ನವದೆಹಲಿ: ದೇಶದ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಹಾಗೂ, ಆರ್‌ಜೆಡಿ, ಶಿವಸೇನೆ ಉದ್ಧವ್ ಠಾಕ್ರೆ ಬಣ, ಟಿಆರ್‌ಎಸ್ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ.
ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವಿನ ನೇರ ಹಣಾಹಣಿ ಎಂದೇ ಬಣ್ಣಿಸಲಾದ ಈ ಏಳು ಕ್ಷೇತ್ರಗಳಿಗೆ ನವೆಂಬರ್ 3ರಂದು ಮತದಾನ ನಡೆದಿತ್ತು. ಬಿಜೆಪಿ ಪಕ್ಷವು ಹರಿಯಾಣ, ಉತ್ತರ ಪ್ರದೇಶ, ಒಡಿಶಾ ಮತ್ತು ಬಿಹಾರದಲ್ಲಿ ಗೆಲುವು ಸಾಧಿಸಿದೆ. ಅದೇ ರೀತಿ, ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ), ಮಹಾರಾಷ್ಟ್ರದಲ್ಲಿ ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ), ತೆಲಂಗಾಣದಲ್ಲಿ ಆಡಳಿತರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ ಗೆಲುವು ಸಾಧಿಸಿದೆ.
ಬಿಹಾರ – ಸಂಯುಕ್ತ ಜನತಾ ದಳ(ಜೆಡಿಯು) ಮತ್ತು ರಾಷ್ಟ್ರೀಯ ಜನತಾ ದಳ ಆರ್‌ಜೆಡಿ ಮೈತ್ರಿ ಸರ್ಕಾರ ರಚನೆಯ ಬಳಿಕ ಇದೀಗ ಎರಡು ಕ್ಷೇತ್ರಗಳ ಉಪಚುನಾವಣೆ ನಡೆದಿದ್ದು, ಬಿಜೆಪಿ ಮತ್ತು ಆರ್‌ಜೆಡಿ ತಲಾ ಒಂದೊಂದು ಸ್ಥಾನ ಗೆದ್ದಿವೆ. ಮೋಕಮಾ ಕ್ಷೇತ್ರವನ್ನು ಆರ್‌ಜೆಡಿ ಮರಳಿ ಗಳಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಸೋನಂ ದೇವಿಯನ್ನು ಆರ್ಜೆಡಿಯ ನೀಲಂ ದೇವಿ 16 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಸೋನಂ 63,003 ಮತಗಳನ್ನು ಪಡೆದರೆ, ನೀಲಂ 79,744 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಗೋಪಾಲ್ ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ಸುಕುಮಾ ದೇವಿಯ ಗೆಲುವು ಪಡೆದಿದ್ದು, ಆರ್‌ಜೆಡಿ ಅಭ್ಯರ್ಥಿ ಮೋಹನ್ ಪ್ರಸಾದ್ ಗುಪ್ತಾ ಕೆಲವೇ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕುಸುಮಾ 70,053 ಮತಗಳನ್ನು ಗಳಿಸಿದ್ದರೆ, ಆರ್ಜೆಡಿಯ ಗುಪ್ತಾ 68,259 ಮತಗಳನ್ನು ಪಡೆದಿದ್ದಾರೆ.
ಹರಿಯಾಣ: ಅದಂಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭವ್ಯಾ ಬಿಷ್ಣೋಯ್ ಅವರು ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಜೈ ಪ್ರಕಾಶ್ ಅವರನ್ನು ಸುಮಾರು 15 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ್ದಾರೆ.
ಒಡಿಶಾ: ಬಿಡಿಶಾದಲ್ಲೂ ಅಚ್ಚರಿ ಫಲಿತಾಂಶ ಹೊರಬಿದ್ದಿದ್ದು, ಧಮ್ನಗರ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜು ಜನತಾದಳ(ಬಿಜೆಡಿ)ಗೆ ಮತದಾರರು ಕೈಹಿಡಿಯದಿದ್ದು, ಬಿಜೆಪಿಯ ಸೂರ್ಯಬಂಶಿ ಸೂರಜ್ 80,351 ಮತ ಪಡೆದು ಗೆದ್ದಿದ್ದಾರೆ. ಬಿಜೆಡಿಯ ಅಬಂತಿ ದಾಸ್ 70,470 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ.
ಉತ್ತರ ಪ್ರದೇಶ: ಇಲ್ಲಿ ಆಡಳಿತಾರೂಢ ಬಿಜೆಪಿಗೆ ಮತದಾರರು ಫಲಿತಾಂಶ ನೀಡಿದ್ದು, ಬಿಜೆಪಿ ಪಕ್ಷದ ಅಭ್ಯರ್ಥಿ ಅಮನ್ ಗಿರಿ 1,24,810 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಸಮಾಜವಾದಿ ಪಕ್ಷದ ವಿನಯ್ ತಿವಾರಿ 90,512 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ.
ಮಹಾರಾಷ್ಟ್ರ: ಮುಂಬೈನ ಅಂಧೇರಿ(ಪೂರ್ವ) ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯ ಅಭ್ಯರ್ಥಿ ರುತುಜಾ ಲಟ್ಕೆ 66,530 ಮತಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ರುತುಜಾ ಲಟ್ಕೆ ಅವರು ಚಲಾವಣೆಯಾದ ಮತಗಳ ಪೈಕಿ ಶೇ.76.85ರಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ. ಶೇಕಡಾ 14.79ರಷ್ಟು ಮತ ಪಡೆದ ನೋಟಾ ಇತರ ಆರು ಪಕ್ಷೇತರ ಅಭ್ಯರ್ಥಿಗಳಿಗಿಂತ ಮುಂದಿದಿದ್ದು ಎರಡನೇ ಸ್ಥಾನ ಪಡೆದುಕೊಂಡಿದೆ.
ತೆಲಂಗಾಣ: ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಮತ್ತು ಬಿಜೆಪಿ ನಡುವೆ ನೇರಾ-ನೇರ ಪೈಪೋಟಿ ಏರ್ಪಟ್ಟಿದ್ದು, ಒಟ್ಟಾರೆ 48 ಅಭ್ಯರ್ಥಿಗಳು ಕಣದಲ್ಲಿದ್ದರು. ಇಲ್ಲಿ ಟಿಆರ್‌ಎಸ್ ಹಾಗೂ ಬಿಜೆಪಿ ಮಧ್ಯ ತೀವ್ರ ಹೋರಾಟ ನಡೆದಿದೆ. ಟಿಆರ್‌ಎಸ್ ಅಭ್ಯರ್ಥಿ ಕೆ.ಪ್ರಭಾಕರ್ ರೆಡ್ಡಿ ಸದ್ಯ 10 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದು, ಬಿಜೆಪಿಯ ಅಭ್ಯರ್ಥಿ ಕೆ.ರಾಜ್ಗೋಪಾಳ್ ರೆಡ್ಡಿ ಎರಡನೇ ಸ್ಥಾನದಲ್ಲಿದ್ದಾರೆ. ಚುನಾವಣಾ ಆಯೋಗ ಫಲಿತಾಂಶವನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ.