ಬೆಂಗಳೂರು: ಸೋಮವಾರ(ಮಾ.28ರಂದು)ದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿದೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ಇಲ್ಲ ಎಂದ ಆದೇಶ ಹೊರಡಿಸಿದೆ.
1995 ರ ನಿಯಮ 11ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸಮವಸ್ತ್ರ ಜಾರಿಯಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ನಿಗಧಿಪಡಿಸಿರುವ ಶಾಲಾ ಸಮವಸ್ತ್ರ ಕಡ್ಡಾಯವಾಗಿ ಧರಿಸಬೇಕು. ಸಮವಸ್ತ್ರ ಹೊರತುಪಡಿಸಿ ಬೇರೆ ವಸ್ತ್ರಗಳಿಗೆ ಅವಕಾಶವಿಲ್ಲ. ನ್ಯಾಯಾಲಯದ ಆದೇಶದಂತೆ ಎಲ್ಲರೂ ಇದನ್ನು ಪಾಲನೆ ಮಾಡಬೇಕು. ಖಾಸಗಿ ಶಾಲೆಗಳಲ್ಲಿ ಆಯಾ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರ ಕಡ್ಡಾಯ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 8.73 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಅನುಸರಿಸಬೇಕು. ವಿದ್ಯಾರ್ಥಿಗಳು ತಮ್ಮ ತಪ್ಪನ್ನು ಅರಿತುಕೊಂಡು ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷೆಗಳಿಂದ ದೂರವಾದರೆ ಬೋರ್ಡ್ ನಡೆಸುವ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು. ಪೂರಕ ಪರೀಕ್ಷೆಯಲ್ಲಿ ಹಿಜಾಬ್ ಗೆ ಯಾವುದೇ ಅನುಮತಿ ಇರುವುದಿಲ್ಲ ಎಂದು ಒತ್ತಿ ಒತ್ತಿ ಹೇಳಿದರು.
ಹಿಜಾಬ್ ವಿವಾದದ ನಡುವೆ ರಾಜ್ಯದಲ್ಲಿ ಪದವಿ ಪರೀಕ್ಷೆಗಳು ನಡೆಯುತ್ತಿವೆ. ಇತ್ತ ಪಿಯು ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದು, ಹಿಜಾಬ್ ಪರ ಪ್ರತಿಭಟನೆ ನಡೆಸಿದ ಬಹುತೇಕ ವಿದ್ಯಾರ್ಥಿನಿಯರು ಗೈರಾಗುತ್ತಿದ್ದಾರೆ. ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಯಾವುದೇ ವಿನಾಯಿತಿ ನೀಡಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಹ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಉಚ್ಛ ನ್ಯಾಯಲಯವು ಕರ್ನಾಟಕ ಸರ್ಕಾರ ಹೊರಡಿಸಿರುವ ಏಕರೂಪ ವಸ್ತ್ರ ಸಂಹಿತೆ ಆದೇಶವನ್ನು ಎತ್ತಿ ಹಿಡಿದಿದೆ. ಹಾಗಾಗಿ ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಎಲ್ಲ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.