ಸಿಎಂ ಸೊರೆನ್ ಮತ್ತು ಆದಿವಾಸಿ ಜನಾಂಗದ ವಿರುದ್ಧ ಕೀಳು ಮಟ್ಟ ದ ಹೇಳಿಕೆ | ನಿರೂಪಕ ಸುಧೀರ್ ಚೌಧರಿ ಭಾಷಣ ಕೈಬಿಟ್ಟ ಐಐಟಿ ಬಾಂಬೆ

ಮುಂಬೈ: ಆದಿವಾಸಿಗಳು ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿದ್ದ ಕಾರಣಕ್ಕೆ ಆಜ್ ತಕ್ ನಿರೂಪಕ ಸುಧೀರ್ ಚೌಧರಿ ಅವರ ಭಾಷಣವನ್ನು ಐಐಟಿ ಬಾಂಬೆ ರದ್ದುಗೊಳಿಸಿದೆ ಎಂದು ತಡವಾಗಿ ವರದಿಯಾಗಿದೆ. ಸಂಸ್ಥೆಯ ಪ್ರಮುಖ ಕಾರ್ಯಕ್ರಮವಾದ ವಾರ್ಷಿಕ ವ್ಯಾಪಾರ ಸಮಾವೇಶ ‘ಇ-ಸಮ್ಮಿಟ್ 2024’ಗೆ ಸುಧೀರ್‌ಗೆ ಆಹ್ವಾನ ನೀಡಲಾಗಿತ್ತು. ಆದರೆ ವಿದ್ಯಾರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಿದ ನಂತರ ಇದನ್ನು ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.

ಫೆಬ್ರವರಿ 4ರ ಭಾನುವಾರ ನಡೆದ ಘಟಿಕೋತ್ಸವದ ಸಭಾಂಗಣದಲ್ಲಿ ಸುಧೀರ್‌ ಚೌಧರಿ ಮಾತನಾಡುವ ಬಗ್ಗೆ ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ ಶನಿವಾರ ರಾತ್ರಿ ವಿದ್ಯಾರ್ಥಿಗಳಿಗೆ ಕಳುಹಿಸಲಾದ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ತೆಗೆಯಲಾಗಿದ್ದು, ಅವರ ಬದಲಿಗೆ ಶಾಪ್‌ಕ್ಲೂಸ್ ಸಂಸ್ಥಾಪಕಿ ರಾಧಿಕಾ ಅಗರ್‌ವಾಲ್ ಅವರ ಹೆಸರು ಪ್ರಕಟಿಸಲಾಗಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ‘ಮೀಸಲಾತಿಗೆ ವಿರುದ್ಧ ಇದ್ದರು’ | ನೆಹರೂ ವಿರುದ್ಧ ಮತ್ತೆ ದಾಳಿ ಮಾಡಿದ ಪ್ರಧಾನಿ ಮೋದಿ

ಸಂಸ್ಥೆಯ ವಿದ್ಯಾರ್ಥಿ ಸಂಘಟನೆಯಾದ ಇ-ಸೆಲ್ ಆಯೋಜಿಸಿದ್ದ ಎರಡು ದಿನಗಳ ಈ ಕಾರ್ಯಕ್ರಮ ಶನಿವಾರ ಆರಂಭವಾಗಿತ್ತು. ವಿದ್ಯಾರ್ಥಿ ಸಂಘಟನೆ ಕಾರ್ಯಕ್ರಮ ಆಯೋಜಿಸಿದ್ದರೂ, ಇದರಲ್ಲಿ ಯಾರು ಮಾತನಾಡಬೇಕು ಎಂಬ ಬಗ್ಗೆ ತೀರ್ಮಾನಗಳನ್ನು ಐಐಟಿ ತೆಗೆದುಕೊಳ್ಳುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. “ಸುಧೀರ್ ಚೌಧರಿ ಪತ್ರಿಕೋದ್ಯಮ ಮತ್ತು ಉದ್ಯಮಶೀಲತೆಯ ಬಗ್ಗೆ ಮಾತನಾಡಲು ನಿರ್ಧರಿಸಿದ್ದರು. ಆದರೆ ಶನಿವಾರ ರಾತ್ರಿ ಕ್ಯಾಲೆಂಡರ್ ಬದಲಾವಣೆಯ ಬಗ್ಗೆ ಮೌಖಿಕವಾಗಿ ಅವರಿಗೆ ತಿಳಿಸಲಾಯಿತು” ಎಂದು ಸಂಘಟಕರೊಬ್ಬರು ಹೇಳಿದ್ದಾರೆ ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ.

