ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿಗೆ ತನ್ನಿ: ಮುನೀರ್ ಕಾಟಿಪಳ್ಳ

ಹಾವೇರಿ: ಒಕ್ಕೂಟ ಸರಕಾರಗಳಡಿ ಖಾಲಿಯಿರುವ 60 ಲಕ್ಷ ಹಾಗೂ ರಾಜ್ಯ ಸರಕಾರದಡಿ ಖಾಲಿ ಇರುವ 2.5ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಲು ಸರಕಾರಗಳು ಮುಂದಾಗಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್ಐ) ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಠಿಯ ಭರವಸೆ ನೀಡಿ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರು ಕಳೆದ ಎಂಟು ವರ್ಷಗಳಲ್ಲಿ ಉದ್ಯೋಗ ಸೃಷ್ಠಿ ಮಾಡುವ ಬದಲಾಗಿ, ಇರುವ ಉದ್ಯೋಗಗಳನ್ನು ನಾಶಗೊಳಿಸಿ ದೇಶದ ಜನತೆಗೆ ಮಹಾ ದ್ರೋಹಬಗೆದಿದ್ದಾರೆ ಎಂದು ಆರೋಪಿಸಿದರು.

ಇದನ್ನು ಓದಿ: ನಿರುದ್ಯೋಗದಂತ ಗಂಭೀರ ಸಮಸ್ಯೆ ಪರಿಹಾರಕ್ಕೆ ಹೋರಾಟವೊಂದೇ ದಾರಿ: ಸಂತೋಷ್‌ ಹೆಗ್ಡೆ

ಉದ್ಯೋಗ ಸೃಷ್ಠಿಸದ ಉದ್ಯಮಗಳು ನಮಗೆ ಬೇಡ. ಜಾಗತಿಕ ಹೂಡಿಕೆಯಾಗಲಿ, ಸ್ಥಳೀಯ ಹೂಡಿಕೆಗಳಾಗಲಿ ಕಡ್ಡಾಯವಾಗಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಉದ್ಯೋಗದ ಹಕ್ಕನ್ನು ಕಳೆದ ಎರಡು ದಶಕಗಳಿಂದ ಕಸಿಯುತ್ತಲೇ ಇದ್ದು, ಕೇಂದ್ರದಲ್ಲಿ ಬಿಜೆಪಿ ಸರಕಾರದ ಈ ಅಧಿಕಾರಾವಧಿಯಲ್ಲಿ  ಉದ್ಯೋಗ ನಾಶದ ವೇಗ ಮಿತಿ ಮೀರಿದೆ.

ಕೇವಲ ಬಂಡವಾಳಿಗರ ಹಾಗೂ ಉದ್ದಿಮೆದಾರರ ಅನುಕೂಲಕ್ಕೆ ತಕ್ಕಷ್ಟು ಮಾತ್ರ ಉದ್ಯೋಗ ಸೃಷ್ಟಿಸುವುದಲ್ಲ. ಸರಕಾರ ಹೂಡಿಕೆದಾರರಿಗೆ ಆದ್ಯತೆ ನೀಡುತ್ತಲೇ ಇದೆ. ಆದರೆ ಕೆಲಸಕ್ಕಾಗಿ ಪರಿತಪಿಸುತ್ತಿರುವ ಯುವಶಕ್ತಿಯನ್ನು ಕಡೆಗಣಿಸುತ್ತಲೇ ಬರುತ್ತಿರುವುದರಿಂದಾಗಿ ಯುವಜನತೆ ಹತಾಸೆಗೊಂಡಿದ್ದಾರೆ.

ಇದನ್ನು ಓದಿ: 2021ರಲ್ಲಿ ಆತ್ಮಹತ್ಯೆಗೀಡಾದವರ ಒಟ್ಟು ಸಂಖ್ಯೆ 164033-ಕಾರ್ಮಿಕರು, ನಿರುದ್ಯೋಗಿಗಳು, ರೈತರೇ ಹೆಚ್ಚು

ಶಿಕ್ಷಣ, ಉದ್ಯೋಗ, ಆರೋಗ್ಯದ ಪ್ರಶ್ನೆಗಳು ಮುಖ್ಯವಾಗಿರಬೇಕಾಗಿದ್ದ ಈ ಸಂಕಷ್ಟದ ಸಂದರ್ಭದಲ್ಲಿ ಯುವಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಸರಕಾರಗಳೇ ಕೆಲಸ ಮಾಡುತ್ತಿವೆ. ವಿರೋಧ ಪಕ್ಷಗಳು ಕೂಡ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಶೋಚನೀಯ ಎಂದರು.

ಯುವ ಮಾನವ ಸಂಪನ್ಮೂಲ ಬಳಸಿಕೊಂಡು ದೇಶ ಅಭಿವೃದ್ಧಿಪಡಿಸಲು ಪರಿಣಾಮಕಾರಿ ಉದ್ಯೋಗ ನೀತಿಯ ಅವಶ್ಯಕತೆ ಇದೆ. ಸಾರ್ವಜನಿಕ ರಂಗ ಹಾಗೂ ಖಾಸಗೀರಂಗದಲ್ಲಿ ರಾಜ್ಯದ ಯುವ ಜನತೆಗೆ ಸಿಂಹಪಾಲು ದೊರೆಯಬೇಕಿದೆ. ಅದಕ್ಕಾಗಿ ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಈಗ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ತೀರ್ಮಾನಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಪತ್ರಿಕಾಗೋಷ್ಠಿಯಲ್ಲಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ರಾಜ್ಯ ಉಪಾಧ್ಯಕ್ಷ ಸಂತೋಷ ಬಜಾಲ್, ಜಿಲ್ಲಾ ಸಂಚಾಲಕ ನಾರಾಯಣ ಕಾಳೆ, ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಅರುಣ ಕಡಕೋಳ, ಗುಡ್ಡಪ್ಪ ಮಡಿವಾಳರ ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *