ಹೊಸಕೋಟೆ: ಸ್ಕೈವಾಕ್ ನಿರ್ಮಿಸುವಂತೆ ಆಗ್ರಹಿಸಿ ಎಂವಿಜೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರೋಫೆಸರ್ಗಳಿಂದ ಧರಣಿ ನಡೆಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿರುವ ಎಂವಿಜೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸಿದ್ದಾರೆ.
ಸ್ಕೈವಾಕ್ ಇಲ್ಲದ ಕಾರಣ ಇಲ್ಲಿ ಪದೇ ಪದೇ ಅಪಘಾತ ಸಂಭವಿಸ್ತಿವೆ. ಈ ಸಾವಿಗೆ ಯಾರು ಹೊಣೆ. ಹೆದ್ದಾರಿ ದಾಟುವ ವೇಳೆ ಅಪಘಾತಗಳಿಗೆ ಅಮಾಯಕರು ಬಲಿಯಾಗ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಕೂಡಲೇ ಸ್ಕೈವಾಕ್ ನಿರ್ಮಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಾ. ಧರಣಿ, ಈ ಆಸ್ಪತ್ರೆಗೆ ಮುಖ್ಯ ರಸ್ತೆಯನ್ನು ದಾಟಿ ನಂತರ ಆಸ್ಪತ್ರೆಗೆ ರೋಗಿಗಳು ಹಾಗೂ ಸಿಬ್ಬಂದಿಗಳು ಪ್ರತಿನಿತ್ಯ ಸಂಚರಿಸಬೇಕಾದ ಕಾರಣ ಈ ಭಾಗದಲ್ಲಿ ಸ್ಕೈ ವಾಕ್ ನಿರ್ಮಾಣಮಾಡಬೇಕು ಈಗಾಗಲೇ ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಹೋಗಿ ನರರೋಗ ತಜ್ಞರು ಸೇರಿದಂತೆ 5 ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಎನ್.ಹೆಚ್.ಐ. ಅವರಿಗೆ ಹಲವು ಭಾರಿ ಮನವಿ ಮಾಡಿದರೂ ಯಾವುದೇ ರೀತಿಯ ಉಪಯೋಗವಾಗಿಲ್ಲ ಎಂದು ದೂರಿದರು.
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಘಟನೆ ವಿಕೋಪಕ್ಕೆ ತೀರುಗಿತ್ತಿದ್ದಂತೆ ಸ್ಥಳೀಯ ಪೊಲೀಸರು ಹಾಗೂ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ವಿಶ್ವಾಸ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟಿದ್ದಾರೆ.