- ವಸಂತರಾಜ ಎನ್.ಕೆ
ಚೀನಾದ ಡೀಪ್-ಸೀಕ್ ಎಂಬ ಪುಟ್ಟ ಕಂಪನಿ ಇತ್ತೀಚೆಗೆ ಬಿಡುಗಡೆ ಮಾಡಿದ ಒಂದು ಕೃತಕ ಬುದ್ಧಿಮತ್ತೆಯ ಹೊಸ ಸಾಫ್ಟ್ ವೇರ್ ಅಮೆರಿಕಕ್ಕೆ ಶಾಕ್ ಕೊಟ್ಟಿದೆ. ದೈತ್ಯ ಅಮೆರಿಕನ್ ಕಂಪನಿಗಳ ಈ ಕ್ಷೇತ್ರದ ಚಾಟ್ ಜಿಪಿಟಿ ಇತ್ಯಾದಿ ಉತ್ಪನ್ನಗಳನ್ನು ಎಲ್ಲ ರೀತಿಯಲ್ಲೂ ಹಿಂದೆ ಹಾಕಿದೆ. ಇದನ್ನು 1950ರ ದಶಕದಲ್ಲಿ ಮೊದಲ ಬಾಹ್ಯಾಕಾಶ ನೌಕೆ ‘ಸ್ಫುಟ್ನಿಕ್‘ ಹಾರಿ ಬಿಡುವ ಮೂಲಕ, ತಂತ್ರಜ್ಞಾನದಲ್ಲಿ ಅಮೆರಿಕದ ಮೇಲುಗೈಗೆ ಆಗಿನ ಸೋವಿಯೆಟ್ ಒಕ್ಕೂಟ ಸವಾಲು ಹಾಕಿ ಶಾಕ್ ಕೊಟ್ಟಿದ್ದ ಚಾರಿತ್ರಿಕ ಕ್ಷಣಕ್ಕೆ ಹೋಲಿಸಲಾಗುತ್ತಿದೆ. ಅಧ್ಯಕ್ಷ ಟ್ರಂಪ್ ಅಮೆರಿಕದ ಉದ್ಯಮಕ್ಕೆ “ಎಚ್ಚೆತ್ತುಕೊಳ್ಳಲು ಕರೆ” ಇದು ಎಂದು ಕರೆದಿದ್ದಾರೆ. ಕೃತಕ ಬುದ್ಧಿಮತ್ತೆ ಮತ್ತು ಅದಕ್ಕೆ ಸಂಬಂಧಿತ ಕಂಪನಿಗಳು ಒಂದೇ ದಿನದಲ್ಲಿ (ಜನವರಿ 27) ತಮ್ಮ ಶೇರ್ ಮೌಲ್ಯದಲ್ಲಿ 1 ಟ್ರಿಲಿಯನ್ ಡಾಲರ್ ನಷ್ಟು ನಷ್ಟ ಕಂಡಿವೆ. ಭಾರತಕ್ಕೂ ಇದು ಒಂದು “ಎಚ್ಚರಿಕೆಯ ಗಂಟೆ”. ಇದು ಬರಿಯ ಕೃತಕ ಬುದ್ಧಿಮತ್ತೆ ಅಥವಾ ತಂತ್ರಜ್ಞಾನ ಕ್ಷೇತ್ರದ ಪೈಪೋಟಿಯ ಪ್ರಶ್ನೆ ಮಾತ್ರವಲ್ಲ. ದೀರ್ಘಕಾಲಿನ ಜಾಗತಿಕ ರಾಜಕೀಯ ಪರಿಣಾಮ ಬೀರುವ ವಿದ್ಯಮಾನ. ಏನಿದು ಡೀಪ್-ಸೀಕ್ ನ ‘ಸ್ಪುಟ್ನಿಕ್ ಶಾಕ್’ ಎಂಬುದನ್ನು ನೋಡೋಣ. ಚೀನಾ
