ಬೆಳಗಾವಿ : ಚುನಾವಣೆಯಲ್ಲಿ ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿನ ಸುವರ್ನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ಈ ವಿಚಾರದಲ್ಲಿ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಕಾಂಗ್ರೆಸ್ ಸದಸ್ಯ ಟಿ.ಡಿ. ರಾಜೇಗೌಡ, ನಾನು ಪ್ರತಿನಿಧಿಸುವ ಶೃಂಗೇರಿ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿ ಹೆಸರಿನಲ್ಲಿ ಸರಕಾರ ಅನುದಾನ ಬಿಡುಗಡೆ ಮಾಡಿದ್ದು, ಈ ಮೂಲಕ ಜನಪ್ರತಿನಿಧಿಯಾದ ನನ್ನ ಹಕ್ಕಿಗೆ ಚ್ಯುತಿಯಾಗಿದೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಬೇಕೆಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿಕೊಂಡರು.
ಇದನ್ನು ಓದಿ : ಪರಿಶಿಷ್ಟ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್; ಅನ್ನಭಾಗ್ಯ, ಪಿಂಚಣಿ ಯೋಜನೆ ಅನುದಾನಕ್ಕೆ ಕೈಹಾಕಿದ ಸರ್ಕಾರ
ಶಾಸಕ ಟಿ.ಡಿ. ರಾಜೇಗೌಡ ಅವರ ಮಾತಿಗೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶೃಂಗೇರಿಗೆ ಅನುದಾನ ನೀಡುವಾಗ ಜೀವರಾಜ್ ಅವರ ಹೆಸರು ಉಲ್ಲೇಖಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸೋತ ಅಭ್ಯರ್ಥಿ ಹೆಸರಿನಲ್ಲಿ ಅನುದಾನ ಬಿಡುಗಡೆಯಾಗುವುದು ಒಂದು ಕೆಟ್ಟ ಸಂಪ್ರದಾಯ, ಅದು ಯಾವುದೇ ಪಕ್ಷದ ಅಭ್ಯರ್ಥಿಯಾಗಿರಲಿ. ಬಜೆಟ್ಟಿಗೆ ಅನುಮೋದನೆ ನೀಡುವವರು ಯಾರು? ಚುನಾವಣೆಯಲ್ಲಿ ಸೋತವರು ಬಂದು ಚರ್ಚಿಸಿ ಆಯವ್ಯಯ ಪಾಸು ಮಾಡಿ ಕೊಡುತ್ತಾರಾ? ಸೋತವರ ಹೆಸರಿಗೆ ಅನುದಾನ ನೀಡಿ ನೀವು ಜನರ ಜೊತೆ ಹೋಗಿ ಕೆಲಸ ಮಾಡಿ ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಇದನ್ನು ಪ್ರತಿಷ್ಠೆ ಮಾಡಿಕೊಳ್ಳಬಾರದು, ಇದು ಮುಂದುವರೆಯಲೂಬಾರದು. ಸೋತವರು ಮತ್ತೆ ಗೆದ್ದು ಬಂದು ಜನರ ಜೊತೆ ನಿಂತು ಕೆಲಸ ಮಾಡಲಿ. ನಾನು ಮುಖ್ಯಮಂತ್ರಿಯಾಗಿರುವಾಗ ಈ ರೀತಿ ಸೋತವರಿಗೆ ಅನುದಾನ ನೀಡಿದ ನೆನಪಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿ ನಡವಳಿಕೆಗೆ ಅವಕಾಶವಿಲ್ಲ. ಇದು ರಾಜೇಗೌಡರಿಗೆ ಮಾತ್ರವಲ್ಲ, ಯು.ಟಿ.ಖಾದರ್ ಸೇರಿದಂತೆ ಹಲವು ಸದಸ್ಯರಿಗೆ ಈ ರೀತಿ ಅನ್ಯಾಯ ಆಗಿದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಈಗಾಗಲೇ ಸೋತ ಅಭ್ಯರ್ಥಿಗಳ ಹೆಸರಿನಲ್ಲಿ ನೀಡಿರುವ ಅನುದಾನವನ್ನು ವಾಪಾಸ್ಸು ಪಡೆಯಿರಿ’ ಎಂದು ಸಿದ್ಧರಾಮಯ್ಯ ಹೇಳಿದರು.
ಇದನ್ನು ಓದಿ: ಮಠಗಳಿಗೆ ನೀಡುವ ಅನುದಾನದಲ್ಲೂ 30% ಕಮಿಷನ್ ಕೇಳುವ ಸರ್ಕಾರ: ದಿಂಗಾಲೇಶ್ವರ ಸ್ವಾಮೀಜಿ
ನೀವು ಅನುದಾನ ನೀಡಲಿದ್ದೀರಿ ಎಂಬ ನಿರೀಕ್ಷೆಯೂ ನಮಗಿಲ್ಲ. ನೀವು ಅನುದಾನವನ್ನೇ ಕೊಡದಿದ್ದರೂ ಪರವಾಗಿಲ್ಲ ಆದರೆ ಈ ರೀತಿ ಶಾಸಕರಿಗೆ ಅಗೌರವ ಮಾಡಬೇಡಿ. ಶಾಸಕರ ಹಕ್ಕುಗಳನ್ನು ರಕ್ಷಣೆ ಮಾಡುವುದು ಸಭಾಧ್ಯಕ್ಷರ ಕರ್ತವ್ಯ. ಹಾಲಿ ಶಾಸಕರಿಗೆ 100 ಕೋಟಿ ಅನುದಾನ ಕೊಟ್ಟು, ಅದೇ ಕ್ಷೇತ್ರದಲ್ಲಿ ಸೋತ ಅಭ್ಯರ್ಥಿಗೂ 100 ಕೋಟಿ ಅನುದಾನ ಬಿಡುಗಡೆ ಮಾಡಲು ಅವಕಾಶ ಎಲ್ಲಿದೆ ಎಂದು ಪ್ರಶ್ನಿಸಿದರು.
ಸರಕಾರದ ಪರವಾಗಿ ಉತ್ತರ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಈ ವಿಷಯದಲ್ಲಿ ಹಕ್ಕುಚ್ಯುತಿ ವ್ಯಾಪ್ತಿಗೆ ಒಳಪಡುವುದಿಲ್ಲ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಕೆಲವರಿಗೆ ಅನುದಾನ ಬಿಡುಗಡೆ ಮಾಡುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಸಮರ್ಥಿಸಿಕೊಂಡರು.
ಇದನ್ನು ಓದಿ: ರಾಜ್ಯ ಬಜೆಟ್ 2022-23: ಕೃಷಿ, ಆರೋಗ್ಯ, ಶಿಕ್ಷಣ ಒಳಗೊಂಡು ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?
ನಿಮ್ಮ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ್ ಅವರಿಗೆ ಹಿಂದೆ ನಾನು ಅನುದಾನ ನೀಡಿದ್ದೇನೆಯೇ ಎಂದು ಸಭಾಧ್ಯಕ್ಷರನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, ಮಾಧುಸ್ವಾಮಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ ಎಂದು ಭಾವಿಸಿದ್ದೇನೆ, ಅವರು ಹಿರಿಯ ಸದಸ್ಯರು ಕೂಡ ಹೌದು. ಇದನ್ನು ಪ್ರಿವಿಲೇಜ್ ಕಮಿಟಿಗೆ ಕಳಿಸುವ ಬದಲು ಇನ್ನು ಮುಂದೆ ಈ ತಪ್ಪು ಆಗುವುದಿಲ್ಲ ಎಂದು ಸರ್ಕಾರ ಉತ್ತರ ನೀಡಲಿ. ಈಗಾಗಲೇ ಸೋತ ಅಭ್ಯರ್ಥಿಗಳ ಹೆಸರಿನಲ್ಲಿ ನೀಡಿರುವ ಅನುದಾನವನ್ನು ವಾಪಾಸ್ಸು ಪಡೆಯಿರಿ ಎಂದು ಆಗ್ರಹಿಸಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯೆ ನೀಡಿ, ಬಹಳ ಹಿಂದಿನಿಂದಲೂ ಇಂತಹ ಕೆಟ್ಟ ಸಂಪ್ರಾದಾಯ ನಡೆದುಕೊಂಡು ಬಂದಿದೆ. ಆದರೆ, ಇದೀಗ ರಾಜೇಗೌಡ ಪ್ರಸ್ತಾಪಿಸಿರುವ ವಿಚಾರ ಹಕ್ಕುಚ್ಯುತಿ ವ್ಯಾಪ್ತಿಗೆ ಬರುವುದಿಲ್ಲ’ ಎಂದರು. ಸಭಾಧ್ಯಕ್ಷರ ಮಾತಿಗೆ ಸಮಾಧಾನಗೊಳ್ಳದ ಶಾಸಕರಾದ ರಾಜೇಗೌಡ ಹಾಗೂ ಡಾ.ರಂಗನಾಥ್ ಸದನದ ಬಾವಿಗೆ ಇಳಿದು ಧರಣಿ ನಡೆಸಿದರು. ಈ ವೇಳೆ ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯಿತು.
ಮತ್ತೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಕಾಗೇರಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲಾಪ ಸಲಹಾ ಸಮಿತಿ(ಬಿಎಸ್ಸಿ) ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