಿಸಲಾಗಿದೆ ಎಂದೂ ಆದೇಶದ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

ಯಾವೆಲ್ಲ ಅಂಶಗಳ ತನಿಖೆ?

* ಯೋಜನೆ ಕಾಮಗಾರಿಗಳಿಗೆ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆಯೇ? * ಅನುಷ್ಠಾನಗೊಳಿಸಿದ ಕಾಮಗಾರಿ ಯೋಜನೆಗಳ ಗುಣಮಟ್ಟ

* ಕಾಮಗಾರಿಗಳ ಅಂದಾಜುಗಳನ್ನು ಪ್ರಚಲಿತ ಅನುಸೂಚಿ ದರಗಳ(ಎಸ್ಆರ್‌) ಅನುಸಾರ ತಯಾರಿಸಲಾಗಿದೆಯೇ?

* ಕಾಮಗಾರಿಗಳ ಅಂದಾಜಿನಲ್ಲಿರುವ ಪ್ರಮಾಣ ವಾಸ್ತವಿಕವಾಗಿದೆಯೇ? ಕೃತಕವಾಗಿ ಹೆಚ್ಚಿಸಲಾಗಿದೆಯೇ? ಹೆಚ್ಚಿಸಿದ್ದರೆ ಅವುಗಳ ಪ್ರಮಾಣ ಮತ್ತು ಹಣಕಾಸಿನ ಬದ್ಧತೆಯ ಜೊತೆಗೆ ಯಾವ ಹಂತದಲ್ಲಿದೆ ಎಂಬುದನ್ನು ಪರೀಕ್ಷಿಸುವುದು

* ಕಾಮಗಾರಿಗಳ ಅನುಷ್ಠಾನದ ಸಂದರ್ಭದಲ್ಲಿ ಉಂಟಾಗಿರುವ ಹೆಚ್ಚುವರಿ ವ್ಯತ್ಯಾಸದ ಅನಿವಾರ್ಯ ಮತ್ತು ಅಗತ್ಯ. ಅನಿವಾರ್ಯವಾಗಿದ್ದರೆ ಮೂಲ ಅಂದಾಜಿನಲ್ಲಿ ಕೈಬಿಡಲು ಕಾರಣಗಳು ಮತ್ತು ಅವುಗಳಿಗೆ ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿರುವ ಬಗ್ಗೆ.

* ಯಾವುದಾದರೂ ಕಾಮಗಾರಿಗಳನ್ನು ನಿರ್ವಹಿಸದೇ ಬಿಲ್ಮಾಡಲಾಗಿದೆಯೇ? ಅನುಷ್ಠಾನದ ಕಾಮಗಾರಿಗಳ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಬಿಲ್ಪಾವತಿಸಲಾಗಿದೆಯೇ?

* ಕಾಮಗಾರಿಗಳ ಟೆಂಡರ್ಗಳನ್ನು ಕರೆಯುವಾಗ ಕೆಲವೇ ಗುತ್ತಿಗೆದಾರರಿಗೆ ಅನುಕೂಲ ಆಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತು ರೂಪಿಸಲಾಗಿತ್ತೇ?

* ‌ಕಾಮಗಾರಿಗಳ ಟೆಂಡರ್ಪ್ರಕ್ರಿಯೆ ಅನುಷ್ಠಾನ ಪ್ರಕ್ರಿಯೆಗಳಲ್ಲಿ ಉಂಟಾಗಿರಬಹುದಾದ ಇತರ ಯಾವುದಾದರೂ ಲೋಪದೋಷಗಳು

 

 

Donate Janashakthi Media

Leave a Reply

Your email address will not be published. Required fields are marked *