-ಉದಯ ಗಾಂವಕಾರ
ತಲೆಗೆ ಹೆಡ್ ಲೈಟ್ ಕೈಯಲ್ಲಿ ಕೋವಿ ಹಿಡಿದು ಕಾಡಿಗೆ ನಡೆಯುವ ನನ್ನ ದೊಡ್ಡಪ್ಪನ ಮಗ ಪ್ರತಿ ರಾತ್ರಿ ಮರಳಿ ಬರುವಾಗಲೂ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡ ಕಾಡಹಂದಿಯ ಕತೆಯನ್ನೋ, ಬರ್ಕಗಳ ಹಿಂಡು ಎದುರು ನಿಂತಾಗ ಕೈಕೊಟ್ಟ ಕೋವಿಯ ಬಗ್ಗೆ ದೂರನ್ನೋ ಹೇಳುವುದು ರೂಢಿ. ಮಾಂಸದೂಟದ ಹಂಬಲದಲ್ಲಿ ಬದುಕಿನ ಹಲವು ರಾತ್ರಿಗಳನ್ನು ಶಿಕಾರಿಗಾಗಿ ವಿನಿಯೋಗಿಸುವ ಆತನನ್ನೂ, ಆತ ತನ್ನ ಶಿಕಾರಿಯ ಜೊತೆ ಮರಳುತ್ತಾನೆ ಎಂದು ನಿರೀಕ್ಷಿಸುತ್ತಾ ರಾತ್ರಿಯೂಟವನ್ನು ತಡವಾಗಿ ಮಾಡುವ ಊರಿನ ಹತ್ತು ಹಲವರನ್ನೂ ನೋಡುವಾಗೆಲ್ಲ ಮನುಷ್ಯನ ಯಾವುದೋ ಜೀನಿನ ಡಿ.ಎನ್.ಎ ಸರಪಳಿಯ ಅದ್ಯಾವುದೋ ಪ್ರೋಟೀನು ಸರಣಿಯು ಮಾಂಸಕ್ಕಾಗಿ ಸದಾ ಹಪಾಹಪಿಸುತ್ತದೆ ಎಂದೇ ಅನ್ನಿಸುತ್ತದೆ. ಹಿಂಡಿ
ಮಾಸ್ತಿ, ಜಟ್ಟಿಗ, ಹುಲದೇವ್ರು, ಬೇಟೆಬೀರ ಮುಂತಾದ ನಮ್ಮೂರ ದೇವರುಗಳಿಗೂ ಕೋಳಿ, ಕುರಿಗಳೇ ಬೇಕು. ಅಷ್ಟಮಂಗಲ ಪ್ರಶ್ನೆ, ಅಷ್ಟಬಂಧ- ಜೀರ್ಣೋದ್ಧಾರಗಳ ನಂತರ ಭೂಮ್ತಾಯಿ, ಕೀಳು, ಮಾಸ್ತಿ ಮತ್ತಿತ್ಯಾದಿ ದೇವರುಗಳೆಲ್ಲ ತಮ್ಮ ಆಧಾರಕಾರ್ಡು ಅಪ್ಡೇಟು ಮಾಡಿಕೊಂಡು ಶಾಂತಿಕಾ ಪರಮೇಶ್ವರಿಯೋ ಕಾಂಚಿಕಾಂಬೆಯೋ ಆಗಿವೆ. ಅದಕ್ಕೂ ಮೊದಲು ಈ ಎಲ್ಲ ದೇವರುಗಳೂ ಅಪ್ಪಟ ಬಾಡೂಟದ ದೇವರುಗಳೇ ಆಗಿದ್ದವು. ಹಿಂಡಿ
ಮಾಂಸಾಹಾರದ ಕುರಿತು ಇತ್ತೀಚೆಗೆ ಸ್ವತಃ ಮಾಂಸಾಹಾರಿಗಳಲ್ಲೂ ಮಡಿವಂತಿಕೆ ಹೆಚ್ಚುತ್ತಿದೆ. ಕೆಲವು ಶಾಲೆಗಳು ತಮ್ಮ ವಿದ್ಯಾರ್ಥಿಗಳ ಟಿಫಿನ್ ಬಾಕ್ಸಿನಲ್ಲಿ ಮಾಂಸಾಹಾರ ಇರಬಾರದೆಂದು ಕಟ್ಟಪ್ಪಣೆ ಮಾಡಿರುವುದು ಸುದ್ದಿ ಆಗುವುದಿಲ್ಲ. ಆದರೆ, ಯಾವುದೋ ಶಾಲೆಯಲ್ಲಿ ಶಿಕ್ಷಕರು ತಮ್ಮದೇ ದುಡ್ಡಿನಲ್ಲಿ ಮಾಂಸಾಹಾರ ತರಿಸಿಕೊಂಡು ತಿಂದದ್ದು ಸುದ್ದಿ ಆಗುತ್ತದೆ. ಮಾಂಸಾಹಾರಿಯಾಗಿರುವವರು ಎಂದಿನಂತೆ ಮಾಂಸಾಹಾರ ಸೇವಿಸಿ ದೇವಸ್ಥಾನವನ್ನು ಪ್ರವೇಶಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. ಮುಕ್ಕಾಲು ಪಾಲು ಮಾಂಸಾಹಾರಿಗಳಿರುವ ದೇಶದಲ್ಲಿಯೇ ಮಾಂಸಾಹಾರಕ್ಕೆ ನೈತಿಕತೆಯ ನಂಟು ಮೆತ್ತಿಕೊಂಡದ್ದು ಹೇಗೆ ಎಂಬುದು ಅಚ್ಚರಿಯ ವಿಷಯ. ಹಿಂಡಿ
ಈಗ ಮಾರುಕಟ್ಟೆಯಲ್ಲಿ ಮಾಂಸಾಹಾರಕ್ಕೆ ಬದಲಿಯಾದ ಆದರೆ, ಮಾಂಸದ್ದೇ ಜಿಹ್ವಾನುಭವ ನೀಡುವ ಸಸ್ಯ ಮೂಲದ ಉತ್ಪನ್ನಗಳ ಭರಾಟೆ ಶುರುವಾಗಿದೆ. ಮಾಂಸಕ್ಕೆ ಇವು ನೈತಿಕ ಪರ್ಯಾಯಗಳೆಂಬ ಪ್ರಚಾರವೂ ಶುರುವಾಗಿದೆ. ಸಸ್ಯಮೂಲದ ವೇಗಾನ್ ಹಾಲು ಈಗ ಭಾರತದ ಮಾರುಕಟ್ಟೆಯಲ್ಲಿ ಸುಲಭ ಲಭ್ಯ. ಈ ಹಿಂದೆ ಆದಂತೆ, ಆಹಾರ ಉತ್ಪಾದಕ ದೈತ್ಯ ಕಂಪನಿಗಳು ಯಾರನ್ನೂ ಕೊಳ್ಳಬಲ್ಲರು; ಆಹಾರ ತಜ್ಞರನ್ನೂ ಸಹ. ಇನ್ನೊಂದು ದೇಶದಲ್ಲಿ ಕುದುರೆಗೆ ನೀಡುವ ಆಹಾರವು ನಮ್ಮ ದೇಶದಲ್ಲಿ ಸೂಪರ್ ಫುಡ್ ಆಗಬಲ್ಲದು. ಯುರೋಪಿನಲ್ಲಿ ರಾತ್ರಿ ಮಲಗುವಾಗ ಮಕ್ಕಳು ಕುಡಿಯುವ ಪಾನಿಯವು ಅಂತಹ ಅಭ್ಯಾಸವಿಲ್ಲದ ಭಾರತದಲ್ಲಿ ಉತ್ಸಾಹ ನೀಡುವ ಬೆಳಗಿನ ಚೇತೋಹಾರಿ ಪೇಯವಾಗಬಲ್ಲದು. ವೇಗಾನ್ ಮಾಂಸದ ಹಿಂದೆಯೂ ಇಂತದ್ದೇ ಕತೆಗಳಿವೆ. ಹಿಂಡಿ
ಆದರೆ, ಯಾವುದೂ ಆಕಸ್ಮಿಕವಲ್ಲ ಎಂಬುದು ಈಗ ಮತ್ತೆ ಮತ್ತೆ ಖಚಿತವಾಗುತ್ತಿದೆ.