– ಚುನಾವಣೆ ಆಯೋಗದ ನಿರ್ಧಾರದ ಬಗ್ಗೆ ನವೆಂಬರ್ 10ರ (ಚುನಾವಣೆ ಫಲಿತಾಂಶ) ನಂತರ ಮಾತಾಡುತ್ತೇನೆ
ಭೋಪಾಲ: ಸ್ಟಾರ್ ಪ್ರಚಾರಕ ಎಂಬುದು ಯಾವುದೇ ಹುದ್ದೆ ಅಥವಾ ಸ್ಥಾನಮಾನವಲ್ಲ ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲನಾಥ್ ಶನಿವಾರ ಹೇಳಿದ್ದಾರೆ.
ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಪ್ರಚಾರದ ವೇಳೆ ಮಾದರಿ ಸಂಹಿತೆಯನ್ನು ಪದೇ ಪದೆ ಉಲ್ಲಂಘಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ‘ಸ್ಟಾರ್ ಪ್ರಚಾರಕ’ ಸ್ಥಾನಮಾನವನ್ನು ಚುನಾವಣಾ ಆಯೋಗ ಶುಕ್ರವಾರ ರದ್ದುಪಡಿಸಿತ್ತು.
ಚುನಾವಣಾ ಆಯೋಗದ ಈ ನಿರ್ಧಾರದ ಕುರಿತು ಶನಿವಾರ ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿರುವ ಕಮಲನಾಥ್ ‘ಸ್ಟಾರ್ ಪ್ರಚಾರಕ ಎಂಬುದು ಹುದ್ದೆ ಅಥವಾ ಸ್ಥಾನಮಾನವಲ್ಲ. ಚುನಾವಣೆ ಆಯೋಗದ ನಿರ್ಧಾರದ ಬಗ್ಗೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ, ನವೆಂಬರ್ 10ರ (ಚುನಾವಣೆ ಫಲಿತಾಂಶ) ನಂತರ ನಾನು ಮಾತಾಡುತ್ತೇನೆ. ಕೊನೆಗೆ ಇಲ್ಲಿ ಜನರೇ ಅಂತಿಮ. ಅವರಿಗೆ ಎಲ್ಲವೂ ತಿಳಿದಿದೆ,’ ಎಂದು ಅವರು ಹೇಳಿದ್ದಾರೆ.
‘ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಅವರಿಗೆ ನೀಡಲಾದ ಸಲಹೆಯನ್ನು ಸಂಪೂರ್ಣ ಕಡೆಗಣಿಸಿದ್ದಕ್ಕಾಗಿ, ಕಮಲ್‌ನಾಥ್ ಅವರ ಸ್ಟಾರ್ ಪ್ರಚಾರಕ ಸ್ಥಾನಮಾನವನ್ನು ಈ ಉಪ ಚುನಾವಣೆಗೆ ಅನ್ವಯವಾಗುವಂತೆ ಈ ಕೂಡಲೇ ರದ್ದುಪಡಿಸಲಾಗಿದೆ,’ ಎಂದು ಆಯೋಗ ಶುಕ್ರವಾರ ಆದೇಶ ಹೊರಡಿಸಿತ್ತು.
‘ಸ್ಟಾರ್ ಪ್ರಚಾರಕರಾಗಿ ಕಮಲ್‌ನಾಥ್ ಅವರಿಗೆ ಯಾವುದೇ ಅನುಮತಿ ನೀಡುವುದಿಲ್ಲ. ಒಂದು ವೇಳೆ ಇಂದಿನಿಂದ ಕಮಲ್‌ನಾಥ್ ಅವರು ಯಾವುದೇ ಪ್ರಚಾರ ಕೈಗೊಂಡರೆ, ಪ್ರಯಾಣ, ವಾಸ್ತವ್ಯ ಮತ್ತು ಭೇಟಿಗೆ ಸಂಬಂಧಿಸಿದ ಸಂಪೂರ್ಣ ವೆಚ್ಚವನ್ನು ಸಂಬಂಧಿಸಿದ ಕ್ಷೇತ್ರದ ಅಭ್ಯರ್ಥಿಯೇ ಭರಿಸಬೇಕು,’ ಎಂದು ಆಯೋಗ ಹೇಳಿತ್ತು.
ಇನ್ನು ಚುನಾವಣಾ ಆಯೋಗದ ಆದೇಶದ ವಿರುದ್ಧ ಕಾಂಗ್ರೆಸ್ ಕೋರ್ಟ್ ಮೊರೆ ಹೋಗಿತ್ತು.