ಕಾಶ್ಮೀರದಲ್ಲಿ ಪೊಲೀಸ್ ಬಸ್ ಮೇಲೆ ಉಗ್ರರ ಧಾಳಿ : ಇಬ್ಬರ ಸಾವು, 12 ಮಂದಿಗೆ ಗಾಯ

ಶ್ರೀನಗರ: ಇಲ್ಲಿನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಝೆವಾನ್‌ ಪ್ರದೇಶದ ಬಳಿ ಸೋಮವಾರ ಉಗ್ರರು ಪೊಲೀಸ್‌ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ. ವಿವಿಧ ರಕ್ಷಣಾ ಪಡೆಗಳು ನೆಲೆಸಿದ್ದ ಕ್ಯಾಂಪ್​ಗಳಿಂದಲೇ ಕೂಡಿರುವ ಹೆಚ್ಚು ಸುರಕ್ಷಿತ ಪ್ರದೇಶದಲ್ಲಿ ನಿಂತಿದ್ದ ಬಸ್​ ಮೇಲೆಯೇ ಉಗ್ರರು ದಾಳಿ ನಡೆಸಿದ್ದಾರೆ. ಪಾಟ್ನಾ ಚೌಕ್​ ಸಮೀಪವೇ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸದ್ಯ ಉಗ್ರರ ಹುಡುಕಾಟಕ್ಕಾಗಿ ಘಟನೆ ನಡೆದ ಪ್ರದೇಶವನ್ನು ಸೇನಾ ಪಡೆಗಳು ಸುತ್ತುವರಿದಿದ್ದು, ಉಗ್ರರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಉಗ್ರರ ದಾಳಿ ವೇಳೆ ಜಮ್ಮು ಕಾಶ್ಮೀರ ಸಶಸ್ತ್ರ ಪಡೆ ಸಿಬ್ಬಂದಿಯಿದ್ದ ಬಸ್ ಬುಲೆಟ್ ಪ್ರೂಫ್ ಆಗಿರಲಿಲ್ಲ ಎಂದು ತಿಳಿದು ಬಂದಿದೆ. ಇದರ ಜೊತೆ ಸಶಸ್ತ್ರ ಪಡೆಯ ಪೊಲೀಸರು ಬಂದೂಕುಗಳ ಬದಲಿಗೆ ಗುರಾಣಿಗಳು ಮತ್ತು ಲಾಠಿಗಳನ್ನು ಹೊಂದಿರುತ್ತಾರೆ. ಶಸ್ತ್ರಸಜ್ಜಿತ ಪೋಲೀಸರು ಸಾಮಾನ್ಯವಾಗಿ ಕರ್ತವ್ಯ ಮುಗಿಸಿ ಹಿಂದಿರುಗುವಾಗ ಪೊಲೀಸರೊಂದಿಗೆ ಬರುತ್ತಾರೆ. ಈ ವೇಳೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಕೂಡ ದುಃಖತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಉಗ್ರರ ದಾಳಿಯನ್ನು ಓಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಕಾಶ್ಮೀರದಲ್ಲಿ “ಸಾಮಾನ್ಯ ಸ್ಥಿತಿಯ ಬಗ್ಗೆ ಸುಳ್ಳು ಹೇಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಮೆಹಬೂಬಾ ಮುಫ್ತಿ ಕಿಡಿ ಕಾರಿದ್ದಾರೆ. “ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿಯ ಬಗ್ಗೆ ಭಾರತೀಯ ಸರ್ಕಾರದ ಸುಳ್ಳು ನಿರೂಪಣೆಯು ಬಹಿರಂಗವಾಗಿದೆ, ಆದರೆ ಯಾವುದೇ ಕೋರ್ಸ್ ತಿದ್ದುಪಡಿಯಾಗಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಶಾಸಕ, ಸಿಪಿಐಎಂ ಮುಖಂಡ ಎಂ.ವೈ ತರಿಗಾಮಿ ಟ್ವೀಟ್ ಮಾಡಿದ್ದು, ” ಶ್ರೀನಗರದಲ್ಲಿ ಪೊಲೀಸ್ ಬಸ್ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ.
ಕರ್ತವ್ಯದ ಮಧ್ಯೆ ಮೃತಪಟ್ಟ ಸಿಬ್ಬಂದಿಗೆ ಭಾವಪೂರ್ಣ ಸಂತಾಪ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿರುವ ತರಿಗಾಮಿ ಕೇಂದ್ರ ಸರಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಬಹಳ ದಿನಗಳಿಂದ ಕಾಶ್ಮೀರದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ಕೇಂದ್ರ ಸರಕಾರ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *