ಸೌಜನ್ಯ ಹತ್ಯೆ-ಅತ್ಯಾಚಾರ ಪ್ರಕರಣ | ಮರು ತನಿಖೆಗಾಗಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

ಮೈಸೂರು: ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ  ಸೌಜನ್ಯ ಮತ್ತು ನಿರ್ದೋಶಿ ಸಂತೋಷ ರಾವ್‌ ಕುಟುಂಬ ಹಾಗೂ ಸೌಜನ್ಯಳಿಗೆ ನ್ಯಾಯ ಬಯಸುವ ಪ್ರಜ್ಞಾವಂತ ಮನಸ್ಸುಗಳು ಇಂದು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.

ಸೌಜನ್ಯ ಪರವಾಗಿ ರಾಜ್ಯದ ಯಾವ ಮೂಲೆಯಲ್ಲಿ ಹೋರಾಟ ನಡೆದರೂ ನಾನು ಭಾಗವಹಿಸುತ್ತೇನೆ, ಪ್ರಕರಣದಿಂದ ಕುಗ್ಗಿ ಹೋಗಿದ್ದ ನಮ್ಮ ಕುಟುಂಬದ ಮಾನ ನಮಗೆ ಮರಳಿ ಸಿಗುತ್ತಿದೆ ಎಂದು ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾದ ಸಂತೋಷ್ ರಾವ್ ಅವರ ಸಹೋದರ ಸಂಜಯ್ ರಾವ್ ಸೋಮವಾರ ಹೇಳಿದರು. “ಸೌಜನ್ಯ ಪರವಾಗಿ ಹೋರಾಟಕ್ಕೆ ನನ್ನ ಸಹೋದರ ಸಂತೋಷ್ ರಾವ್‌ ಅವರನ್ನು ಹೋರಾಟಕ್ಕೆ ಬರುವಂತೆ ಒತ್ತಾಯ ಮಾಡಿದೆ. ಆದರೆ ಅವರು ಮಾನಸಿಕವಾಗಿ ತೀರಾ ಕುಗ್ಗಿ ಹೋಗಿದ್ದು ಬೆದರಿದ್ದಾರೆ. ಒಂದು ವೇಳೆ ಇದರಲ್ಲಿ ಭಾಗವಹಿಸಿದರೆ ತನ್ನನ್ನು ಕೊಲೆ ಮಾಡುತ್ತಾರೆ ಎಂಬ ಭಯವಿದೆ. ಹಾಗಾಗಿ ಅವರು ಬಂದಿಲ್ಲ. ಆದರೆ ಸೌಜನ್ಯ ಪರವಾಗಿ ರಾಜ್ಯದ ಎಲ್ಲೆ ಹೋರಾಟ ನಡೆದರೂ ನಾನು ಭಾಗವಹಿಸುತ್ತೇನೆ.” ಎಂದರು.

ಇದನ್ನೂ ಓದಿ: ಸೌಜನ್ಯ ಪ್ರಕರಣವನ್ನು ನ್ಯಾಯ ಬದ್ಧ ಮೂಲ ತನಿಖೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

“ಸೌಜನ್ಯ ಕೊಲೆಗಾರರು ಎಂದು ಆರೋಪಿಸಿದ್ದರಿಂದ ನಮ್ಮ ಕುಟುಂಬ ತೀರಾ ಕುಗ್ಗಿ ಹೋಗಿತ್ತು. ಇದೀಗ ನ್ಯಾಯಕ್ಕಾಗಿ ಇಷ್ಟೊಂದು ಜನರು ಸೇರಿ ಸೌಜನ್ಯ ಪರವಾಗಿ ನ್ಯಾಯ ಕೇಳುತ್ತಿದ್ದಾರೆ. ನಮ್ಮ ಕುಟುಂಬದ ಮಾನ ನಮಗೆ ಮರಳಿ ಸಿಗುತ್ತಿದೆ. ನಿಜವಾದ ಕೊಲೆಗಾರರು ಶಿಕ್ಷೆಗೆ ಒಳಗಾಗಬೇಕು. ಜೊತೆಗೆ ನಮ್ಮ ಕುಟುಂಬವನ್ನು ಹಿಂಸಿಸಿದ ಕಾರಣಕ್ಕೆ ನಮಗೂ ಪರಿಹಾರ ನೀಡಬೇಕು” ಎಂದು ಅವರು ಆಗ್ರಹಿಸಿದರು.

ಸುಮಾರು 11 ವರ್ಷಗಳ ಹಿಂದೆ ದಕ್ಷಣ ಕನ್ನಡದ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಎಂಬ ಬಾಲಕಿಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದ್ದ ಸಂತೋಷ್ ರಾವ್ ಅವರನ್ನು ನ್ಯಾಯಾಲಯ ನಿರ್ದೋಷಿ ಎಂದು ಬಿಡುಗಡೆಗೊಳಿಸಿದೆ. ಹೀಗಾಗಿ ಪ್ರಕರಣದ ಮರುತನಿಖೆ ಮಾಡಬೇಕು ಎಂದು ರಾಜ್ಯದಾದ್ಯಂತ ಜನಪರ ಸಂಘಟನೆಗಳು ಒತ್ತಾಯಿಸುತ್ತಿವೆ.

ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸೌಜನ್ಯ ಅವರ ತಾಯಿ, ತಂಗಿ ಹಾಗೂ ಕುಟುಂಬಿಕರು ಮತ್ತು ಹಿತೈಷಿಗಳು ಧರ್ಮಸ್ಥಳದಿಂದ ಬಂದು ಪಾಲ್ಗೊಂಡಿದ್ದರು. ಮೈಸೂರು ನಗರದ ರಾಮಸ್ವಾಮಿ ಸರ್ಕಲ್‌ನಿಂದ ಗಾಂಧಿ ವೃತ್ತದವರೆಗೂ ಮೆರವಣಿಗೆ ಹೊರಟ ಪ್ರತಿಭಟನೆಯಲ್ಲಿ, ಸೌಜನ್ಯ ಪ್ರಕರಣ ಮರುತನಿಖೆ ಆಗಬೇಕು. ನಿಜವಾರ ಆರೋಪಿಗಳು ಇವರೆ ಎಂದು ಸಂತ್ರಸ್ತೆಯ ಕುಟುಂಬ ಯಾರನ್ನು ಬೆಟ್ಟು ಮಾಡಿ ತೋರಿಸುತ್ತಿದೆಯೊ ಅವರನ್ನು ತನಿಖೆ ಒಳಪಡಿಸಬೇಕು ಹಾಗೂ ಧರ್ಮಸ್ಥಳದ ದೇವಾಲಯ ಮತ್ತು ಟ್ರಸ್ಟ್‌ ಅನ್ನು ಮುಜರಾಯಿ ಇಲಾಖೆ ವಹಿಸಿಕೊಳ್ಳಬೇಕು ಎಂಬ ಆಗ್ರಹ ಕೇಳಿ ಬಂತು.

ಇದನ್ನೂ ಓದಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಸಂಶಯಿತರ ಜೊತೆ ಕಾಣಿಸಿಕೊಂಡ ಕಾಂಗ್ರೆಸ್ ಮಾಜಿ ಸಚಿವ ಅಭಯಚಂದ್ರ ಜೈನ್!

ಕೇವಲ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಅಲ್ಲದೆ, ಧರ್ಮಸ್ಥಳದಲ್ಲಿ ಈವರೆಗೂ ಆಗಿರುವ ಅತ್ಯಾಚಾರ, ಕೊಲೆ ಹಾಗೂ ಅಸಹಜ ಸಾವುಗಳ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