ಸುಧೀರ್ ಚೌಧರಿ ಇತ್ತೀಚೆಗೆ ತನ್ನ ಟಿವಿ ಕಾರ್ಯಕ್ರಮದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಬುಡಕಟ್ಟು ಅಸ್ಮಿತೆ ಮತ್ತು ಅವರು ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಪಡೆಯುವ ಹಕ್ಕುಗಳನ್ನು ಕೀಳು ಮಟ್ಟದಲ್ಲಿ ಪ್ರಶ್ನಿಸಿದ್ದರು. ಈ ಹೇಳಿಕೆಯ ನಂತರ ನಿರೂಪಕ ಸುಧೀರ್ ವಿರುದ್ಧ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಅದಾಗ್ಯೂ, ತನ್ನ ವಿರುದ್ಧದ ಆರೋಪಗಳಿಗೆ ಸುಧೀರ್ “ಆಧಾರರಹಿತ” ಎಂದು ಕರೆದಿದ್ದರು. ಸೋರೆನ್ ಅವರನ್ನು ಟೀಕಿಸುವುದು “ಬುಡಕಟ್ಟು ಜನಾಂಗದವರನ್ನು ಅವಮಾನಿಸುವುದಕ್ಕೆ ಸಮಾನವಲ್ಲ” ಎಂದು ಅವರು ಹೇಳಿದ್ದರು.

ಜನವರಿ 31 ರಂದು ತನ್ನ ಪ್ರೈಮ್‌ಟೈಮ್ ಕಾರ್ಯಕ್ರಮದಲ್ಲಿ, ಸೊರೆನ್ ಮತ್ತು ಅವರ ಕುಟುಂಬವು ದೊಡ್ಡ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ ಹಾಗಾಗಿ ಅವರು ಆದಿವಾಸಿಗಳಲ್ಲ ಎಂದು ಸುಧೀರ್ ಚೌಧರಿ ಹೇಳಿದ್ದರು. ಜೊತೆಗೆ ಸೋರೆನ್ ಅವರನ್ನು ಅಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಹೀಗಾಗಿ ಸೊರೆನ್ ಅವರು ಅಂದು ಜೈಲಿನಲ್ಲಿ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದಂತೆ ರಾತ್ರಿ ಕಳೆಯಲಿದ್ದಾರೆ ಎಂದು ಸುಧೀರ್ ಹೇಳಿದ್ದರು.

ಇದನ್ನೂ ಓದಿ: ಉತ್ತರಾಖಂಡ | ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರ

ಐಐಟಿಯಲ್ಲಿ ಅವಹೇಳನಕಾರಿ ಹೇಳಿಕೆಗಳಿಗೆ ಆಕ್ಷೇಪಣೆ

ಸುಧೀರ್‌ ಬುಡಕಟ್ಟು ಜನಾಂಗದವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಿದ್ಯಾರ್ಥಿಯೊಬ್ಬರು ಅವರ ಆಹ್ವಾನವನ್ನು ವಿರೋಧಿಸಿದ್ದರು ಎಂದು ವರದಿಯಾಗಿದೆ. ಅದೇ ರೀತಿಯ ದೂರನ್ನು ತಾನು ಐಐಟಿ ಆಡಳಿತ ಮಂಡಳಿಗೆ ಕಳುಹಿಸಿರುವುದಾಗಿ ಮತ್ತೊಬ್ಬ ವಿದ್ಯಾರ್ಥಿ ಹೇಳಿಕೊಂಡಿದ್ದಾರೆ.

“ಸುಧೀರ್‌ ಚೌಧರಿ ದೊಡ್ಡ ಕೋಮು ದ್ವೇಷ ಪ್ರಚೋದಕ, ಆದ್ದರಿಂದ ನಾವು ಅವರಿಗೆ ಯಾವುದೇ ರೀತಿಯ ವೇದಿಕೆಯನ್ನು ನೀಡಲು ಬಯಸುವುದಿಲ್ಲ. ಹೇಮಂತ್ ಸೋರೆನ್ ಬಂಧನದ ಬಗ್ಗೆ ಅವರು ನೀಡಿರುವ ಹೇಳಿಕೆಯು ಕೀಳು ಮಟ್ಟದ್ದಾಗಿದೆ. ಅದಾಗ್ಯೂ ಐಐಟಿ ಅವರನ್ನು ಆಹ್ವಾನಿಸಿದರೆ ಅದು ಕೆಟ್ಟ ಸಂದೇಶ ಕಳುಹಿಸಿದಂತೆ” ಎಂದು ಅವರು ಹೇಳಿದ್ದಾರೆ.

ಸುಧೀರ್ ಚೌಧರಿ ಅವರ ಉಪನ್ಯಾಸ ರದ್ದತಿಯ ಬಗ್ಗೆ ಅವರಿಗೆ ಐಐಟಿ ಆಡಳಿತ ಮಂಡಳಿ ಔಪಚಾರಿಕವಾಗಿ ತಿಳಿಸಿಲ್ಲ ಮತ್ತು ಬದಲಿಗೆ ಕಾರ್ಯಕ್ರಮದ ನವೀಕರಿಸಿದ ಕ್ಯಾಲೆಂಡರ್ ಅನ್ನು ಕಳುಹಿಸಿದೆ ಎಂದು ತಿಳಿದು ಬಂದಿದೆ.

ವಿಡಿಯೊ ನೋಡಿ: ಎಚ್ಚರ ಮತ್ತು ವಿವೇಕದ ಕಣ್ಣುಗಳನ್ನು ತೆರೆಯಿಸುವ ಹೊಣೆ ಪತ್ರಕರ್ತರದ್ದು – ಟಿ. ಗುರುರಾಜ Janashakthi Media

Donate Janashakthi Media

Leave a Reply

Your email address will not be published. Required fields are marked *