ಬೆಂಗಳೂರು: ಖಾಸಗಿ ಶಾಲೆಯ ಪ್ರತಿದಿನದ ಅಸೆಂಬ್ಲಿಗಳಲ್ಲಿ ‘ನಾಡ ಗೀತೆ ಹಾಡದಂತೆ’ ಹೊರಡಿಸಿದ್ದ ಆದೇಶದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದು, ‘ಮುದ್ರಣ ದೋಷ’ದಿಂದ ಆದೇಶ ತಪ್ಪಾಗಿದೆ ಎಂದು ಹೇಳಿದ್ದಾರೆ. ಎಲ್ಲಾ ಶಾಲೆಗಳಲ್ಲಿಯೂ ನಾಡಗೀತೆ ಹಾಡಬೇಕು ಎಂದು ಬುಧವಾರ ಹೊಸ ಆದೇಶದ ಮೂಲಕ ಇಲಾಖೆ ಖಚಿತಪಡಿಸಿದೆ.
ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು, ಫೆಬ್ರವರಿ 16 ರ ಮೊದಲ ಸರ್ಕಾರಿ ಆದೇಶದಲ್ಲಿ ಕುವೆಂಪು ಅವರು ಬರೆದಿರುವ ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆಯನ್ನು ಖಾಸಗಿ ಶಾಲೆಗಳ ಅಸೆಂಬ್ಲಿಗಳಲ್ಲಿ ಸೇರಿಸುವುದನ್ನು ಹೊರತುಪಡಿಸಲಾಗಿದೆ ಎಂದು ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: ದೆಹಲಿ ಚಲೋ ಹೋರಾಟ | ಪೊಲೀಸರ ಮತ್ತು ರೈತರ ನಡುವೆ ಘರ್ಷಣೆ; 21 ವರ್ಷದ ರೈತ ಸಾವು
ಈ ವೇಳೆ ಮಾತನಾಡಿದ್ದ ಅವರು, “ಈ ಆದೇಶದ ಹಿಂದಿನ ಉದ್ದೇಶವೇನು? ಈ ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲವೇ” ಎಂದು ಪ್ರಶ್ನಿಸಿದ್ದರು. ಇದೇನು ಹುಚ್ಚುತನ? ಅಧಿಕಾರಿಗಳು ಯಾಕೆ ಈ ರೀತಿ ಆದೇಶ ಹೊರಡಿಸುತ್ತಿದ್ದಾರೆ…? ಈ ಬಗ್ಗೆ ಸಚಿವ ತಂಗಡಗಿ ಅವರಿಗೆ ವಿವರಿಸಿದ್ದು, ಸರಿಪಡಿಸುವುದಾಗಿ ಹೇಳಿದ್ದಾರೆ. ಅವರಿಗೆ ಅಧಿಕಾರಿಗಳ ಮೇಲೆ ಯಾಕೆ ಹಿಡಿತವಿಲ್ಲ ಎಂದು ಅವರು ಕೇಳಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಎರಡು ದಿನಗಳ ಹಿಂದೆಯಷ್ಟೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ವಸತಿ ಶಾಲೆಗಳಲ್ಲಿ ಕುವೆಂಪು ಅವರ ಘೋಷವಾಕ್ಯ ಬದಲಿಸಲು ಯತ್ನಿಸಿದ್ದು, ಇದೀಗ ಸರ್ಕಾರ ಮತ್ತೆ ಕವಿಗೆ ಅವಮಾನ ಮಾಡಲು ಯತ್ನಿಸುತ್ತಿದೆ ಎಂದು ಪ್ರತಿಪಾದಿಸಿದ್ದು, ರಾಜ್ಯ ಸರ್ಕಾರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯ ಹಿರಿಯ ಶಾಸಕ ಸುರೇಶ್ ಕುಮಾರ್ ಮಾತನಾಡಿ, ಕನ್ನಡ ರಕ್ಷಣೆ ಮಾಡುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ತವ್ಯ. “ಇಲಾಖೆಯು ಇಂತಹ ಆದೇಶಗಳನ್ನು ಯಾಕೆ ಹೊರಡಿಸುತ್ತದೆ” ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಲೋಕಸಭೆಗೆ ಇಂಡಿಯಾ ಮೈತ್ರಿ | ದೆಹಲಿ ಮಾತುಕತೆ ಫಲಪ್ರದ; ಎಎಪಿಗೆ 4, ಕಾಂಗ್ರೆಸ್‌ಗೆ 3
ಇದಕ್ಕೆ ಪ್ರತಿಪಾದಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇದೊಂದು ಸಣ್ಣ ಲೋಪವಾಗಿದ್ದು, ಅದನ್ನು ಸರಿಪಡಿಸಲಾಗಿದೆ. ಬಿಜೆಪಿ ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಬಿಜೆಪಿ ಸದಸ್ಯರು ಖಂಡಿಸಿದ್ದಾರೆ.
ಮೂಲ ಟಿಪ್ಪಣಿಯಲ್ಲಿ ಎಲ್ಲ ಶಾಲೆಗಳು ಎಂದು ನಮೂದಿಸಿದ್ದರೂ ಸರ್ಕಾರಿ ಆದೇಶವನ್ನು ಸಿದ್ಧಪಡಿಸುವಾಗ ಅದು ಬದಲಾಗಿದ್ದು ಗೊಂದಲಕ್ಕೆ ಕಾರಣವಾಗಿದೆ ಎಂದು ಸಚಿವ ತಂಗಡಗಿ ಹೇಳಿದ್ದಾರೆ. “ಇದು ಮುದ್ರಣ ದೋಷ. ಅದನ್ನು ಸರಿಪಡಿಸಿದ್ದೇವೆ” ಎಂದು ಹೇಳಿದ್ದಾರೆ.
“ಇದರಲ್ಲಿ ಲೋಪ ಎಸಗಿದ್ದು, ಆದೇಶ ಪ್ರತಿ ಸಿದ್ಧಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ. ಇಲಾಖೆ ಹೊರಡಿಸಿದ ಇತ್ತೀಚಿನ ಸರ್ಕಾರಿ ಆದೇಶದಲ್ಲಿ, ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಸೇರಿದಂತೆ ಎಲ್ಲಾ ಶಾಲೆಗಳ ಅಸೆಂಬ್ಲಿಗಳಲ್ಲಿ ನಾಡಗೀತೆ ಹಾಡುವಂತೆ ಆದೇಶಿಸಲಾಗಿದೆ.
ವಿಡಿಯೊ ನೋಡಿ: ‘ಮಂಡ್ಯ ನೆಲಕ್ಕೆ ಕಿವಿಗೊಟ್ಟು ಆಲಿಸಿದಾಗ…’ – ಹಿರಿಯ ಸಾಹಿತಿ ದೇವನೂರ ಮಹಾದೇವ ಭಾಷಣ Janashakthi Media