ಈ ನಡುವೆ ಧರ್ಮಸ್ಥಳ ದೇವಾಲಯದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ ಅನ್ನು ಪ್ರಶಂಸಿಸಿ ಪತ್ರ ಬರೆದಿದ್ದಾರೆ. ಇದನ್ನೂ ನೆನಪಿಸಿಕೊಂಡ ಪ್ರತಿಭಟನಾಕಾರರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಹ ಮುಲಾಜಿಗೆ ಬಗ್ಗಬಾರದು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡಂತಹ ಎಸ್‌ಐಟಿಯನ್ನು ರಚನೆ ಮಾಡಿ ಅದರ ಮುಖಾಂತರ ತನಿಖೆ ಮಾಡಬೇಕು. ಅಷ್ಟೆ ಅಲ್ಲದೆ, ಈ ಎಸ್‌ಐಟಿಗೆ ಮುಖ್ಯಸ್ಥರನ್ನು ನೇಮಿಸುವಾಗ ಸೌಜನ್ಯ ಪರ ನ್ಯಾಯಕ್ಕಾಗಿ ಯಾರು ಹೋರಾಟ ಮಾಡುತ್ತಿರುವವರು ಸೂಚಿಸಿರುವಂತಹ ನ್ಯಾಯಮೂರ್ತಿಗಳನ್ನೆ ನೇಮಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಈ ಹಿಂದೆ ಸರ್ಕಾರ ಸೂಚಿಸಿದ ಅಧಿಕಾರಿಗಳು ಮಾಡಿದ ತನಿಖೆ ಯಾವ ದಿಕ್ಕಿನಲ್ಲಿ ತೆರಳಿ ಅದರ ಫಲಿಯಾಂತ ಏನು ಬಂದಿದೆ ಎಂಬುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಇನ್ನೂ ಹನ್ನೊಂದು ವರ್ಷ ಈ ಪ್ರಕರಣ ಮುಂದುವರೆಯುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಸೌಜನ್ಯ ಪರವಾಗಿರುವವರು ಸೂಚಿಸುವಂತಹ ನಿವೃತ್ತ ನ್ಯಾಯಾಧೀಶರನ್ನು ಮತ್ತು ಅಧಿಕಾರಿಗಳನ್ನು ಒಳಗೊಂಡಂತಹ ಎಸ್‌ಐಟಿ ರಚಿಸಿ ಸರಿಯಾದ ದಾರಿಯಲ್ಲಿ ತನಿಖೆ ನಡೆಯಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಬದ್ಧರಾಗಬೇಕು” ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಸೌಜನ್ಯ ಪ್ರಕರಣ: ರಾವ್ ಅಪರಾಧಿ ಅಲ್ಲ ನಿಜ, ಹಾಗಾದರೆ ಅಪರಾಧಿಗಳು ಯಾರು?

ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡಿ, ಸೌಜನ್ಯ , ಕುಸುಮಾವತಿಯವರಿಗೆ ಅಷ್ಟೆ ಮಗಳಲ್ಲ, ಅವಳು ನಮ್ಮ ಮಗಳು ಈ ರಾಜ್ಯದ ಮನೆಯ ಮಗಳು ಎಂದರು. ಮುಂದಿನ ದಿನಗಳಲ್ಲಿ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಮೈಸೂರಿನಿಂದ ಧರ್ಮಸ್ಥಳದವರೆಗೂ ಜಾಥಾ ನಡೆಸಲಾಗುವುದು, ಮಾರ್ಗದುದ್ದಕ್ಕೂ ಬರುವ ಹುಣಸೂರ, ಪಿರಿಯಾಪಟ್ಟಣ, ಕುಶಾಲನಗರ, ಸುಳ್ಯ ಸೇರಿದಂತೆ ಪ್ರಮುಖ ನಗರಗಳ ಜನತೆಯನ್ನು ಹೋರಾಟದಲ್ಲಿ ಭಾಗಿಯಾಗುವಂತೆ ಮನವಿ ಮಾಡುವ ಪ್ರಯತ್ನ ನಡೆದಿದೆ ಎಂದರು.

ಪ್ರತಿಭಟನೆಯಲ್ಲಿ,  ಪರಶು, ಸೌಜನ್ಯ ಪರವಾಗಿ ನಿರಂತರ ಹೋರಾಟ ನಡೆಸುತ್ತಿರುವ ತಿಮರೋಡಿ ಮಹೇಶ್ ಶೆಟ್ಟಿ, ಹಿರಿಯ ಪತ್ರಕರ್ತ ಜಿ.ಪಿ. ಬಸವರಾಜ, ಪ್ರಾಂತರೈತ ಸಂಘದ ಜಗದೀಶ್‌ ಸೂರ್ಯ, ಹಿರಿಯ ಹೋರಾಟಗಾರರು, ವಿದ್ಯಾರ್ಥಿ ಸಂಘಟನೆಗಳು, ದಲಿತ ಪರ ಸಂಘಟನೆಗಳು, ಜನಪರ ಹಾಗೂ ಸಾಮಾಜಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಮೈಸೂರು ಸುತ್ತಮುತ್ತಲಿನ ಜಿಲ್ಲೆಗಳಾದ ಮಂಡ್ಯ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ನಾಗರಿಕರು ಭಾಗವಹಿಸಿದ್ದರು.

 

Donate Janashakthi Media

Leave a Reply

Your email address will not be published. Required fields are marked *