- ಕೇರಳ, ರಾಜಸ್ಥಾನ, ಪಂಜಾಬ್, ಛತ್ತೀಸ್‌ಗಡ, ಪಶ್ಚಿಮ ಬಂಗಾಳ ಮತ್ತು ದೆಹಲಿ ಕೃಷಿ ಕಾನೂನುಗಳ ವಿರೋಧ ನಿರ್ಣಯ
- ಕೇಂದ್ರ ಬಿಜೆಪಿ ಸರ್ಕಾರ ರೈತರನ್ನು ನಾಶಮಾಡಲು ಕೆಲಸ ಮಾಡುತ್ತಿದೆ: ಮುಖ್ಯಮಂತ್ರಿ ಎಂಕೆ ಸ್ಟಾಲಿನ್
ಚೆನ್ನೈ: ಕೇಂದ್ರದ ಬಿಜೆಪಿ ಸರಕಾರವು ಜಾರಿಗೊಳಿಸಲು ಹೊರಟಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ತಮಿಳುನಾಡು ವಿಧಾನಸಭೆಯಲ್ಲಿ ಇಂದು ನಿರ್ಣಯ ಅಂಗೀಕರಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಂಡಿಸಿದ ನಿರ್ಣಯವನ್ನು ವಿಧಾನಸಭೆಯ ಸದಸ್ಯರು ಧ್ವನಿಮತದ ಮೂಲಕ ಒಪ್ಪಿಗೆ ಸೂಚಿಸಿದರು.
ಡಿಎಂಕೆ ಮಿತ್ರ ಪಕ್ಷಗಳ ಸದಸ್ಯರು ಹಾಗೂ ಬಿಜೆಪಿಯ ಮಿತ್ರ ಪಕ್ಷಗಳಲ್ಲಿ ಒಂದಾದ ಪಿಎಂಕೆ ಸದಸ್ಯರು ನಿರ್ಣಯವನ್ನು ಬೆಂಬಲಿಸಿದರೆ, ನಿರ್ಣಯದ ಮೇಲೆ ಚರ್ಚೆ ಆರಂಭವಾದಾಗ, ಎಐಎಡಿಎಂಕೆ ಮತ್ತು ಬಿಜೆಪಿ ಶಾಸಕರು ಸಭೆಯಿಂದ ಹೊರನಡೆಯುವ ಮೂಲಕ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು.
ಇದನ್ನು ಓದಿ: ರೈತ ವಿರೋಧಿ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕಾರಕ್ಕೆ ವಿಶೇಷ ಅಧಿವೇಶನ
ಬೆಳಿಗ್ಗೆ ಸದನ ಆರಂಭಗೊಂಡ ನಂತರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚರ್ಚೆಯ ಕೊನೆಯಲ್ಲಿ, ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತರು ಮತ್ತು ಇತರರ ಎಲ್ಲರ ವಿರುದ್ಧವೂ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಘೋಷಿಸಿದರು.
ರೈತರು ಅತ್ಯಂತ ಪ್ರಮುಖವಾಗಿ ಆದ್ಯತೆಯಾಗಿ ನಿರೀಕ್ಷಿಸುವುದು ಅವರ ಉತ್ಪನ್ನಗಳಿಗೆ ಸಮಂಜಸವಾದ ಬೆಲೆ. ಆದರೆ ಈ ಮೂರು ಶಾಸನಗಳು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಬಗ್ಗೆ ತಿಳಿಯಪಡಿಸಿಲ್ಲ. ಕೃಷಿಗೆ ಸಂಬಂಧಿಸಿದ ಈ ಕಾನೂನುಗಳು ರೈತರಿಗೆ ವಿರುದ್ಧವಾಗಿದ್ದು, ಗಂಭೀರವಾದ ಮಾರಕವಾಗಿವೆ. “ಆದ್ದರಿಂದ, ಈ ಶಾಸನಗಳನ್ನು ವಿರೋಧಿಸುವುದು ನಮ್ಮ ಕರ್ತವ್ಯ” ಎಂದು ಮುಖ್ಯಮಂತ್ರಿಗಳು ಹೇಳಿದರು.
ಸ್ವಾತಂತ್ರ್ಯದ ನಂತರ, ಮೊದಲ ಬಾರಿಗೆ, ರೈತರು ಈ ಮೂರು ಶಾಸನಗಳನ್ನು ವಿರೋಧಿಸಿ ರಸ್ತೆಗಿಳಿದಿದ್ದಾರೆ ಮತ್ತು ಅವರು ಈ ಶಾಸನಗಳ ವಿರುದ್ಧ ದೀರ್ಘಕಾಲ ಹೋರಾಡುತ್ತಿದ್ದಾರೆ ಎಂದು ಸ್ಟಾಲಿನ್ ಹೇಳಿದರು.
ಇದನ್ನು ಓದಿ: ಹರ್‌ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ಅಂಗೀಕಾರ
ಜಲಸಂಪನ್ಮೂಲ ಸಚಿವ ದುರೈಮುರುಗನ್ ‘ಎಐಎಡಿಎಂಕೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಇದೇ ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಅಂದಿನ ಆಡಳಿತ ಪಕ್ಷ ಈಗ ಪ್ರಮುಖ ವಿರೋಧ ಪಕ್ಷವಾಗಿದೆ. ಈಗ ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ವಿರೋಧ ಪಕ್ಷ ಬೆಂಬಲಿಸುತ್ತದೆಯೋ ಇಲ್ಲವೋ ಎಂದು ಮುಖ್ಯಮಂತ್ರಿ ತಿಳಿಯಲು ಬಯಸಿದ್ದಾರೆ‘ ಎಂದರು.
ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಧಾರವನ್ನು ತನ್ನ ಸರಕಾರವು ವಿಧಾನಸಭೆಯಲ್ಲಿ ತರುತ್ತದೆ ಎಂದು ಎಂ.ಕೆ.ಸ್ಟಾಲಿನ್ ಮೇ ತಿಂಗಳಲ್ಲಿ ಹೇಳಿದ್ದರು. ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ನ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯೊಂದನ್ನು ಅವರು ನೆನಪಿಸಿಕೊಂಡರು.
ಇದರೊಂದಿಗೆ, ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ದಿಲ್ಲಿ, ಕೇರಳ ಹಾಗೂ ಪಶ್ಚಿಮ ಬಂಗಾಳದ ನಂತರ ತಮಿಳುನಾಡು ಕೃಷಿ ಕಾನೂನುಗಳನ್ನು ವಿರೋಧಿಸಿದ ಏಳನೇ ರಾಜ್ಯವಾಗಿದೆ.