ಡೀಪ್-ಸೀಕ್ ಎಂಬ ಚೀನಾದ ಕೃತಕ ಬುದ್ಧಿಮತ್ತೆಯ (ಎಐ) ಕ್ಷೇತ್ರದ ಕಂಪನಿ ಡೀಪ್-ಸೀಕ್-V3 ಮತ್ತು ಡೀಪ್-ಸೀಕ್-R1 ಎಂಬ ಎರಡು ಸಾಫ್ಟ್ ವೇರ್ ಉತ್ಪನ್ನಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊಸ ವಲಯವಾದ, ಕೆಲವು ಶಬ್ದಗಳ ಪ್ರಶ್ನೆ, ಅಗತ್ಯಗಳನ್ನು ತೆಗೆದುಕೊಂಡು ಹೊಸ ಕಂಟೆಂಟ್ (ಪಠ್ಯ, ಕೋಡ್, ಬಿಂಬ, ವಿಡಿಯೊ) ಸೃಷ್ಟಿಸಬಲ್ಲ ಕೃತಕ ಬುದ್ಧಿಮತ್ತೆ ಇರುವ (Generative artificial intelligence) ಉತ್ಪನ್ನ. ಇದಕ್ಕೆ ಸಮಾನಾರ್ಥಕ ಉತ್ಪನ್ನವಾದ ಓಪನ್-ಎಐ ನ ಪ್ರಸಿದ್ಧ ಚಾಟ್ ಜಿಪಿಟಿಯ 01 ಮತ್ತು 03 ನ ಆಪ್ ಸ್ಟೋರ್ ನಲ್ಲಿನ ಡೌನ್ ಲೋಡ್ ಗಳನ್ನು ಮೀರಿಸಿ ಡೀಪ್-ಸೀಕ್ ಎಲ್ಲರಿಗೂ ಶಾಕ್ ಕೊಟ್ಟಿದೆ. ಇದನ್ನು ಹಲವು ಪರಿಣತರು ಪರೀಕ್ಷಿಸಿದ್ದು ಇದುವರೆಗಿನ ಎಲ್ಲ ಉತ್ಪನ್ನಗಳಿಗಿಂತ (ಹೂಡಿಕೆ ವೆಚ್ಚ, ಬಳಕೆಯ ವೆಚ್ಚ, ಅಗತ್ಯ ವಿದ್ಯುತ್ ಶಕ್ತಿ, ಅಗತ್ಯ ಕಂಪ್ಯೂಟರ್ ವೇಗ-ಸಾಮರ್ಥ್ಯ, ದಕ್ಷತೆ ಇತ್ಯಾದಿ) ಎಲ್ಲ ರೀತಿಯಲ್ಲೂ ಉತ್ಕೃಷ್ಟ ಉತ್ಪನ್ನವೆಂದು ಘೋಷಿಸಿದ್ದಾರೆ. ಓಪನ್-ಎಐ ನ ಮುಖ್ಯಸ್ಥ ಸ್ಯಾಮ್ ಅಲ್ಟ್ ಮನ್ ಸಹ “ಮೆಚ್ಚುಗೆಗೆ ಅರ್ಹವಾದ” ಮತ್ತು “ಹೊಸ ಸ್ಫೂರ್ತಿದಾಯಕ ಪೈಪೋಟಿ” ಕೊಡಬಲ್ಲ ಉತ್ಪನ್ನವೆಂದು ಹೊಗಳಿದ್ದಾರೆ.
