ಓದಲು ಹಾಗೂ ಬರೆಯಲು ಬಾರದ ಹುಡುಗನಿಗೆ ಎಸ್‌ಎಸ್‌ಎಲ್‌ಸಿಯಲ್ಲಿ 623 ಅಂಕ, ಅಂಕಗಳ ಆಧಾರದಲ್ಲಿ ಜವಾನ ಹುದ್ದೆ

ಕೊಪ್ಪಳ: ಸರಿಯಾಗಿ ಓದಲು ಹಾಗೂ ಬರೆಯಲು ಬಾರದ  ಹುಡುಗ ಎಸ್‌ಎಸ್‌ಎಲ್‌ಸಿಯಲ್ಲಿ 623 ಅಂಕ ಪಡೆದು ನ್ಯಾಯಾಲಯದಲ್ಲಿ ಜವಾನನ ಹುದ್ದೆ ಗಿಟ್ಟಿಸಿಕೊಂಡಿದ್ದಾನೆ.

ಕೊಪ್ಪಳದ ಸಜ್ಜಿ ಓಣಿಯ ನಿವಾಸಿ 23 ವರ್ಷದ ಪ್ರಭು ಲೋಕರೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 99.52ರಷ್ಟು ಫಲಿತಾಂಶ ಪಡೆದಿದ್ದಾನೆ. ಇದರಿಂದ ಅನುಮಾನಗೊಂಡ ಕೊಪ್ಪಳದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಪ್ರಭು ವಿದ್ಯಾಭ್ಯಾಸದ ಕುರಿತು ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದರ ಅನ್ವಯ ನಗರ ಪೊಲೀಸ್‌ ಠಾಣೆಯಲ್ಲಿ ಏಪ್ರಿಲ್‌ 26ರಂದು ಎಫ್‌ಐಆರ್‌ ದಾಖಲಾಗಿದೆ.

ಪ್ರಭು ಯಾದಗಿರಿಯ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯದಲ್ಲಿ ಜವಾನನಾಗಿ ಇದೇ ವರ್ಷದ ಏಪ್ರಿಲ್‌ 22ರಂದು ಆಯ್ಕೆಯಾಗಿದ್ದಾನೆ. 7ನೇ ತರಗತಿ ಉತ್ತೀರ್ಣರಾದ ಬಳಿಕ ಯಾವುದೇ ಶಾಲೆಯಲ್ಲಿ ಪ್ರವೇಶ ಪಡೆಯದೆ ನೇರವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಒಟ್ಟು 625ಕ್ಕೆ 623 ಅಂಕಗಳನ್ನು ಪಡೆದುಕೊಂಡಿದ್ದಾನೆ. ಪ್ರಭು ಇಷ್ಟೊಂದು ಅಂಕಗಳನ್ನು ಪಡೆಯಲು ನಿಜಕ್ಕೂ ಸಮರ್ಥರಾಗಿದ್ದಾರೆಯೇ? ಎಂಬುದು ಈಗ ಪ್ರಶ್ನೆಯಾಗಿದೆ.

ಇದನ್ನು ಓದಿ : ಪ್ರೋಟೀನ್‌ ಸಪ್ಲಿಮೆಂಟ್ಸ್ ಹೆಚ್ಚಾಗಿ ಬಳಸಬೇಡಿ

ಆತನಿಗೆ ಕನ್ನಡ ಹಾಗೂ ಇಂಗ್ಲಿಷ್‌ ಓದಲು ಸಾಧ್ಯವಿಲ್ಲ. ಬರೆಯಲೂ ಬರುವುದಿಲ್ಲ ಎನ್ನುವ ನಂಬಲರ್ಹವಾದ ಸ್ಥಿತಿಯಿದೆ. ಇಂಥ ಪರಿಸ್ಥಿತಿಯಲ್ಲಿಯೂ ಅವರು ಇಷ್ಟೊಂದು ಅಂಕಗಳನ್ನು ಪಡೆದಿದ್ದಾರೆ ಎನ್ನುವುದು ಅಘಾತಕಾರಿ ಮಾಹಿತಿಯಾಗಿದೆ. ಇದು ಪೂರ್ಣ ವಿದ್ಯಾರ್ಥಿ ಸಮೂಹಕ್ಕೆ ಮತ್ತು ರಾಜ್ಯಕ್ಕೆ ಮೋಸ ಮಾಡಿದಂತಿದೆ. ಕನಿಷ್ಠ ಜ್ಞಾನವೂ ಇಲ್ಲದ ವಿದ್ಯಾರ್ಥಿಯೊಬ್ಬ ಮೋಸದ ಮೂಲಕ ಅಂಕಗಳನ್ನು ಪಡೆದುಕೊಂಡರೆ ಅರ್ಹ ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ಇಂಥವರೊಂದಿಗೆ ಸ್ಪರ್ಧೆ ಸಾಧ್ಯವೇ’ ಎಂದು ಎಫ್‌ಐಆರ್‌ನಲ್ಲಿ ಪ್ರಶ್ನಿಸಲಾಗಿದೆ.

