ಪ್ರಾಮಾಣಿಕ ಬಡ ಸ್ಪರ್ಧಾಕಾಂಕ್ಷಿಗಳಿಗೆ ಹೊಟ್ಟೆ ಮೇಲೆ ಹೊಡೆಯುವ ಬಿಜೆಪಿ: ಎಂ.ಕೆ. ಸಾಹೇಬ್ ನಾಗೇಶನಹಳ್ಳಿ

ಕೊಪ್ಪಳ: ಬಡತನದಲ್ಲಿ ಕಷ್ಟಪಟ್ಟು ಶಿಕ್ಷಣ ಪಡೆಯುವ ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಷ್ಟಪಟ್ಟು ಓದಿದರೂ ಇಂದಿನ ದಿನಗಳಲ್ಲಿ ಉತ್ತಮವಾದ ಉದ್ಯೋಗ ಲಭಿಸದೆ ನಿರಾಶೆಗೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಅಲ್ಲದೆ, ರಾಜ್ಯದಲ್ಲಿ ತಾಂಡವವಾಡುತ್ತಿರುವ 40 ಕಮಿಷನ್‌ ಎಂಬ ಭಾರೀ ಅವ್ಯವಹಾರದಲ್ಲಿ ಬಡವರ ಕನಸು ನುಚ್ಚುನೂರು ಮಾಡಲಾಗಿತ್ತಿದೆ ಎಂದು ಆಮ್‌ ಆದ್ಮಿ ಪಕ್ಷ(ಎಎಪಿ)ದ ಕೊಪ್ಪಳ ಜಿಲ್ಲೆ ಸಂಘಟನಾ ಕಾರ್ಯದರ್ಶಿ ಎಂ.ಕೆ. ಸಾಹೇಬ್‌ ನಾಗೇಶನಹಳ್ಳಿ ಆರೋಪಿಸಿದ್ದಾರೆ.

ಪಿಎಸ್‌ಐ ಅಕ್ರಮಕ್ಕೆ ಸಂಬಂಧಿಸಿ ಕನಕಗಿರಿ ಶಾಸಕ ಬಸವರಾಜ್‌ ದಡೆಸೂರು ಅಭ್ಯರ್ಥಿಯಿಂದ ರೂ.15 ಲಕ್ಷ ಪಡೆದಿರುವ ಕುರಿತು ಬೆಳಕಿಗೆ ಬಂದಿದ್ದು ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂ.ಕೆ. ಸಾಹೇಬ್‌ ನಾಗೇಶನಹಳ್ಳಿ ಬಡ ಯುವಕರ ಕನಸಿನ ಮೇಲೆ 40% ಕಮಿಷನ್ ಬಿಜೆಪಿ ಪಕ್ಷದವರು ಪಿ.ಎಸ್.ಐ. ನೌಕರಿಗಳನ್ನು ಮಾರುಕಟ್ಟೆಯಲ್ಲಿ ತರಕಾರಿ ಮಾರುವಂತೆ ಮಾರಾಟ ಮಾಡುತ್ತಿದ್ದಾರೆ. ಶಾಸಕ ಬಸವರಾಜ್ ದಡೆಸೂರು 15 ಲಕ್ಷ ರೂ. ಪಡೆದು ನೌಕರಿ ಕೊಡಿಸುವುದಾಗಿ ಮೋಸ ಮಾಡಿದ್ದಾನೆ.  ಪ್ರಾಮಾಣಿಕ ಸ್ಪರ್ಧಾಕಾಂಕ್ಷಿಗಳಿಗೆ ದ್ರೋಹ ಬಗೆದಿದ್ದಾರೆ. ಶಾಸಕರ ವಿರುದ್ಧ ಎಫ್.ಐ.ಆರ್ ಹಾಕಿ ಬಂಧನಕ್ಕೆ ಒಳಪಡಿಸಿ ಪಿ.ಎಸ್.ಐ ಆಕಾಂಕ್ಷಿಗಳಿಗೆ ನ್ಯಾಯ ದೊರಕಿಸಬೇಕೆಂದು ಎಎಪಿ ಪಕ್ಷದ ಆಗ್ರಹ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತಿದ ತಕ್ಷಣ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಆರಂಭಿಸುತ್ತಾರೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತಣ್ಣೀರು ಕುಡಿದು ಓದಲು ಕೂರುತ್ತಾರೆ. ಬೆಳಗ್ಗೆ ನಾಲ್ಕೈದು ಘಂಟೆಗೆ ಎದ್ದು ಕಿಲೋಮೀಟರ್ ಗಟ್ಟಲೆ ಓಡುತ್ತಾರೆ. ಕೆಲಸ ಮಾಡುವ ಸ್ನೇಹಿತರ ಹತ್ತಿರ ಸಾಲ ಮಾಡಿ ಬಾಡಿಗೆ ಕೊಠಡಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಊಟಕ್ಕೆ ಯಾವುದೋ ದೂರದ ಹಾಸ್ಟೆಲ್ ನಲ್ಲಿ ವಾರ್ಡನ್ ಗೆ ಗೊತ್ತಾಗದಂತೆ ಕದ್ದು ಮುಚ್ಚಿ ಹೋಗಿ ಒಂದೊತ್ತು ಊಟ ಮಾಡುತ್ತಾರೆ ಇಂಥಹ ಹಲವು ಕಷ್ಟಗಳನ್ನು ವಿದ್ಯಾರ್ಥಿಗಳು ಅನುಭವಿಸುತ್ತಾರೆ ಎಂದರು.

