ಬೆಂಗಳೂರು: ʻಮಂಗಳೂರಿನ ದಂಪತಿಗಳು ಕೋವಿಡ್ ಸೋಂಕಿಗೆ ಹೆದರಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನೋವಿನ ಸಂಗತಿ. ಸೋಂಕು ಬಂದ ಕೂಡಲೇ ಯಾರು ಸಾಯುವುದಿಲ್ಲ, ಮಾಹಿತಿ ಕೊರತೆ ಇರಬಹುದು. ಅನೇಕರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಘಟನೆ ವೈಯಕ್ತಿಕವಾಗಿ ನೋವು ತರಿಸಿದೆʼ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿ: ಸದ್ಯಕ್ಕೆ ಲಾಕ್‌ಡೌನ್ ಇಲ್ಲ-ಜಿಲ್ಲಾವಾರು ಕೋವಿಡ್ ತಡೆಗೆ ಕ್ರಮ ಹಾಗೂ ಶಾಲೆಗಳು ಆರಂಭ: ಸಿಎಂ ಬೊಮ್ಮಾಯಿ
ಯಾರು ಹೆದರುವ ಅವಶ್ಯಕತೆ ಇಲ್ಲ. ಯಾರಿಗಾದರೂ ಸೋಂಕು ಲಕ್ಷಣ ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಇಲಾಖೆ, ವೈದ್ಯರು ನಿಮ್ಮ ಜೊತೆಯೆ ಇರುತ್ತಾರೆ. ಒಂದೂವರೆ ವರ್ಷದಲ್ಲಿ ಅನೇಕ ಪಾಠ ಕಲಿತಿದ್ದೇವೆ. ಯಾರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಡಿ. ಸಂಪೂರ್ಣ ಲಸಿಕೆ ಪಡೆಯೋವರೆಗೂ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ
‘ರಾಜ್ಯದಲ್ಲಿ ಇದುವರೆಗೆ 3.50 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. 18 ವರ್ಷ ಮೇಲಿನ ಎಲ್ಲರಿಗೂ ಡಿಸೆಂಬರ್ ಅಂತ್ಯದೊಳಗೆ ಲಸಿಕೆ ವಿತರಣೆಯಾಗಲಿದೆ. ಈಗಾಗಲೇ ಕೇಂದ್ರ ಆರೋಗ್ಯ ಸಚಿವರ ಜೊತೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಶೀಘ್ರದಲ್ಲಿಯೇ ನಾನು ನಾನು ದೆಹಲಿಗೆ ತೆರಳಿ ಅಗತ್ಯ ಪ್ರಮಾಣದ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ’ ಎಂದರು.
ಸಿಎಸ್‌ಆರ್ ನಿಧಿಯಿಂದ ಲಸಿಕೆ ಖರೀದಿಸಲು ಕೋರಿಕೆ
‘ಲಸಿಕೆಗಳಲ್ಲಿ ಖಾಸಗಿ ವಲಯಕ್ಕೆ ಶೇಕಡ 25ರಷ್ಟು ಮೀಸಲಾಗಿದೆ. ಔಷಧಿ ತಯಾರಿಸುವ ಎಲ್ಲ ಕಂಪನಿಗಳ ಮುಖ್ಯಸ್ಥರು, ದೊಡ್ಡ ಕೈಗಾರಿಕೆಗಳ ಮುಖ್ಯಸ್ಥರು, ಆಹಾರ ತಯಾರಿಸುವ ಕಂಪನಿಗಳ ಮುಖ್ಯಸ್ಥರ ಸಭೆಯೊಂದನ್ನು ಇಂದು ಕರೆಯಲಾಗಿದೆ. ದೊಡ್ಡ ದೊಡ್ಡ ಕಂಪನಿಯವರು ತಮ್ಮ ಸಿಎಸ್‌ಆರ್ ನಿಧಿಯ ಮೂಲಕ ಲಸಿಕೆಯನ್ನು ಖರೀದಿಸಿ ಸರ್ಕಾರಕ್ಕೆ ಕೊಡುವಂತೆ ಮನವಿ ಮಾಡುತ್ತೇವೆ. ಅದೇ ರೀತಿ ಐಟಿ ಬಿಟಿ ಕಂಪನಿಗಳೂ ಸಿಎಸ್‌ಆರ್ ನಿಧಿಯನ್ನು ಲಸಿಕೆಗೆ ಬಳಸಬೇಕು ಎಂದು ಕೋರುತ್ತೇವೆ. ಇದರಿಂದ ಅತ್ಯಂತ ವೇಗವಾಗಿ ಎಲ್ಲರಿಗೂ ಲಸಿಕೆ ಕೊಡಲು ಸಾಧ್ಯವಾಗಲಿದೆ’ ಎಂದರು.
ಜನಪ್ರತಿನಿಧಿಗಳಿಂದ ಆಗುತ್ತಿರುವ ಕೊರೊನಾ ನಿಯಮ ಉಲ್ಲಂಘನೆ ಬಗ್ಗೆ ಪ್ರತಿಕ್ರಿಯೆಸಿದ ಸಚಿವರು ಆರೋಗ್ಯ ಸಚಿವನಾಗಿ ಮನವಿ ಮಾಡುವೆ, ಯಾರೂ ಕೂಡು ಹೆಚ್ಚಿನ ಪ್ರಮಾಣದಲ್ಲಿ ಗುಂಪು ಸೇರದಿರಿ. ಜನಸಾಮಾನ್ಯರೇ ಆಗಿರಲಿ, ಯಾರೇ ಆಗಲಿ ಅಥವಾ ಮಂತ್ರಿಯೇ ಆಗಿರಲಿ ನಿಯಮವನ್ನು ಪಾಲಿಸಬೇಕು. ಇಲ್ಲವಾದಲ್ಲಿ ಅಪಾಯ ಕಾದಿದೆ ಎಂದು ಎಚ್ಚರಿಕೆ ನೀಡಿದರು.