ಇದು ಅನೇಕ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದ್ದು, ಗಂಭೀರವೂ ಆಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಲು ಇತರರ ಜೊತೆ ಶಾಮೀಲಾಗಿ ಮೋಸದ ಹಾದಿ ಹುಡುಕಿದಂತೆ ಇದ್ದು, ಈ ಕುರಿತು ವಿವರವಾಗಿ ತನಿಖೆ ನಡೆಸಬೇಕು, ಸರ್ಕಾರಿ ಉದ್ಯೋಗವನ್ನು ವಂಚನೆಯಿಂದ ಪಡೆಯುವ ಹಾದಿಗೆ ಕಡಿವಾಣ ಹಾಕಬೇಕು, ಪ್ರಭು ಬರೆದ ಉತ್ತರ ಪತ್ರಿಕೆಯನ್ನು ಆತನ ಕೈಬರಹಕ್ಕೆ ಹೋಲಿಕೆ ಮಾಡಿ ನೋಡಬೇಕು ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಕೊಪ್ಪಳ ನಗರದ ಜೆಎಂಎಫ್​ ಸಿ ನ್ಯಾಯಾಲಯದಲ್ಲಿ ಕಳೆದ ಕೆಲ ವರ್ಷಗಳಿಂದ ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕು ಮೂಲದ ಪ್ರಭು ಲೋಕರೆ ಅನ್ನೋ 23 ವರ್ಷದ ಯುವಕ, ಸ್ಕ್ಯಾವೆಂಜರ್ ಅಂದ್ರೆ ಸ್ವಚ್ಚತಾ ಕೆಲಸ ಮಾಡುತ್ತಿದ್ದ. ಎಳನೆ ತರಗತಿವರಗೆ ಓದಿದ್ದ ಪ್ರಭು, ನಂತರ ಮುಂದೆ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ಶಾಲೆ ಬಿಟ್ಟು ಕೋರ್ಟ್ ನಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ. ಆದ್ರೆ ಇದೇ ಪ್ರಭು ಯಾದಗಿರಿಯಲ್ಲಿರುವ ಜಿಲ್ಲಾ ಮತ್ತ ಸತ್ರ ನ್ಯಾಯಾಲಯದಲ್ಲಿ ಜವಾನ ಹುದ್ದೆಗೆ ಆಯ್ಕೆಯಾಗಿದ್ದಾನೆ. 2024 ರ ಎಪ್ರಿಲ್ 22 ರಂದು ಜವಾನ ಹುದ್ದೆಯ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆ ಆಯ್ಕೆ ಪಟ್ಟಿಯಲ್ಲಿ ಪ್ರಭು ಲೋಕರೆ ಹೆಸರು ಕೂಡಾ ಇದೆ.