ಟೆಕ್ ಮಾರುಕಟ್ಟೆ ಅಲ್ಲೋಲ ಕಲ್ಲೋಲ
ಆಪ್ ಸ್ಟೋರ್ ನಲ್ಲಿ ನ ಈವರೆಗಿನ ಜನಪ್ರಿಯ ಚಾಟ್ ಜಿಪಿಟಿಯ ಡೌನ್ ಲೋಡ್ ಗಳನ್ನು ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಡೀಪ್-ಸೀಕ್ ಮೀರುತ್ತಿದ್ದಂತೆ ಯು.ಎಸ್ ಮತ್ತು ಜಾಗತಿಕ ಟೆಕ್ ಮಾರುಕಟ್ಟೆಗಳಲ್ಲಿ ಸೋಮವಾರ (ಜನವರಿ 27ರಂದು) ಅಲ್ಲೋಲ ಕಲ್ಲೋಲವಾಯಿತು. ಕೃತಕ ಬುದ್ಧಿಮತ್ತೆ ಮತ್ತು ಅದಕ್ಕೆ ಸಂಬಂಧಿತ ಕಂಪನಿಗಳ ಶೇರು ಬೆಲೆಯಲ್ಲಿ ಭಾರೀ ಕುಸಿತ ಕಂಡಿತು. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ ಉತ್ಪನ್ನಗಳ ಭಾರೀ ವೇಗ ಮತ್ತು ಸಾಮರ್ಥ್ಯದ ವಿಶೇಷ ಚಿಪ್ ಗಳನ್ನು ತಯಾರಿಸುವ ಎನ್-ವಿಡಿಯಾ ದ ಶೇರು ಬೆಲೆಯಲ್ಲಿ ಕುಸಿತ ಕಂಡು, ಅದು ಸುಮಾರು 17% ಅಂದರೆ 600 ಶತಕೋಟಿ ಡಾಲರ್ ನಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿತು. ಇದು ಯು.ಎಸ್ ಶೇರು ಮಾರುಕಟ್ಟೆ ಯ ಚರಿತ್ರೆಯಲ್ಲೇ ಅತಿ ದೊಡ್ಡ ನಷ್ಟ ಎನ್ನಲಾಗಿದೆ. ಗೂಗಲ್ 100 ಮತ್ತು ಮೈಕ್ರೋಸಾಪ್ಟ್ 7 ಶತಕೋಟಿ ಡಾಲರ್ ಗಳ ಮಾರುಕಟ್ಟೆ ಮೌಲ್ಯ ನಷ್ಟ ಕಂಡಿದೆ. ಇತರ ಹಲವು ಕಂಪನಿಗಳ ಟೆಕ್ ಪ್ರಾಧಾನ್ಯದ ನಾಸ್-ಡಾಕ್ ಸೂಚಕ 3% ಕುಸಿತ ಕಂಡಿತು. ಒಂದು ಹೊಸ ಉತ್ಕೃಷ್ಟ ಬಿಡುಗಡೆಯಾದರೆ ಶೇರು ಮಾರುಕಟ್ಟೆಯಲ್ಲಿ ಯಾಕೆ ಇಂತಹ ಭಾರೀ ಕುಸಿತ ಕಾಣಬೇಕು?
ಇದನ್ನೂ ಓದಿ: ಸರಕಾರದ ಯೋಜನೆಗಳ ವೈಫಲ್ಯಕ್ಕೆ ಮೈಕ್ರೋ ಫೈನಾನ್ಸ್ ಪ್ರಕರಣಗಳೇ ಸಾಕ್ಷಿ: ಹೆಚ್.ಡಿ.ಕುಮಾರಸ್ವಾಮಿ
ಎಐ ಕ್ಷೇತ್ರದ ಅಪಾರ ನಿರೀಕ್ಷೆ,
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮುಂಚೂಣಿ ತಂತ್ರಜ್ಞಾನವಾಗಲಿದ್ದು ಇದು ಎಲ್ಲ ಕ್ಷೇತ್ರಗಳ ಉತ್ಪಾದಕತೆಯನ್ನು ನಿರ್ಣಾಯಕವಾಗಿ ಹೆಚ್ಚಿಸುವುದಲ್ಲದೆ ಹಲವು ಹೊಸ ಆರ್ಥಿಕತೆಯ ವಲಯಗಳನ್ನು ಸೃಷ್ಟಿಸಲಿದೆ. 21ನೆ ಶತಮಾನದ ಪ್ರಮುಖ ಉದ್ಯಮವಾಗಲಿದೆ. ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಹೆಚ್ಚೆಚ್ಚು ವೇಗದ ಗಣಕ ಸಾಮರ್ಥ್ಯ ಇರುವ ಕಂಪ್ಯೂಟರ್ ಚಿಪ್ ತಯಾರಿಕೆಯ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಬೇಕು. ಇಂತಹ ಸಾವಿರಾರು ಚಿಪ್ ಇರುವ ದೊಡ್ಡ ಕಂಪ್ಯೂಟರ್ ಸಂಕೀರ್ಣಗಳು ಮತ್ತು ವಿದ್ಯುತ್ ಶಕ್ತಿ ಸಂಕೀರ್ಣಗಳನ್ನು ಸಹ ಅಭಿವೃದ್ಧಿ ಪಡಿಸಬೇಕು. ತಕ್ಷಣದ ಬಳಕೆ ಕಂಡಿರುವ ಸೃಷ್ಟಿಸಬಲ್ಲ ಕೃತಕ ಬುದ್ಧಿಮತ್ತೆ ಇರುವ (Generative Artificial Intelligence) ಉತ್ಪನ್ನಗಳಿಗೆ. ಎಲ್.ಎಲ್.ಎಂ (ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್) ಗಳನ್ನು ತಯಾರಿಸಲು ಅಪಾರ ಸಂಶೋಧನೆ, ಪ್ರಯೋಗ ಬೇಕು. ಈ ಎಲ್.ಎಲ್.ಎಂ ಗಳಿಗೆ ಮಾನವ ಭಾಷೆ ಅರ್ಥ ಮಾಡಿಕೊಂಡು ಅದಕ್ಕೆ ಸೂಕ್ತ ಮಾಹಿತಿ ಸೃಷ್ಟಿಸಲು ಅದನ್ನು ಅಪಾರ ಮಾಹಿತಿ/ದತ್ತಾಂಶಗಳ ಸಂಗ್ರಹ ಸಿದ್ಧ ಪಡಿಸಬೇಕು. ಇವೆಲ್ಲದಕ್ಕೆ ನುರಿತ ಪರಿಣತರ ಪಡೆ, ಅಪಾರ ಬಂಡವಾಳ ಬೇಕು. ಆದರೆ ಇದಕ್ಕೆ ಅಪಾರ ಲಾಭದ ಸಾಧ್ಯತೆ ಸಹ ಇದೆ. ಇದು ಎಐ ಕ್ಷೇತ್ರದ ಕುರಿತು ಅಪಾರ ನಿರೀಕ್ಷೆ, ಆಸಕ್ತಿ, ಉತ್ಸಾಹಗಳಿಗೆ ಕಾರಣವಾಗಿತ್ತು.
ಗೂಗಲ್, ಫೇಸ್ ಬುಕ್, ಮೈಕ್ರೋಸಾಪ್ಟ್, ಎನ್-ವಿಡಿಯಾ ಮುಂತಾದ ಕಂಪನಿಗಳು ಈ ತಂತ್ರಜ್ಞಾನದಲ್ಲಿ ಅಪಾರ ಹಣ ಹೂಡಿಕೆ ಮಾಡಿದ್ದು, ಹಲವು ಸಾಹಸ ಬಂಢವಾಳ ಕಂಪನಿಗಳ ಬಂಡವಾಳ ಈ ಕ್ಷೇತ್ರಕ್ಕೆ ಹರಿದು ಬರಲಾರಂಭಿಸಿತು. ಕಳೆದ ಕೆಲವು ವರ್ಷಗಳಿಂದ ಶೇರು ಮಾರುಕಟ್ಟೆಯ ಸುಗ್ಗಿ, ಚಲನಶೀಲತೆ ಮತ್ತು ಉತ್ಪಾಹ ಕೃತಕ ಬುದ್ಧಿಮತ್ತೆಯ ಸುತ್ತ ಗಿರಕಿ ಹೊಡೆಯುತ್ತಿತ್ತು. ಮಾರುಕಟ್ಟೆ ಕುಸಿತದ ಹಿಂದಿನ ದಿನವಷ್ಟೇ ಓಪನ್-ಎಐ, ಸಾಫ್ಟ್ ಬ್ಯಾಂಕ್ ಮತ್ತು ಒರಾಕಲ್ ಎಂಬ ದೈತ್ಯ ಕಂಪನಿಗಳು ಸೇರಿ ಸ್ಥಾಪಿಸಿದ ‘ಸ್ಟಾರ್-ಗೇಟ್’ ಎಂಬ ಹೊಸ ಕಂಪನಿಯಲ್ಲಿ ಸರಕಾರ 600 ಶತಕೋಟಿ ಡಾಲರು ಹೂಡಿಕೆ ಮಾಡಬೇಕೆಂದು ಕೇಳಿದ್ದವು.
ಯಾಕೆ ಶೇರು ಕುಸಿತ
ಆದರೆ 2019ರಲ್ಲಿ ಸ್ಥಾಪಿತವಾದ ಚೀನಾದ ಸಣ್ಣ ಸ್ಟಾರ್ಟ್ ಅಪ್ ಕಂಪನಿ ಡೀಪ್-ಸೀಕ್ ಉತ್ಕೃಷ್ಟ ಉತ್ಪನ್ನ ತಯಾರಿಸಿದ್ದು ಮಾತ್ರವಲ್ಲ, ಅದರ ಹೂಡಿಕೆ ಕೇವಲ 55 ಲಕ್ಷ ಡಾಲರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಪೈಪೋಟಿ ನೀಡದಂತೆ ಚೀನಾಕ್ಕೆ ಅತ್ಯಾಧುನಿಕ ಚಿಪ್ ಗಳ ರಫ್ತು ನಿಷೇಧ ಮಾಡಿದ್ದರಿಂದ, ಚಾಟ್ ಜಿಪಿಟಿ ಬಳಸಿದ ಎನ್-ವಿಡಿಯಾದ ಅತ್ಯಾಧುನಿಕ ಎಚ್.100 ಬದಲು ಅದಕ್ಕಿಂತ ಬಹಳ ಕಡಿಮೆ ಸಾಮರ್ಥ್ಯದ ಎಚ್-800 ಚಿಪ್ ಗಳನ್ನು ಬಳಸಿತ್ತು. ಇದರಿಂದಾಗಿ ವಿದ್ಯುತ್ ಶಕ್ತಿ ಅಗತ್ಯ ಸಹ ಕಡಿಮೆಯಾಗಿತ್ತು. ಚಾಟ್ ಜಿಪಿಟಿ ಸಮಾನವಾದ ಬಳಕೆಯ ಸಾಧ್ಯತೆ, ಸಾಮರ್ಥ್ಯ ಸಾಧಿಸಲು ಎಲ್.ಎಲ್.ಎಮ್ (ಭಾಷಾ ಮಾಡೆಲ್) ಮತ್ತು ಅದರ ತರಬೇತಿ ಮಾಹಿತಿ/ದತ್ತಾಂಶದಲ್ಲಿ ಅತ್ಯಂತ ದಕ್ಷವಾದ ವಿನ್ಯಾಸಗಳನ್ನು ಬಳಸಿತ್ತು. ಅಧಿಕ ಸಾಮರ್ಥ್ಯದ ಕಂಪ್ಯೂಟರ್ ಚಿಪ್ ಮತ್ತು ಅಪಾರ ಬಂಢವಾಳದ ಕೊರತೆಯೇ ಈ ದಕ್ಷವಾದ ವಿನ್ಯಾಸಕ್ಕೆ ದಾರಿ ಮಾಡಿಕೊಟ್ಟಿದೆ. ಅಲ್ಲದೆ ಡೀಪ್-ಸೀಕ್ ಓಪನ್-ಸೋರ್ಸ್ ಉತ್ಪನ್ನವಾಗಿದ್ದು ಅದರ ಬಳಕೆ ಮತ್ತು ಪರಿಶೀಲನೆ ಸುಲಭ.
ಡೀಪ್-ಸೀಕ್ ಸಮಾನವಾದ ಉತ್ಕೃಷ್ಟ ಉತ್ಪನ್ನದ ದಕ್ಷತೆ, ಅಮೆರಿಕನ್ ಕಂಪನಿಗಳ ಉತ್ಪನ್ನದ ಅದಕ್ಷತೆಯನ್ನು ಬಯಲು ಮಾಡಿದೆ. ಯು.ಎಸ್ ಕೃತಕ ಬುದ್ಧಿಮತ್ತೆ ಉದ್ಯಮ ಅನಗತ್ಯವಾದ ಭಾರೀ ಕಂಪ್ಯೂಟರ್ ಸಾಮರ್ಥ್ಯ ಮತ್ತು ಅಪಾರ ಬಂಡವಾಳವನ್ನು ಕೇಳುತ್ತಿದೆ. ಇದು ಅದರ ಅದಕ್ಷತೆಯ ಸೂಚನೆ ಅಥವಾ ಹೂಡಿಕೆದಾರರಿಗೆ ಮೋಸ ಮಾಡಲಾಗುತ್ತಿದೆ. ಅದು ಏನೇ ಇದ್ದರೂ ಇತರ ದಕ್ಷ ಉತ್ಪನ್ನಗಳ ಪೈಪೋಟಿ ಬಂದಾಗ ಭಾರೀ ಲಾಭ ದೂರ ಉಳಿಯಿತು, ಇವು ವಿಫಲವಾಗಿ ಹೂಡಿಕೆಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂಬ ಭಾವನೆ ಹೂಡಿಕೆದಾರರಿಗೆ ಬಂದು ಅವರು ಶೇರುಗಳನ್ನು ಮಾರಲು ಶುರು ಮಾಡಿದ್ದರಿಂದ ಶೇರು ಬೆಲೆ ಕುಸಿತ ಕಂಡಿತು. ಅಲ್ಲದೆ ಎಐ ಸಾಧ್ಯತೆಗಳನ್ನು ಸಾಧಿಸಲು ಇನ್ನಷ್ಟು ಅಗ್ಗವಾದ ದಕ್ಷವಾದ ಇತರ ಸಾಧ್ಯತೆಗಳಿವೆ ಎಂಬುದು ನಿಜವಾದ ಹೂಡಿಕೆದಾರರಿಗೆ ಮನದಟ್ಟಾಗಿದ್ದು ದೈತ್ಯ ಟೆಕ್ ಕಂಪನಿಗಳಲ್ಲಿ ನಡುಕ ತಂದಿದೆ.
‘ಸ್ಪುಟ್ನಿಕ್ ಶಾಕ್’’ ಯಾಕೆ ?
ಈ ಕುಸಿತವನ್ನು ‘ಸ್ಪುಟ್ನಿಕ್ ಶಾಕ್’’ ಎಂದು ಯಾಕೆ ಕರೆಯಲಾಗಿದೆ? ವಿಜ್ಞಾನ-ತಂತ್ರಜ್ಞಾನದ ಹೆಚ್ಚಿನ ಕ್ಷೇತ್ರಗಳಲ್ಲಿ ಚೀನಾ ಈಗಾಗಲೇ ತೀವ್ರ ಮುನ್ನಡೆ ಸಾಧಿಸಿದೆ. ಆದರೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಅಪಾರ ಹೂಡಿಕೆ ಪ್ರಗತಿ ಸಾಧಿಸಿದ್ದು ಯು.ಎಸ್ ಮುಂದಿರುವುದು ಮಾತ್ರವಲ್ಲ, ಅಜೇಯವಾಗಿದೆ ಎಂದು ಭಾವಿಸಲಾಗಿತ್ತು. ಚೀನಾ ಈ ಕ್ಷೇತ್ರದಲ್ಲಿ ಪೈಪೋಟಿ ಕೊಡದಂತೆ ಇದಕ್ಕೆ ಅತ್ಯಗತ್ಯವಾದ ಅತ್ಯಾದುನಿಕ ಕಂಪ್ಯೂಟರ್ ಚಿಪ್ ಮತ್ತು ಅದರ ತಂತ್ರಜ್ಞಾನದ ರಫ್ತು ನಿಷೇಧ ಮಾಡಿತ್ತು. ಇದಲ್ಲದೆ ಇಂತಹ ಸೃಜನಾತ್ಮಕ ಕ್ಷೇತ್ರದಲ್ಲಿ ಚೀನಾ ಮುನ್ನಡೆ ಸಾಧಿಸಲು ಸಾಧ್ಯವಿಲ್ಲವೆಂದು ಭಾವಿಸಲಾಗಿತ್ತು. ಆದರೆ ಡೀಪ್-ಸೀಕ್ ಈ ಭಾವನೆಗೆ ನೇರ ಏಟು ಕೊಟ್ಟಿದೆ, ಅದು ಸುಳ್ಳೆಂದು ಸಿದ್ಧಪಡಿಸಿದೆ.
