ಕಾರ್ಮಿಕ ಸಂಘಟನೆಗಳ ವಿರೋಧ : ಬ್ಯಾಂಕ್ ಖಾಸಗೀಕರಣಕ್ಕೆ ತಡೆ

ಸಾರ್ವಜನಿಕ ಒಡೆತನದ ಬ್ಯಾಂಕುಗಳ (ಪಿಎಸ್‌ಬಿ) ಖಾಸಗೀಕರಣ ಪ್ರಕ್ರಿಯೆಯನ್ನು ಮೋದಿ ಸರ್ಕಾರ ಮುಂದುವರಿಸಲಾಗದಂತೆ ತಡೆ ಹಿಡಿಯುವಲ್ಲಿ ಎಡ ಪಕ್ಷಗಳು, ಆ ಪಕ್ಷಗಳ ಕಾರ್ಮಿಕ ಸಂಘಟನೆಗಳು ಮತ್ತು ಅವುಗಳ ನೇತೃತ್ವದ ಹೋರಾಟಗಳು ಯಶಸ್ವಿಯಾಗಿವೆ. ಪಿಎಸ್‌ಬಿ ಗಳನ್ನು ಸಾರ್ವಜನಿಕರ ಒಡೆತನೆದಲ್ಲೇ ಉಳಿಸಿಕೊಳ್ಳುವಲ್ಲಿ, ಬ್ಯಾಂಕುಗಳು ಖಾಸಗಿ ಬಂಡವಾಳಗಾರರ ವಶಕ್ಕೆ ಹೋಗದಂತೆ ತಡೆಯುವಲ್ಲಿ, ಸರ್ಕಾರದ ಜನವಿರೋಧಿ ನೀತಿಗಳಾದ ನವ-ಉದಾರೀಕರಣ ನೀತಿಗಳ ಜಾರಿಯ ವೇಗಕ್ಕೆ ಕಡಿವಾಣ ಹಾಕುವಲ್ಲಿ ಮೋದಿ ಸರ್ಕಾರದ ಮೇಲೆ ಎಡ ಪಕ್ಷಗಳು ಮತ್ತು ಸಾಮೂಹಿಕ ಸಂಘಟನೆಗಳ ಹೋರಾಟ ಎಷ್ಟು ಪರಿಣಾಮ ಬೀರಿದೆ ಎಂಬದು ಈ ವರದಿಯಿಂದ ತಿಳಿಯುತ್ತದೆ.

ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಬ್ಯಾಂಕ್ ಖಾಸಗೀಕರಣವು ಸರ್ಕಾರಗಳಿಗೆ ನಿರಂತರ ಕಂಟಕವಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಮನಿಕಂಟ್ರೋಲ್  ಸುದ್ದಿ ಮಾಧ್ಯಮ ಜುಲೈ 12, 2023 ರಂದು ವರದಿ ಮಾಡಿದೆ.

“2024 ರ ಸಾರ್ವತ್ರಿಕ ಚುನಾವಣೆಗೂ ಮುಂಚೆ ಏನೂ ಆಗುವುದಿಲ್ಲ. ಅದಕ್ಕಾಗಿ ನಾವು ಇನ್ನೂ ಶಾಸನವನ್ನು ಹೊಂದಿಲ್ಲ – ಅದು ಇಲ್ಲದೆ ಖಾಸಗೀಕರಣವು ಸಾಧ್ಯವಿಲ್ಲ,” ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿ ಹೇಳುವ ಮೂಲಕ, ಬಹುನಿರೀಕ್ಷಿತ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (ಪಿಎಸ್‌ಬಿ) ಖಾಸಗೀಕರಣವು 2024 ರ ಸಾರ್ವತ್ರಿಕ ಚುನಾವಣೆಯ ಮೊದಲು ಸಂಭವಿಸುವ ಸಾಧ್ಯತೆಯಿಲ್ಲ ಎಂದಿದ್ದಾರೆ ಎಂದು ಅದು ವರದಿ ಮಾಡಿದೆ.

ಬ್ಯಾಂಕುಗಳ ಖಾಸಗೀಕರಣಕ್ಕಾಗಿ, ಬ್ಯಾಂಕಿಂಗ್ ಕಂಪನಿಗಳ (ಅಂಡರ್‌ಟೇಕಿಂಗ್ಸ್ ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ, 1970 ಗೆ ಮತ್ತು ಬ್ಯಾಂಕಿಂಗ್ ಕಂಪನಿಗಳ (ಅಂಡರ್‌ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ, 1980, ತಿದ್ದುಪಡಿಗಳ ಅಗತ್ಯವಿದೆ, ಎರಡು ಹಂತಗಳಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಆಧಾರವಾಗಿರುವ ಈ ಕಾಯಿದೆಗಳನ್ನು ಖಾಸಗೀಕರಣಕ್ಕಾಗಿ ಬದಲಾಯಿಸುವ ಅಗತ್ಯವಿದೆ ಎಂದು ಅಧಿಕಾರಿ ಹೇಳಿದರು.

“ಪ್ರತಿಯೊಂದು ಸರ್ಕಾರವೂ ಸರಿಯಾದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹಾಗಾಗಿ, ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು ಏನೂ ಆಗುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹಣಕಾಸು ಸಚಿವಾಲಯದ ಅಧಿಕಾರಿ ಈ ಹಿಂದೆ ಉಲ್ಲೇಖಿಸಿದ್ದರು. ಭಾರತವು ಪ್ರಸ್ತುತ 12 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಹೊಂದಿದೆ: ಇವುಗಳೆಂದರೆ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯುಸಿಓ ಬ್ಯಾಂಕ್, ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ.

2021-22 ರ ಬಜೆಟ್ ಮಂಡಿಸುವಾಗ ಖಾಸಗೀಕರಣದ ಘೋಷಣೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22 ರ ಬಜೆಟ್ ಅನ್ನು ಮಂಡಿಸುವಾಗ, 1.75 ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸುವ ಹೂಡಿಕೆಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು (ಪಿಎಸ್‌ಬಿ) ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು. ಆ ಸಮಯದಲ್ಲಿ, ಐಡಿಬಿಐ ಬ್ಯಾಂಕ್ ಹೊರತುಪಡಿಸಿ, 2021-22ರಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಒಂದು ಜನರಲ್ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲು ಸರ್ಕಾರವು ಪ್ರಸ್ತಾಪಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದರು. ಆದರೆ, ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಈ ಘೋಷಣೆಯನ್ನು ಪಾಲಿಸಲು ಮೋದಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಐಡಿಬಿಐ ಬ್ಯಾಂಕ್ ನ ಶೇ.60.72 ರಷ್ಟು ಷೇರು ಮಾರಾಟ

ಸರ್ಕಾರ ಮತ್ತು ಎಲ್‌ಐಸಿ ಸೇರಿ ಐಡಿಬಿಐ ಬ್ಯಾಂಕ್‌ನಲ್ಲಿನ ಶೇ.60.72 ಪಾಲನ್ನು ಮಾರಾಟ ಮಾಡುತ್ತಿವೆ. ಐಡಿಬಿಐ ಬ್ಯಾಂಕ್ ಪ್ರಕರಣವು ವಿಭಿನ್ನವಾಗಿದೆ ಏಕೆಂದರೆ ಅದು ಸಾರ್ವಜನಿಕ ವಲಯದ ಬ್ಯಾಂಕ್ ಅಲ್ಲ ಆದರೆ ಸರ್ಕಾರವು ಪಾಲನ್ನು ಹೊಂದಿರುವ ‘ಖಾಸಗಿ ವಲಯದ’ ಬ್ಯಾಂಕ್ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
“ಐಡಿಬಿಐ ಬ್ಯಾಂಕ್‌ನ ಕಾರ್ಯತಂತ್ರದ ಮಾರಾಟದಿಂದ ಸರ್ಕಾರವು 15000-16000 ಕೋಟಿ ರೂಪಾಯಿಗಳ ಮೊತ್ತವನ್ನು ಪಡೆಯುತ್ತದೆ. ಕಾರ್ಯತಂತ್ರದ ಮಾರಾಟವು ಈ ವರ್ಷ ಶುರುವಾಗಬೇಕು. ಸರ್ಕಾರವು ಡಿಸೆಂಬರ್‌ನೊಳಗೆ ಹಣಕಾಸು ಬಿಡ್‌ಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಒಪ್ಪಂದವನ್ನು ಮುಕ್ತಾಯಗೊಳಿಸಲಿದೆ ”ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಮನಿಕಂಟ್ರೋಲ್ ಹೇಳಿಕೊಂಡಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯಿಂದ ಅನುಮತಿಗಾಗಿ ಕಾಯುತ್ತಿದೆ. ಏಕೆಂದರೆ ಇದು ಬ್ಯಾಂಕ್‌ನ ಕಾರ್ಯತಂತ್ರದ ಮಾರಾಟಕ್ಕೆ ಸಂಬಂಧಿಸಿದೆ.

