ಮಂಡ್ಯ: ಕೇಂದ್ರದ ಕರಾಳ ಕೃಷಿ ಕಾಯ್ದೆಗಳ ವಾಪಸ್ಸಾತಿಯೊಂದಿಗೆ ರಾಜ್ಯದ ಬಿಜೆಪಿ ಸರ್ಕಾರ ಜಾರಿಗೊಳಿಸಲು ಹೊರಟಿರುವ ಎಪಿಎಂಸಿ ಮತ್ತು ಭುಸುಧಾರಣ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಾಪಸ್ಸು ಪಡೆಬೇಕೆಂದು ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಇಂದು ರಾಜ್ಯದ ವಿವಿದೆಡೆ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯುವ ಮೂಲಕ ಪ್ರತಿಭಟನೆ ನಡೆಸಿದರು.
ಕೇಂದ್ರ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಮೂರು ಪ್ರಮುಖ ಕೃಷಿ ಕಾಯ್ದೆಗಳು ದೇಶದ ರೈತರ ಪಾಲಿಗೆ ಮರಣ ಶಾಸನವಾಗಿದೆ. ಅವುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ 2020ರ ನವೆಂಬರ್ 26ರಿಂದ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ದೇಶದ ರಾಜಧಾನಿ ದೆಹಲಿಯ ಗಡಿ ಪ್ರದೇಶಗಳಲ್ಲಿ ಪ್ರತಿಭಟನಾನಿರತರಾಗಿರುವ ರೈತರು ಕಳೆದ ಒಂದು ವರ್ಷದಿಂದ ಬೀಡು ಬಿಟ್ಟಿದ್ದಾರೆ. ʻಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು-ಅಲ್ಲಿಯವರೆಗೂ ತಾವು ಹೋರಾಟವನ್ನು ಹಿಂಪಡೆಯುವುದಿಲ್ಲʼ ಎಂದು ಪಟ್ಟು ಹಿಡಿರುವ ಸಾವಿರಾರು ಸಂಖ್ಯೆಯ ರೈತರು ರೈತ ಆಂದೋಲವನ್ನು ಆರಂಭಿಸಿದರು.
ಇಂದು ರೈತ ಹೋರಾಟಕ್ಕೆ ಒಂದು ವರ್ಷದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯಬೇಕೆಂದು ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದವು.
ಕೆಲ ದಿನಗಳ ಹಿಂದೆ ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯುವುದಾಗಿ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ನಂತರ ನಡೆದ ಕೇಂದ್ರ ಸಚಿವ ಸಂಪುಟ ಸಮಿತಿಯು ಕಾಯ್ದೆ ವಾಪಸ್ಸಾತಿಗೆ ಅನುಮೋದನೆ ನೀಡಿತು. ಆಳುವ ಸರ್ಕಾರದ ಪ್ರತಿನಿಧಿಗಳ ಇಂತಹ ಬಾಯಿಮಾತಿಗೆ ನಂಬಿಕೆ ಇಲ್ಲದ ರೈತ ಹೋರಾಟಗಾರರು ಸಂಸತ್ತಿನ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳು ವಾಪಸ್ಸು ಪಡೆಯಲಾಗಿದೆ ಎಂದು ಘೋಷಣೆ ಮಾಡುವವರೆಗೂ ತಾವು ಹೋರಾಟ ಮುಂದುವರೆಸುವುದಾಗಿ ಕರೆ ನೀಡಿದರು.
ಅದೇ ರೀತಿಯಲ್ಲಿ ಕೃಷಿ ಕಾಯ್ದೆಗಳನ್ನು ವಾಪಸ್ಸಾತಿಯೊಂದಿಗೆ ಸರ್ಕಾರವು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಖಾತರಿಪಡಿಸಲು ಕಾನೂನನ್ನು ತರಬೇಕು ಮತ್ತು ಹೋರಾಟದ ಸಮಯದಲ್ಲಿ ಪ್ರಾಣ ಕಳೆದುಕೊಂಡ 700 ರೈತರನ್ನು ಹುತಾತ್ಮರೆಂದು ಘೋಷಿಸಬೇಕು. ಲಖಿಂಪುರ ಖೇರಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಭಾಗೀಯಾದವರ ಮೇಲೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿಯು ಎಂಎಸ್‌ಪಿ ಖಾತ್ರಿ ಕಾಯ್ದೆ ಜಾರಿಯ ಬಗ್ಗೆ, ವಿದ್ಯುತ್ ಖಾಸಗೀಕರಣ ಕಾಯ್ದೆ ಕೈ ಬಿಡಬೇಕೆಂದು, ರೈತ ಹೋರಾಟದ ಸಂದರ್ಭದಲ್ಲಿ ಹುತಾತ್ಮರಾದ 700ಕ್ಕೂ ಹೆಚ್ಚು ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು. ಪ್ರತಿಭಟನೆಯ ಸಂದರ್ಭದಲ್ಲಿ ರೈತರ ಮೇಲೆ ಹೂಡಲಾಗಿರುವ ಕೇಸುಗಳನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪ್ರವೇಶ ದ್ವಾರದ ಬಳಿ ನೂರಾರು ರೈತರು, ಮಹಿಳೆಯರು, ಕಾರ್ಮಿಕರು, ಯುವಜನ, ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಪ್ರತಿಭಟನೆಯನ್ನು ನಡೆಸಿದರು.