1950ರ ದಶಕದಲ್ಲಿ ಮೊದಲ ಬಾಹ್ಯಾಕಾಶ ನೌಕೆ ‘ಸ್ಫುಟ್ನಿಕ್ ‘ ಹಾರಿ ಬಿಡುವ ಮೂಲಕ, ತಂತ್ರಜ್ಞಾನದಲ್ಲಿ ಅಮೆರಿಕದ ಮೇಲುಗೈಗೆ ಆಗಿನ ಸೋವಿಯೆಟ್ ಒಕ್ಕೂಟ ಸವಾಲು ಹಾಕಿತ್ತು. ‘ಡೀಪ್-ಸೀಕ್’ ಅಂತಹುದೇ ಶಾಕ್ ಕೊಟ್ಟಿದೆ. ಈಗಾಗಲೇ ಸೂಪರ್ ಸಾನಿಕ್ ಕ್ಷಿಪಣಿ, ಡ್ರೋನ್, ಇಸ್ರೇಲಿ ಐರನ್ ಡೋಮ್ ಬೇದಿಸಿದ್ದು ಮುಂತಾದವುಗಳ ಮೂಲಕ ಉಕ್ರೇನ್ ಮತ್ತು ಇಸ್ರೇಲಿ ಯುದ್ಧದಲ್ಲಿ ರಶ್ಯಾ ಮತ್ತು ಚೀನಾ ಎರಡೂ ಮಿಲಿಟರಿ ತಂತ್ರಜ್ಞಾನದಲ್ಲೂ ಭಾರೀ ಮುನ್ನಡ ಸಾಧಿಸಿವೆ ಎಂದು ಸಿದ್ಧವಾಗಿದೆ. ಇದು ಯು.ಎಸ್ ನ ವಿಜ್ಞಾನ-ತಂತ್ರಜ್ಞಾನ ಮತ್ತು ಹೈ ಟೆಕ್ ಉದ್ಯಮದ ಮತ್ತು ಸರಕಾರದ ಅಹಂಕಾರ ಮತ್ತು ಆತ್ಮವಿಶ್ವಾಸಕ್ಕೆ ಭಾರೀ ಶಾಕ್ ಕೊಟ್ಟಿದೆ ಮತ್ತು ಆಘಾತಕಾರಿಯಾಗಿದೆ.
‘ಡೀಪ್-ಸೀಕ್’ ಯು.ಎಸ್ ಟೆಕ್ ಮಾರುಕಟ್ಟೆಯ ಅದಕ್ಷತೆ, ಬುರುಡೆಗಳನ್ನು ಬಯಲು ಮಾಡಿ ಅದರ ಮುಂದಿನ ಬೆಳವಣಿಗೆಗೂ ಕೊಡಲಿಯೇಟು ಹಾಕಿದೆ. ಶೇರು ಮಾರುಕಟ್ಟೆಯ ಸುಗ್ಗಿ ಎಐ ತಂತ್ರಜ್ಞಾನದ ಕುರಿತ ಭರವಸೆ, ಉತ್ಸಾಹದ ಮೇಲೆ ವೀಪರೀತವಾಗಿ ಆಧಾರಿತವಾಗಿದ್ದು, ಅದರ ಸಾಧ್ಯತೆ ಮತ್ತಿತರ ವಿವರಗಳು ಅತಿಶಯೋಕ್ತಿಯಿಂದ ಕೂಡಿವೆ. ಇದು ಹೊಸ ‘ಗುಳ್ಳೆ’ಯಾಗಿದ್ದು 2000 ದ ಡಾಟ್-ಕಾಮ್ ಗುಳ್ಳೆಯಂತೆ ಒಡೆದು ಹೋದಾಗ ಭಾರೀ ಶೇರು ಮಾರುಕಟ್ಟೆ ಕುಸಿತ ಮತ್ತು ಆರ್ಥಿಕದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಬಹುದು ಎಂದು ಹಲವು ಪರಿಣತರು ಎಚ್ಚರಿಸುತ್ತಿದ್ದರು. ಅದು ಈಗ ನಿಜವಾಗುವ ಲಕ್ಷಣಗಳಿವೆ.