ಇವೆಲ್ಲವೂಗಳ ನಡುವೆ, ಮನೆಯಲ್ಲಿ ಏನೇ ಸಂಭ್ರಮ ಸಡಗರ, ಹಬ್ಬ ಹರಿದಿನಗಳಿದ್ದರು ಹೋಗದೆ ವಿದ್ಯಾರ್ಥಿಗಳು ಕಂಡ ಕನಸಿನ ಮಂಜಿಲುನ್ನು ಮುಟ್ಟಬೇಕು ಎಂದು ಖುಷಿಯನ್ನು ತ್ಯಾಗ ಮಾಡಿ ಓದುತ್ತಾರೆ. ನಾನು ಸಹ ಕೆಲವೊಮ್ಮೆ ಒಂದೊತ್ತಿಗೆ ಊಟಕ್ಕೂ ಪರದಾಟ ಮಾಡಿಕೊಂಡು ಧಾರವಾಡ, ವಿಜಯಪುರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವ  ಸಮಯದಲ್ಲಿ ಅಲೆದಾಡಿದ್ದೇನೆ ಮತ್ತು ಅಲೆದಾಡುವ ನನ್ನ ಸ್ನೇಹಿತರನ್ನು ಕಣ್ಣಾರೆ ಕಂಡು ಸಂಕಟ ಪಟ್ಟಿದ್ದೇನೆ ಎಂದರು.

ಇಷ್ಟೊಂದು ಸವಾಲು ಕಷ್ಟಕಾರ್ಪಣ್ಯಗಳನ್ನು ಎದುರಿಸುವ ವಿದ್ಯಾರ್ಥಿಗಳಿಂದ ಹಣ ಪೀಕುತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ)ದವರು ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಹಾಳು ಮಾಡಲು, ಉದ್ಯೋಗಾಕಾಂಕ್ಷಿಗಳ ಬದುಕನ್ನು ನಿರ್ನಾಮ ಮಾಡಲು ಮುಂದಾಗಿದ್ದಾರೆ. ಕನಕಗಿರಿ ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಯುವಜನತೆ ಸಂಘಟಿತರಾಗಿ ಹೋರಾಟಕ್ಕೆ ಇಳಿಯಬೇಕು ಎಂದು ಕರೆ ನೀಡಿದರು.

Donate Janashakthi Media

One thought on “ಪ್ರಾಮಾಣಿಕ ಬಡ ಸ್ಪರ್ಧಾಕಾಂಕ್ಷಿಗಳಿಗೆ ಹೊಟ್ಟೆ ಮೇಲೆ ಹೊಡೆಯುವ ಬಿಜೆಪಿ: ಎಂ.ಕೆ. ಸಾಹೇಬ್ ನಾಗೇಶನಹಳ್ಳಿ

  1. ನಾಡಿನ ಯಲ್ಲಾ ವಿವಕರು ಸೇರಿ ದೊಡ್ಡ ಮಟ್ಟದಲ್ಲಿ ಸಂಘಟನೆ ಮಾಡುವ ಅವಶ್ಯಕತೆ ಇದೆ. ನಾವು ಯಲ್ಲಾ ವಿವಕರು ಮತ್ತು ವಿದ್ಯಾರ್ಥಿಗಳು ಸಂಘಟಿಸುವುದು ನಮ್ಮ ಹಕ್ಕು ಕೂಡ ಆಗಿದೆ ಅದಕ್ಕೆ ಯಲ್ಲರೂ ಬೆಂಬಲಿಸಿ.
    💪🤴💪

Leave a Reply

Your email address will not be published. Required fields are marked *