ಜವಾನ ಹುದ್ದೆಗೆ ಆಯ್ಕೆಯಾಗಬೇಕಾದ್ರೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು. ಜೊತೆಗೆ ಹೆಚ್ಚಿನ ಅಂಕ ಪಡೆದವರಿಗೆ ಜವಾನ ಹುದ್ದೆ ಸಿಗುತ್ತದೆ. ಆದ್ರೆ ಪ್ರಭು ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಲ್ಲಿ ಜವಾನ ಆಗಿ ಆಯ್ಕೆಯಾಗಿದ್ದು, ಕೊಪ್ಪಳ ಜೆಎಂಎಫ್​ ಸಿ ನ್ಯಾಯಾಧೀಶರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾಕಂದ್ರೆ ಕಳೆದ ಕೆಲ ವರ್ಷಗಳಿಂದ ಕೊಪ್ಪಳ ನ್ಯಾಯಾಲಯದಲ್ಲಿ ಪ್ರಭು ವನ್ನು ನೋಡಿದ್ದರು. ಆತ ಎಂದಿಗೂ ಶಾಲೆಗೆ ಹೋಗಿದನ್ನು ಯಾರು ನೋಡಿರಲಿಲ್ಲಾ. ಜೊತೆಗೆ ಆತನಿಗೆ ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಓದಲು, ಬರೆಯಲು ಕೂಡಾ ಬರೋದಿಲ್ಲಾ ಅನ್ನೋದನ್ನು ಅನೇಕ ಬಲ್ಲ ಮಾಹಿತಿಗಳ ಮೂಲಕ ತಿಳಿದುಕೊಂಡಿದ್ದರು. ಆದ್ರೆ ಇಂತಹ ವ್ಯಕ್ತಿ ಜವಾನ ಆಗಿ ಆಯ್ಕೆಯಾಗಿದ್ದು ಸ್ವತ ಜಡ್ಜ್ ಅವರಿಗೆ ಅಚ್ಚರಿಗೆ ಕಾರಣವಾಗಿತ್ತು.

ಕನ್ನಡವನ್ನು ಕೂಡಾ ಸ್ಪಷ್ಟವಾಗಿ ಓದಲು, ಬರೆಯಲು ಬಾರದ ಯುವಕ ಇಷ್ಟೊಂದು ಅಂಕ ಪಡೆದಿದ್ದು ಹೇಗೆ ಅನ್ನೋದು ಸ್ವತ ಜಡ್ಜ್ ಅವರಿಗೆ ಕೂಡಾ ಅಚ್ಚರಿಯಾಗಿತ್ತು. ಹೀಗಾಗಿ ಇದರಲ್ಲಿ ಏನೋ ಅಕ್ರಮ ನಡೆದಿದೆ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ ಅನ್ನೋದನ್ನು ಅರಿತ ಜಡ್ಜ್ ಅವರು ಕೊಪ್ಪಳ ನಗರ ಠಾಣೆಗೆ ಖಾಸಗಿ ದೂರನ್ನು ನೀಡಿದ್ದಾರೆ. ಎಸ್ ಎಸ್ ಎಲ್ ಸಿ ಯಲ್ಲಿ ಹೆಚ್ಚಿನ ಅಂಕ ಪಡೆಯಲು ಈತನ ಜೊತೆ ಇನ್ನೂ ಕೆಲ ಮಂದಿ ಶಾಮೀಲಾಗಿರಬಹುದು. ಈ ಬಗ್ಗೆ ವಿವರವಾದ ತನಿಖೆ ನಡೆಸಬೇಕು. ಸರ್ಕಾರಿ ಉದ್ಯೋಗವನ್ನು ಅಕ್ರಮವಾಗಿ ಪಡೆಯಲು ಇಂತಹದೊಂದು ವಂಚನೆ ಎಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಭು ಲೋಕರೆ ವಿರುದ್ದ 2024 ರ ಎಪ್ರಿಲ್ 26 ರಂದು ಕೊಪ್ಪಳ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಕೊಪ್ಪಳ ನಗರ ಠಾಣೆಯ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ. ಸರ್ಕಾರಿ ನೌಕರಿಯನ್ನು ಪಡೆಯಲು ಕಳ್ಳದಂಧೆ ನಡೆಯುತ್ತಿದೆ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ನಕಲಿ ಅಂಕ ಪಟ್ಟಿ ಸೃಷ್ಟಿಸಿ ನೌಕರಿ ಪಡೆದಿದ್ದ ಹಲವು ಘಟನೆಗಳನ್ನು ನೆನಪಿಸಿಕೊಳ್ಳಬಹುದಾಗಿದೆ.

ಇದನ್ನು ನೋಡಿ : ಲೈಂಗಿಕ ಹತ್ಯಾಕಾಂಡ :ಪ್ರಜ್ವಲ್‌ ಬಂಧನ ವಿಳಂಬಕ್ಕೆ ಹೈಕೋರ್ಟ್ ವಕೀಲ ಬಿ‌.ಟಿ.ವೆಂಕಟೇಶ್ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *