ಹಟ್ಟಿ : ಹಟ್ಟಿ ಚಿನ್ನದ ಗಣಿಯಲ್ಲಿನ ಸ್ಥಳೀಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಒತ್ತಾಯಿಸಿ, ಇಂದು ಹಟ್ಟಿ ಚಿನ್ನದ ಗಣಿಗೆ ಆಗಮಿಸಿದ್ದ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿಯವರಿಗೆ ಎಸ್ಎಫ್ಐ- ಡಿವೈಎಫ್‌ಐ ಸಂಘಟನೆಗಳ ಮುಖಂಡರು ಜಂಟಿಯಾಗಿ ಮನವಿಯನ್ನು ಸಲ್ಲಿಸಿದರು.
ಸ್ಥಳಿಯ ಜನತೆಯ ಹಲವಾರು ಸಮಸ್ಯೆಗಳನ್ನು ಆಲಿಸಿ ಅವರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸುವಾಗ ಸಚಿವರು ಬೇಜವಾಬ್ದಾರಿತನ ತೋರಿದ್ದಾರೆ. ಮನವಿ ಸ್ವೀಕರಿಸಿ ಕನಿಷ್ಠ ಸೌಜನ್ಯವನ್ನು ತೋರದ ಸಚಿವ ನಿರಾಣಿ ಜೊತೆ SFI ಮುಖಂಡರು ಕೆಲ ಕಾಲ ವಾಗ್ವಾದ ನಡೆಸಿದರು.
ಹಟ್ಟಿ ಚಿನ್ನದ ಗಣಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು, ಈ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಬೇಕು ಹಾಗೂ ವ್ಯವಸ್ಥಿತವಾದ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕು, ಜಿಲ್ಲೆಯಲ್ಲಿ ಖನಿಜ ಅಧ್ಯಯನ ಕಾಲೇಜು ಸ್ಥಾಪಿಸಬೇಕು, ಜಿಲ್ಲೆಯಲ್ಲಿ ನಡೆಯುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಯಂತ್ರಿಸಬೇಕು, ಖಾಸಗಿ ನಿಯಂತ್ರಣದಲ್ಲಿರುವ ಗಣಿಗಾರಿಕೆಯನ್ನು ನಿಯಂತ್ರಿಸಿ ಪೂರ್ಣ ಖನಿಜ ಸಂಪತ್ತು ಸಾರ್ವಜನಿಕ ಒಡೆತನದಲ್ಲಿರುವಂತೆ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ ನಿರಾಣಿಯವರಿಗೆ SFI-DYFI ಮುಖಂಡರು ಆಗ್ರಹಿಸಿದರು.