ಇದನ್ನು ಆರ್‌ಬಿಐಗೆ ಕಳುಹಿಸಲಾಗಿದ್ದು, ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆ ಇದೆ. ಐಡಿಬಿಐ ಬ್ಯಾಂಕ್‌ನ ಕಾರ್ಯತಂತ್ರದ ಮಾರಾಟವು ಕಡಿಮೆ-ಅವಲಂಭಿತ ಫಲ (low-hanging fruit) ವಾಗಿದೆ. ಏಕೆಂದರೆ ಇದು ಈಗಾಗಲೇ ತಾಂತ್ರಿಕವಾಗಿ ಖಾಸಗೀಕರಣಗೊಂಡಿದೆ,” ಎಂದು ಅವರು ಹೇಳಿದರು. ಸಂಸತ್ತು ಅನುಮತಿಸಬೇಕು. ಸಾರ್ವಜನಿಕ ಬ್ಯಾಂಕುಗಳನ್ನು ಖಾಸಗೀಕರಣ ಮಾಡಬೇಕಾದರೆ ಸಂಸತ್ತಿನ ಅನುಮತಿ ಬೇಕಾಗುತ್ತದೆ. ನಂತರವೇ ಬ್ಯಾಂಕುಗಳ ಮಾರಾಟಕ್ಕೆ ಅಗತ್ಯವಾದ ಕಾನೂನುಗಳನ್ನು ತರಲು ಸಾಧ್ಯ. “2021 ರಲ್ಲಿ ಬಜೆಟ್ ಸಮಯದಲ್ಲಿ, ಪಿಎಸ್‌ಬಿ ಖಾಸಗೀಕರಣವನ್ನು ಘೋಷಿಸಲಾಯಿತು. ಆದರೆ ಅದನ್ನು ಸಂಸತ್ತು ಮುಂದಕ್ಕೊಯ್ಯಲಿಲ್ಲ. ಇದಕ್ಕೆ ಕಾರಣ ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧ ಎಂಬುದು ಸ್ಪಷ್ಟವಾಗಿದೆ.

ಸರ್ಕಾರದ ಭರವಸೆ

ಈ ಹಿಂದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣವು ವೇಳಾಪಟ್ಟಿಯಂತೆ ಮುಂದುವರಿಯುತ್ತದೆ ಎಂದು ಹೇಳಿದ್ದರು. “ಬ್ಯಾಂಕ್ ಖಾಸಗೀಕರಣದ ಬಗ್ಗೆ, ಅವರು ವೇಳಾಪಟ್ಟಿಯ ಪ್ರಕಾರ ಮುಂದುವರಿಯುತ್ತಾರೆ. ಯಾವುದೇ ಬದಲಾವಣೆ ಇಲ್ಲ” ಎಂದು ಸೀತಾರಾಮನ್ ಮೇ 29 ರಂದು ಮುಂಬೈನಲ್ಲಿ ಹೇಳಿದರು.
2019 ರಲ್ಲಿ, ಕೇಂದ್ರ ಸರ್ಕಾರವು ಆರು ಬೇರೆ ಬೇರೆ ಮತ್ತು ದುರ್ಬಲ ಪಿಎಸ್‌ಬಿ ಗಳನ್ನು ಒಂದೇ ಬಾರಿಗೆ ನಾಲ್ಕಕ್ಕೆ ವಿಲೀನಗೊಳಿಸಲು ನಿರ್ಧರಿಸಿತು. ಅದರಂತೆ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಈ ಎರಡನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸ್ವಾಧೀನಪಡಿಸಿಕೊಂಡಿತು; ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕಿನ ಭಾಗವಾಯಿತು; ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ ನ ಉಪವಿಭಾಗವಾಯಿತು. ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡವು. ಎಸ್‌ಬಿಐ ತನ್ನ ಐದು ಸಹವರ್ತಿ ಸಾಲದಾತರನ್ನು ತನ್ನೊಂದಿಗೆ ವಿಲೀನಗೊಳಿಸಿದರೆ, ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸಲಾಯಿತು.

ಬ್ಯಾಂಕುಗಳ ಖಾಸಗೀಕರಣ ತಡವಾಗಿದ್ದು ಒಳ್ಳೆಯದೇ ಆಗಿದೆ!! ಬಂಡವಾಳಗಾರರ ಪರವಾದ ತಜ್ಞರ ಹೇಳಿಕೆ

“ಸರ್ಕಾರವು ಮೊದಲೇ ಖಾಸಗೀಕರಣಕ್ಕೆ ಹೋಗಿದ್ದರೆ ಅದು ಉತ್ತಮ ಮೌಲ್ಯವನ್ನು ಪಡೆಯುತ್ತಿರಲಿಲ್ಲ, ಏಕೆಂದರೆ ಬ್ಯಾಂಕುಗಳು ಕೆಟ್ಟ ಸ್ಥಿತಿಯಲ್ಲಿದ್ದವು. ಈಗ, ಬಂಡವಾಳದ ಸಾಕಷ್ಟು ಇಂಜೆಕ್ಷನ್ ನಂತರ, ಬ್ಯಾಂಕ್‌ಗಳ ಬ್ಯಾಲೆನ್ಸ್ ಶೀಟ್‌ಗಳು ಉತ್ತಮ ಸ್ಥಿತಿಯಲ್ಲಿವೆ, ”ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಹಿರಿಯ ಅಧಿಕಾರಿ ನರೇಶ್ ಮಲ್ಹೋತ್ರಾ ಹೇಳಿದ್ದಾರೆ.
“ಸರ್ಕಾರ ಈ ಬಾರಿ ಮಾರಾಟ ಮಾಡಿದರೆ ಒಳ್ಳೆ ವ್ಯಾಲ್ಯೂಯೇಷನ್ ಸಿಗುತ್ತೆ.. ಅವರು ಅದನ್ನು ಮಾಡಿಯೇ ಮಾಡುತ್ತಾರೆ.. ಸ್ವಲ್ಪ ಸಮಯ ಕಾಯಬೇಕಷ್ಟೆ, ಪರಿಸ್ಥಿತಿ ಸ್ವಲ್ಪ ಜಾಸ್ತಿ ಆಗುತ್ತೆ, ಬ್ಯಾಲೆನ್ಸ್ ಶೀಟ್ ಚೆನ್ನಾಗಿರಬಹುದು ಅಂತ ಕೇಳಿದರೆ. ಸರ್ಕಾರವು ಬ್ಯಾಂಕಿಂಗ್‌ನಲ್ಲಿ ಇರಬಾರದು,” ಎಂದು ಮಲ್ಹೋತ್ರಾ ತಮ್ಮ ಹೇಳಿದ್ದಾರೆ ಎಂದು ಮಾಧ್ಯಮ ವರದಿಮಾಡಿದೆ.

ಬ್ಯಾಂಕುಗಳ ಸಂಪತ್ತು ಹೆಚ್ಚಳ ಹೇಗಾಯಿತು?

ದೊಡ್ಡ ಉದ್ಯಮಿಗಳು ಸಾಲ ಪಡೆದು ಮರುಪಾವತಿಸದ ಸಾಲಗಳ ದೊಡ್ಡ ಪ್ರಮಾಣವನ್ನು ‘ವಸೂಲಾಗದ ಸಾಲದ ಲೆಕ್ಕಕ್ಕೆ’ (ಎನ್‌ಪಿಎ) ಸೇರಿಸುವ ಮೂಲಕ (ಒಟ್ಟು ರೂ. 20 ಲಕ್ಷ ಕೋಟಿ ಎನ್‌ಪಿಎ) ಮತ್ತು ಎನ್ ಪಿಎ ಸಾಲಗಳಲ್ಲಿ ಅಂದಾಜು ರೂ. 12 ಲಕ್ಷ ಕೋಟಿ ಸಾಲವನ್ನು ಮನ್ನಾ/ರೈಟ್ ಆಫ್ ಮಾಡುವ ಮೂಲಕ, ಕನಿಷ್ಠ ಠೇವಣಿ ಹೆಸರಿನಲ್ಲಿ ಬ್ಯಾಂಕುಗಳ ಬಡ ಗ್ರಾಹಕರಿಂದ ದಂಡ ಮತ್ತು ಹಲವು ಬಗೆಯ ನಿರ್ವಹಣಾ ಶುಲ್ಕಗಳನ್ನು ವಿಧಿಸುವ ಮೂಲಕ, ಬ್ಯಾಂಕುಗಳಿಗೆ ಹೆಚ್ಚಿನ ಲಾಭ ಬರುವಂತೆ ಮಾಡಲಾಗಿದೆ. ಇವೆಲ್ಲಾ ಯಾರಿಗಾಗಿ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಬ್ಯಾಂಕುಗಳ ಗ್ರಾಹಕರು, ಅವುಗಳ ನೌಕರರು, ಬ್ಯಾಂಕುಗಳ ಒಡೆಯರಾದ ಸಾರ್ವಜನಿಕರು ಒಟ್ಟಾಗಿ ತಮ್ಮದೇ ಸಂಪತ್ತುಗಳನ್ನು ಉಳಿಸಿಕೊಳ್ಳಲು, ಕಾರ್ಮಿಕ ಸಂಘಟನೆಗಳ ಹೋರಾಟಗಳ ಮತ್ತು ಅಂತಹ ಹೋರಾಟಗಳಿಗೆ ನೇತೃತ್ವ ನೀಡುತ್ತಿರುವ ಕಮ್ಯೂನಿಸ್ಟ್ ಪಕ್ಷಗಳ ಹೋರಾಟಗಳ ಜೊತೆ ಕೈಜೋಡಿಸುವ ಅಗತ್ಯವಿದೆ.

Donate Janashakthi Media

Leave a Reply

Your email address will not be published. Required fields are marked *