ಮಡಿಕೇರಿ: ಮನೆಯಲ್ಲಿನ ಹಣ, ಬ್ಯಾಂಕಿನ ಹಣ, ಹಣಕಾಸು ಸಂಸ್ಥೆಗಳ ಖಜಾನೆ ಲೂಟಿಯಾಗುವುದನ್ನು ಆಗಾಗ ವರದಿಗಳಾಗುತ್ತಿರುತ್ತವೆ. ಆದರೆ, ಇಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯ ಖಜಾನೆಯಲ್ಲಿನ ಹಣವನ್ನು ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.
ನಗದು ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿಯ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯ ನಂತರ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ಇಬ್ಬರು ದ್ವಿತೀಯ ವಿಭಾಗದ ಸಹಾಯಕರು ಮತ್ತು ಎಸ್‌ಪಿ ಕಚೇರಿಯ ಡಿ ಗ್ರೂಪ್ ಉದ್ಯೋಗಿಯನ್ನು ಅಮಾನತುಗೊಳಿಸಿದೆ.
ಇದನ್ನು ಓದಿ: ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ದಾಳಿ ಮಾಡಿದ ಸಿಸಿಬಿ ಪೊಲೀಸರು
ಕೊಡಗು ಜಿಲ್ಲೆಯಲ್ಲಿ. ಈ ಬಗ್ಗೆ ಹಣ ಕಳವಾಗಿರುವ ಬಗ್ಗೆ ಎಸ್‌ಪಿಗೆ ನಗದು ಶಾಖೆಯ ವಿಷಯ ನಿರ್ವಾಹಕ ಬರೆದಿರುವ ಪತ್ರದಿಂದ ವಿಷಯ ಬಹಿರಂಗಗೊಂಡಿದೆ. ಕೊಡಗು ಪೊಲೀಸ್ ಇಲಾಖೆಗೆ ವಿವಿಧ ಮೂಲಗಳಿಂದ ಸಂಗ್ರಹವಾಗಿದ್ದ 16.96 ಲಕ್ಷ ರೂಪಾಯಿ ಹಣವನ್ನು ಎಸ್‌ಪಿ ಕಚೇರಿಯ ಖಜಾನೆ ಸುಪದ್ರಿಯಲ್ಲಿ ಇಡಲಾಗಿತ್ತು. ಅದು ಕೂಡ ಪೊಲೀಸ್ ಸಿಬ್ಬಂದಿಯೇ ಲೂಟಿ ಮಾಡಿರಬಹುದು ಎಂಬ ಅನುಮಾನ ಮೂಡಿವೆ.
2020-2021 ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಿಂದ 7,38,450 ರೂಪಾಯಿ ಸಂಗ್ರಹವಾಗಿತ್ತು. ಜೊತೆಗೆ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕಿ ಸಂಗ್ರಹಿಸಿದ್ದ 9,28,000 ರೂಪಾಯಿ ಸಂಗ್ರಹವಾಗಿತ್ತು. ಈ ಹಣವನ್ನು ಪೊಲೀಸ್ ವರಿಷ್ಠಾಧಿಕಾರಿ ಅವರ ನಗದು ಶಾಖೆಯ ಖಜಾನೆಯಲ್ಲಿ ಇಡಲಾಗಿತ್ತು. ಈ ಹಣವನ್ನು ಸಂದಾಯ ಮಾಡುವುದಕ್ಕಾಗಿ ಖಜಾನೆ ಬೀಗ ತೆಗೆಯಲು ಹೋದಾಗ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ.
ನಗದು ಶಾಖೆಯ ನಿರ್ವಾಹಕರಾದ ರಂಜಿತ್ ಕುಮಾರ್ ಈ ಹಣವನ್ನು ಖಜಾನೆಯಲ್ಲಿಟ್ಟದ್ದರಂತೆ. ಹಣವನ್ನು ಸರಕಾರಕ್ಕೆ ಸಂದಾಯ ಮಾಡಲು ಖಜಾನೆ ಬಾಗಿಲು ತೆಗೆಯುವುದಕ್ಕೆ ಹೋಗಿದ್ದಾರೆ. ಈ ವೇಳೆ ಅದರ ಬೀಗ ತೆಗೆದಿರುವುದು ಗೊತ್ತಾಗಿದೆ. ಅದನ್ನು ಪರಿಶೀಲನೆ ನಡೆಸಿದಾಗ ಹಣ ಕಳವಾಗಿದೆ ಎನ್ನಲಾಗಿದೆ. ಹೀಗಾಗಿ ರಂಜಿತ್ ಕುಮಾರ್ ಅವರು ಎಸ್‌ಪಿಗೆ ಪತ್ರವನ್ನು ಬರೆದಿದ್ದಾರೆ.
ಈ ನಗದು ಕಳವು ಮಾಡಿರುವುದರ ಹಿಂದೆ ಕಚೇರಿಯಲ್ಲಿ ಸಿಬ್ಬಂದಿಗಳಾದ ದಲಾಯತ್ ಮತ್ತು ವಿನೋದ್ ಕುಮಾರ್ ಎಂಬವರ ಮೇಲೆ ಅನುಮಾನ ಬಂದಿದ್ದು, ಈ ಹಿಂದೆ ಖಜಾನೆ ಕೀಲಿ ಕಳೆದು ಹೋಗಿತ್ತು ಮತ್ತು ಹಣ ಕಳೆದು ಹೋಗಿರುವ ಘಟನೆ ಬೆಳಕಿಗೆ ಬರುವುದಕ್ಕೆ ಎರಡು ದಿನದ ಮುನ್ನ ಇವರಿಬ್ಬರು ಸಿಬ್ಬಂದಿ ಖಜಾನೆ ಕಡೆಗೆ ಹೋಗಿ ಬರುತ್ತಿದ್ದನ್ನು ಉಳಿದ ಸಿಬ್ಬಂದಿ ನೋಡಿದ್ದಾರೆ.
ಹೀಗಾಗಿ ಖಜಾನೆಯಿಂದ ಹಣ ಲೂಟಿ ಆಗಿರುವುದರ ಹಿಂದೆ ಇವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಎಸ್‌ಪಿ ಅವರಿಗೆ ದೂರು ನೀಡಿದ್ದಾರೆ. ಇದೀಗ ತನಿಖೆ ಆರಂಭವಾಗಿದ್ದು, ನಿಖರವಾದ ಮಾಹಿತಿಯ ಬಳಿಕ ಅನುಮಾನ ಬಗೆಹರಿಯಲಿದೆ. ಈ ಕುರಿತು ಎಸ್‌ಪಿ ಕ್ಷಮಾ ಮಿಶ್ರಾ ಅವರ ಪ್ರತಿಕ್ರಿಯೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.