ಬೆಂಗಳೂರು: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳ ಸಮಯದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ಶಿಕ್ಷಕರು ಹಿಜಾಬ್ ಧರಿಸಿ ಹಾಜರಾಗುವಂತಿಲ್ಲ ಎಂದು ಶಿಕ್ಷಣ ಇಲಾಖೆಯು ಮೌಖಿಕ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.
ಶಿಕ್ಷಕರಿಗೆ ಯಾವುದೇ ವಸ್ತ್ರ ಸಂಹಿತೆ ಜಾರಿಗೊಳಿಸದಿದ್ದರೂ ಸಹ ಶಿಕ್ಷಣ ಇಲಾಖೆಯು ಪರೀಕ್ಷಾ ಸಮಯದಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುವ ಉಪನ್ಯಾಸಕರಿಗೆ ಹಿಜಾಬ್ ವಿಚಾರವಾಗಿ ಸೂಚನೆಗಳನ್ನು ನೀಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಉಂಟಾಗಬಾರದೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
ಇದನ್ನು ಓದಿ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ; ‘ಹಿಜಾಬ್‌ಗೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ’
ಒಂದು ವೇಳೆ ಉಪನ್ಯಾಸಕರು ಹಿಜಬ್ ಧರಿಸಿ ಕೆಲಸಕ್ಕೆ ಹಾಜರಾದ ಪಕ್ಷದಲ್ಲಿ ಅವರನ್ನು ಕೆಲಸದಿಂದ ಬಿಡುಗಡೆಗೊಳಿಸಲು ಇಲಾಖೆ ನಿರ್ಧರಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪ್ರಾರಂಭವಾದ ಮೊದಲ ದಿನ ಶಿಕ್ಷಕಿಯೊಬ್ಬರು ಹಿಜಾಬ್ ಧರಿಸಿ ಬಂದಿದ್ದ ಘಟನೆ ನಡೆದಿತ್ತು. ಆ ಸಂದರ್ಭ ಶಿಕ್ಷಕಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿತ್ತು. ಮುಂದೆಯೂ ಈ ರೀತಿ ನಡೆದಲ್ಲಿ ಇದೇ ನಿಯಮ ಮುಂದುವರಿಸುವಂತೆ ತಿಳಿಸಲಾಗಿದೆ.
ಪ್ರಸ್ತುತ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಗೂ ಏಪ್ರಿಲ್ ಅಂತ್ಯದಿಂದ ಪ್ರಾರಂಭವಾಗಲಿರುವ ದ್ವೀತಿಯ ಪಿಯುಸಿ ಪರೀಕ್ಷೆಗೂ ಈ ನಿಯಮ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇದನ್ನು ಓದಿ: ಹಿಜಾಬ್ ಧರಿಸಿದಕ್ಕೆ ಕಿರುಕುಳ: ಮನನೊಂದ ಕಾಲೇಜು ಪ್ರಾಂಶುಪಾಲೆ ರಾಜೀನಾಮೆ
ಈಗಾಗಲೇ ವಿದ್ಯಾರ್ಥಿಗಳಿಗೆ ಹಿಜಬ್ ನಿಷೇಧ ಹಾಕಲಾಗಿದೆ. ಶಿಕ್ಷಕಿಯರಿಗೆ ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ ವಿವಾದ ಮತ್ತೆ ಪ್ರಾರಂಭವಾಗುವ ಆತಂಕವಿದೆ. ಶಿಕ್ಷಕರಿಗೆ ವಸ್ತ್ರ ಸಂಹಿತೆ ಇಲ್ಲದೇ ಇರುವುದರಿಂದ ಹಿಜಾಬ್ ಬಗ್ಗೆಯೂ ಯಾವುದೇ ಕ್ರಮ ಇಲ್ಲ. ಆದರೂ ಹಿಜಾಬ್ ಧರಿಸಿ ಬರುವ ಶಿಕ್ಷಕರನ್ನು ಪರೀಕ್ಷಾ ಕೆಲಸದಿಂದ ಬಿಡುಗಡೆ ಮಾಡಲು ಇಲಾಖೆ ಸೂಚನೆ ನೀಡಿದೆ.