ಉಕ್ರೇನ್ ಮತ್ತು ಇಸ್ರೇಲಿ ಯುದ್ಧದಲ್ಲಿ ಹೆಚ್ಚು ಕಡಿಮೆ ಸೋಲು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಇದ್ದರೂ,ಅಧ್ಯಕ್ಷತೆ ವಹಿಸಿದ ಕೂಡಲೇ ಕೆನಡಾ, ಪನಾಮಾ, ಗ್ರೀನಲ್ಯಾಂಡ್ ಗಳಿಗೆ ಬೆದರಿಕೆ ಹಾಕಿದ ಟ್ರಂಪ್ ಸಾಮ್ರಾಜ್ಯಶಾಹಿ ಅಹಂಕಾರಕ್ಕೆ ಸಹ ಇದು ಇನ್ನೊಂದು ಪೆಟ್ಟು ಆಗಲಿದೆ. ಇದು ಬರಿಯ ಕೃತಕ ಬುದ್ಧಿಮತ್ತೆ ಅಥವಾ ತಂತ್ರಜ್ಞಾನ ಕ್ಷೇತ್ರದ ಪೈಪೋಟಿಯ ಪ್ರಶ್ನೆ ಮಾತ್ರವಲ್ಲ. ಯು.ಎಸ್ ತಂತ್ರಜ್ಞಾನ ಮೇಲುಗೈ ಗೆ ನೇರ ಸವಾಲು ಹಾಕುವ ಮೂಲಕ ಮತ್ತು ಇನ್ನೊಂದು ನಿರ್ಣಾಯಕ ಕ್ಷೇತ್ರದಲ್ಲಿ ಚೀನಾದ ಮೇಲುಗೈ ತೋರಿಸುವ ಮೂಲಕ ಯು.ಎಸ್ ನ ಸಮಗ್ರ ಅಧಿಪತ್ಯಕ್ಕೆ ತೀವ್ರ ಸವಾಲನ್ನು ಗಟ್ಟಿಗೊಳಿಸಿದೆ. ಇದು ದೀರ್ಘಕಾಲಿನ ಜಾಗತಿಕ ರಾಜಕೀಯ ಪರಿಣಾಮ ಬೀರುವ ವಿದ್ಯಮಾನ.
ನಿರ್ಣಾಯಕ ವಿಜ್ಞಾನ-ತಂತ್ರಜ್ಞಾನ ಮತ್ತು ಹೈ ಟೆಕ್ ಉದ್ಯಮದ ಕ್ಷೇತ್ರಗಳಲ್ಲಿ ಯು.ಎಸ್ ಅಥವಾ ಯಾವುದೇ ದೇಶದ ತಂತ್ರಜ್ಞಾನ ಮತ್ತು ಬಂಡವಾಳದ ಹಂಗಿಲ್ಲದೆ, ಸ್ವಾಯತ್ತ ಸ್ವಾವಲಂಬಿ ಬೆಳವಣಿಗೆಗೆ ಹೂಡಿಕೆ ಮಾಡಬೇಕು ಎಂಬುದು ಭಾರತಕ್ಕೂ ಇದೊಂದು ಪಾಠವಾಗಬೇಕು.
ಇದನ್ನೂ ನೋಡಿ: ಹಾಸ್ಟೆಲ್, ವಸತಿ ಶಾಲಾ ಹೊರ ಗುತ್ತಿಗೆ ನೌಕರರ ಪ್ರತಿಭಟನೆ Janashakthi Media