ಜೈಪುರ: ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳಿಗೆ ಸಮವಸ್ತ್ರದ ಮಾನದಂಡ ವಿಧಿಸಲಾಗಿದೆ. ಆರ್ಧ ತೋಳಿನ ಬಟ್ಟೆಯನ್ನು ಮಾತ್ರ ಧರಿಸಿ ಬರಬೇಕು. ಇಲ್ಲವಾದಲ್ಲಿ ಬಟ್ಟೆಯ ತೋಳುಗಳನ್ನು ಪೊಲೀಸ್ ಸಿಬ್ಬಂದಿಯೇ ಕತ್ತರಿಸಿ ಹಾಕುವ ಘಟನೆ ರಾಜಸ್ಥಾನದ ಭರತ್‍ಪುರದಲ್ಲಿ ನಡೆದಿದೆ.
ವೀಡಿಯೋವೊಂದು ವೈರಲ್ ಆಗಿದ್ದು, ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಪೂರ್ಣ ತೋಳಿನ ಬಟ್ಟೆ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಅಭ್ಯರ್ಥಿಗಳ ಬಟ್ಟೆಯ ತೋಳನ್ನು ಕತ್ತರಿಸುತ್ತಿರುವ ಮಹಿಳಾ ಪೊಲೀಸ್‍ಯೊಬ್ಬರನ್ನು ಕಾಣಬಹುದು. ಈ ವೇಳೆ ಅನೇಕ ಹುಡುಗಿಯರು ತಮ್ಮ ಬಟ್ಟೆಯನ್ನು ಕತ್ತರಿಸುವುದನ್ನು ನೋಡಿ ಬೇಸರ ವ್ಯಕ್ತಪಡಸಿ ಅಳಲು ತೋಡಿಕೊಂಡಿದ್ದಾರೆ. ಇದಲ್ಲದೆ ಪರೀಕ್ಷೆಗೆ ಹಾಜರಾಗಲು ಬಂದ ವಿವಾಹಿತ ಮಹಿಳೆಯರಿಗೂ ಸಹ ಅವರು ಧರಿಸಿದ್ದ ಚೈನ್ ಮತ್ತು ಇತರ ಆಭರಣಗಳನ್ನು ತೆಗೆಯುವಂತೆ ಪೊಲೀಸರು ತಾಕೀತು ಮಾಡಿದ್ದಾರೆ.
ಪರೀಕ್ಷೆಗೆ ಒಂದು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದದ ಒಳಗೆ ಪ್ರವೇಶಿಸಲು ಅನುಮತಿ ನೀಡದಿರುವುದು ಸಹ ನಡೆದಿದೆ. ಇದೇ ವೇಳೆ ಬಾಲಕಿಯೊಬ್ಬಳು ಎಷ್ಟೋ ದಿನಗಳಿಂದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ ಎಂದು ಹೇಳುತ್ತಾ ಅಳಲು ತೋಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಪರೀಕ್ಷೆಗೆ ಹಾಜರಾಗಲು ಬಿಡದ ಕಾರಣ ಕೊನೆಗೆ ನಿರಾಸೆಯಿಂದ ಮರಳಬೇಕಾಯಿತು.
ಈ ಕುರಿತಂತೆ ಮಾತನಾಡಿದ ಎಎಸ್‍ಪಿ ಅನಿಲ್ ಮೀನಾ ಅವರು, ಭರತ್‍ಪುರ ಜಿಲ್ಲೆಯಲ್ಲಿ 3,000 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಬಂದಿದ್ದಾರೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಭದ್ರತೆಯಿದ್ದು, ಪರೀಕ್ಷೆಯನ್ನು ಶಾಂತಿಯುತ ವಾತಾವರಣದಲ್ಲಿ ನಡೆಸಲಾಗುತ್ತಿದೆ ಎಂದಿದ್ದಾರೆ.
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಈ ಮೊದಲೇ ಅರ್ಧ ತೋಳಿನ ಟೀ ಶರ್ಟ್, ಶರ್ಟ್, ಸೂಟ್, ಸೀರೆ ಧರಿಸಿ ಬರಬೇಕು ಮತ್ತು ಕೂದಲಿಗೆ ಸರಳವಾದ ರಬ್ಬರ್ ಬ್ಯಾಂಡ್ ಬಳಸಬೇಕು. ಅಲ್ಲದೇ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್‍ಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಸರ, ಉಂಗುರ, ಕಿವಿಯೋಲೆಗಳನ್ನು ಧರಿಸದಂತೆ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿತ್ತು ಎಂದು ತಿಳಿಸಿದ್ದಾರೆ.