ʻಡೌನ್ ಟು ಅರ್ಥ್ʼ ಪತ್ರಿಕೆಯಲ್ಲಿ ಪ್ರಕಟವಾದ ಬರೆಹದಲ್ಲಿ ಖ್ಯಾತ ಆಹಾರ ಇತಿಹಾಸಕಾರ ಪುಷ್ಪೇಶ್ ಪಂತ್ ಅವರು ಹೇಳುವಂತೆ ಮೆಕ್ ಡೊನಾಲ್ಡ್, ಕೆ ಎಫ್ ಸಿ, ಡೊಮಿನೊ ಮತ್ತಿತರ ಆಹಾರ ಮಾರುಕಟ್ಟೆಯ ದೊಡ್ಡ ಕುಳಗಳಿಗೆ ಮಾಂಸಾಹಾರದ ವ್ಯಾಪಾರವನ್ನು ಇನ್ನಷ್ಟು ವಿಸ್ತರಿಸಲು ಸಾಧ್ಯವಿಲ್ಲವೆಂಬುದು ಇತ್ತೀಚೆಗೆ ಮನದಟ್ಟಾಗಿದೆಯಂತೆ. ಹೊಸ ಸಸ್ಯಾಹಾರಿಗಳು ತಮ್ಮಂಗಡಿಗೆ ಬಂದರಷ್ಟೇ ಅವರಿಗೆ ವ್ಯಾಪಾರ. ಹಿಂಡಿ
ಇದನ್ನೂ ಓದಿ: ಆಹಾರದ ಹಲ್ಲೆ
ಹೊಸ ಸಸ್ಯಾಹಾರಿಗಳೆಲ್ಲಿಂದ ಸಿಗುತ್ತಾರೆ? ಅವರನ್ನು ತಯಾರು ಮಾಡಬೇಕಷ್ಟೇ! ಮೆಕ್‌ಡೊನಾಲ್ಡ್ಸ್ ನವರು ಎಷ್ಟೇ ಕಷ್ಟ ಪಟ್ಟರೂ ಭಾರತೀಯರ ಮಾಂಸದಡುಗೆಯ ಮಾರುಕಟ್ಟೆಯನ್ನು ಹಿಡಿಯಲಾಗದಿರುವುದಕ್ಕೂ ಸಸ್ಯಾಹಾರಕ್ಕೆ ನೈತಿಕತೆಯ ನಂಟನ್ನು ಬೆಸೆದಿದ್ದಕ್ಕೂ ಸಂಬಂಧ ಇದೆ ಎನ್ನುತ್ತಾರೆ ಪಂತ್. ಮಾಂಸ ತಿಂದ ನಾಲಿಗೆಗೆ ಒಮ್ಮೆಲೆ ಹಸಿ ಲೆಟ್ಯೂಸು ಇಷ್ಟವಾಗಬೇಕೆಂದರೆ ಹೇಗೆ? ಅದೂ ಅಲ್ಲದೆ, ಮೊಗಲ ಕಾಲದ ಅಡುಗೆಯಿಂದ ಹಿಡಿದು ಚೈನೀಸ್ ಅಡುಗೆಯವರೆಗೆ ಯಾವುದನ್ನೂ ಭಾರತೀಯ ಜಿಹ್ವಾ ಸಂಸ್ಕಾರಕ್ಕೆ ಹೊಂದಿಕೊಳ್ಳುವಂತೆ ಮಾಡಬಲ್ಲ ರಸ್ತೆ ಬದಿ ದುಖಾನುಗಳಿಗೂ ಮಾಂಸದಡುಗೆಯ ವಿಚಾರದಲ್ಲಿ ಪೈಪೋಟಿ ನೀಡಲಾರದ ಈ ಬಹುರಾಷ್ಟ್ರೀಯ ಆಹಾರದಂಗಡಿಗಳು ಭಾರತೀಯ ರೆಸ್ಟೋರೆಂಟುಗಳಿಗೆ ಪೈಪೋಟಿ ನೀಡುವುದಿದ್ದರೆ ಅದು ಸಸ್ಯಹಾರದಲ್ಲಿ ಮಾತ್ರ! ಹಿಂಡಿ
ಹಾಗಂತ, ಒಂದೇ ಸಲ ಸೊಪ್ಪು ಸದೆ ತಿನ್ನಿಸಲಾಗುವುದೇ? ಆಗದು. ಅದಕ್ಕೆಂದೇ ಮಾಂಸದ ನಕಲಿನಂತಹ ಉತ್ಪನ್ನಗಳೀಗ ಮಾರುಕಟ್ಟೆಗೆ ಬಂದಿವೆ. ಅದೇ ಕಾಲಕ್ಕೆ ಮಾಂಸಹಾರದ ನೈತಿಕತೆಯನ್ನು ಪ್ರಶ್ನಿಸುವಂತಹ ನಿರೂಪಣೆಗಳನ್ನು ಎಲ್ಲಿಂದಲೋ ಹರಿಯಬಿಡಲಾಗುತ್ತಿದೆ. ಹಿಂಡಿ
ಜೊತೆ ಜೊತೆಯಲ್ಲೇ ಮಾಂಸದ ನಕಲುಗಳಿಂದ ಮಾಡಿದ ತಿನಿಸುಗಳನ್ನು ಭಾರತೀಯರ ಬಾಯಿಗೆ ತುರುಕುವ ಪ್ರಯತ್ನ ನಡೆಯುತ್ತಿದೆ. ಈ ಹಿಂದೆ ಇಡ್ಲಿ ದೋಸೆಯ ಜಾಗವನ್ನು ಕಬಳಿಸಲು ಬ್ರೇಕ್ ಫಾಸ್ಟ್ ಸಿರಿಯಲ್ಸ್‌ಗಳನ್ನು, ಚಾಕೋ ಫ್ಲೇಕ್ಸುಗಳನ್ನು ತಮ್ಮ ಅಂಗಡಿಗಳ ಸೆಲ್ಫಿಗಳಲ್ಲಿ ಒಪ್ಪ ಓರಣವಾಗಿಟ್ಟು ನಂತರ ಅವುಗಳೇ ‘ಸಂಪೂರ್ಣ ಆಹಾರ’ ಎಂದು ಕತೆ ಕಟ್ಟಿ ಹೇಳಿದ್ದನ್ನು ಪಂತ್ ನೆನಪಿಸಿಕೊಳ್ಳುತ್ತಾರೆ. ನಮ್ಮ ಕೋಟೇಶ್ವರದ ನಾಗಣ್ಣನ ಚಾದಂಗಡಿಯಲ್ಲಿ ಇನ್ನೆಷ್ಟು ದಿನ ಬಟಾಣಿ ಅವಲಕ್ಕಿ, ಖಾರಶೇವು ಅವಲಕ್ಕಿ ಸಿಗುತ್ತದೋ ಗೊತ್ತಿಲ್ಲ; ಮೊಸರವಲ್ಲಕ್ಕಿ ಬೇಕೆಂದರೆ ಹೊನ್ನಾವರದ ಗುಣವಂತೆಯಲ್ಲಿರುವ ಮರಿಭಟ್ಟರ ಹೋಟೆಲ್ಲಿಗೇ ಹೋಗಬೇಕು.
ಹಿಂಡಿ
ಹಿಂದೆ ಉತ್ತರ ಕನ್ನಡದ ಎಲ್ಲ ಚಾದಂಗಡಿಗಳಲ್ಲೂ ದೊರೆಯುತ್ತಿದ್ದ ಮಿಸಳ್ ಭಾಜಿ ಈಗ ಕುಮಟಾದ ತಮ್ಟೆ ಹೊಟೆಲ್ಲಿನಲ್ಲೋ ಮಿರ್ಜಾನಿನ ಕಮಲಾಕರಣ್ಣನ ಚಾದಂಗಡಿಯಲ್ಲೋ ಸಿಗಬಹುದಷ್ಟೇ! ಕಲ್ಬುರ್ಗಿಯ ಮಂಡಕ್ಕಿ ಒಗ್ಗರಣೆ, ಧಾರವಾಡದ ಮಂಡಕ್ಕಿ ಮಿರ್ಚಿ, ದಾವಣಗೆರೆಯ ಬೆಣ್ಣೆ ದೋಸೆ ಎಲ್ಲವೂ ಅವಸಾನದ ಅಂಚಿಗೆ ಬಂದು ನಿಂತಿವೆ. ಒಂದಂತೂ ಸತ್ಯ: ನಮ್ಮ ಆಹಾರದ ರೂಢಿಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ನಡೆಸಬೇಕಾಗಿರುವುದಂತೂ ಅನಿವಾರ್ಯ. ಹಿಂಡಿ
ಈಗ ಮತ್ತದೇ ಮಾಂಸದ ಸಸ್ಯಮೂಲ ನಕಲುಗಳ ವಿಷಯಕ್ಕೆ ಬರೋಣ. ವೈದ್ಯೆಯೂ ಆಹಾರ ಇತಿಹಾಸಕಾರ್ತಿಯೂ ಆಗಿರುವ ಮಾನಸಿ ಭಟ್ಟಾಚಾರ್ಯ ಅವರ ಪ್ರಕಾರ “ಭಾರತವು ಸಕ್ಕರೆ ರೋಗಿಗಳು ಮತ್ತು ಹೃದಯ ಸಂಬಂಧಿ ಕಾಯಿಲೆಯವರ ದೇಶ. ನಮ್ಮ ಆಹಾರವು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬನ್ನು ಹೊಂದಿರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್ ಹೊಂದಿರಬೇಕು. ಸಸ್ಯ ಮೂಲದ ಪ್ರೊಟೀನುಗಳು ಸಾಕಷ್ಟು ಪ್ರಮಾಣದಲ್ಲಿ ಅವಶ್ಯಕ ಪೋಷಕಾಂಶಗಳನ್ನು ಹೊಂದಿರುತ್ತವಾದರೂ ಅವುಗಳಿಂದ ಕಾರ್ಬೋಹೈಡ್ರೇಟ್ ಗಳನ್ನು ಪ್ರತ್ಯೇಕಿಸಲಾಗದು. ಒಂದು ಉದಾಹರಣೆ ಹೇಳಬೇಕೆಂದರೆ, 100 ಗ್ರಾಂ ಹೆಸರು ಬೇಳೆ ತಿಂದರೆ 20 ಗ್ರಾಂ ಪ್ರೋಟೀನು ಸಿಗುತ್ತದೆ. ಆದರೆ, ಅದರ ಜೊತೆ 46 ಗ್ರಾಂ ಕಾರ್ಬೋಹೈಡ್ರೇಟನ್ನು ಸೇವಿಸಬೇಕಾಗುತ್ತದೆ. 100 ಗ್ರಾಂ ಮಾಂಸದಲ್ಲಿ ಕೂಡಾ 20 ಗ್ರಾಂ ಪ್ರೋಟೀನ್ ಸಿಗುತ್ತದೆ. ಜೊತೆಗೆ, ಅತ್ಯಲ್ಪ ಪ್ರಮಾಣದಲ್ಲಿ ಕೊಬ್ಬು, ಮಿಕ್ಕುಳಿದಿದ್ದೆಲ್ಲ ನೀರು. ಹಿಂಡಿ
ಇನ್ನೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ಜಾಗತಿಕ ಆಹಾರ ಸಂಶೋಧನೆಗಳ ವಿಶ್ಲೇಷಣೆಯ ಪ್ರಕಾರ ಸಸ್ಯಮೂಲದ ಪ್ರೋಟೀನನ್ನು ಜೀರ್ಣಿಸಿಕೊಳ್ಳುವುದು ಮನುಷ್ಯನಿಗೆ ತುಸು ಕಷ್ಟವೇ. ಜೊತೆಗೆ, ಈ ದೇಶದ ದೊಡ್ಡ ಸಂಖ್ಯೆಯ ಜನರು ಪ್ರೋಟೀನ್, ಕಬ್ಬಿಣ, ವಿಟಮಿನ್ ಬಿ-6, ವಿಟಮಿನ್ ಬಿ-12 ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಸಸ್ಯ ಮೂಲದ ಆಹಾರದಲ್ಲಿ ಲಭ್ಯವಾಗುವ ಕಬ್ಬಿಣವು ರಕ್ತದಲ್ಲಿರುವ ಕಬ್ಬಿಣವಲ್ಲವಾದ್ದರಿಂದ ಅಷ್ಟು ಸುಲಭವಾಗಿ ದೇಹಗತವಾಗದು. ಕಡಿಮೆ ಖರ್ಚಿನಲ್ಲಿ ಈ ದೇಶದ ಹಸಿವು ನೀಗಿಸಲು ಮಾಂಸದೂಟವೇ ಬೇಕು.
ಇದನ್ನೂ ನೋಡಿ: ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ : ಬೇಳೆಯ ಜೊತೆ ಮೂಳೆ… ಹಪ್ಪಳದ ಜೊತೆ ಕಬಾಬ್ ಇರಲಿ Janashakthi Media