ನವದೆಹಲಿ: “2019 ರಲ್ಲಿ ರಾಜ್ಯದಿಂದ ಆರ್ಟಿಕಲ್ 370 ರದ್ದತಿಯ ನಂತರ ಪ್ರತ್ಯೇಕತಾವಾದಿ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿವೆ” ಎಂದು ನ್ಯೂಸ್ 18 ವಾಹಿನಿ ಆಯೋಜಿಸಿದ್ದ ‘ಡೈಮಂಡ್ ಸ್ಟೇಟ್ಸ್ ಶೃಂಗಸಭೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹುರಿಯತ್ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರಿಗೆ ಸಿಆರ್‌ಪಿಎಫ್ ಭದ್ರತೆಯನ್ನು ಒದಗಿಸುವ ಪರಿಸ್ಥಿತಿಯನ್ನು ಈ ಹಿಂದೆ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ನಾನು ಅದರ ಬಗ್ಗೆ ಯೋಚಿಸಲು ಸಹ ಸಾಧ್ಯವಾಗಲಿಲ್ಲ, ಆದರೆ ಪರಿಸ್ಥಿತಿ ಬದಲಾಗಿದೆ ಎಂದು ಅವರು ಹೇಳಿದರು. ಫೆಬ್ರವರಿ 21 ರಂದು ನವದೆಹಲಿಗೆ ಭೇಟಿ ನೀಡಿದ ನಂತರ ಫಾರೂಕ್ ಅವರಿಗೆ ಹೆಚ್ಚಿನ ಬೆದರಿಕೆ ಇದೆ ಎಂದು ತಿಳಿದುಬಂದ ನಂತರ, ಕೇಂದ್ರ ಸರ್ಕಾರವು ಅವರ ಭದ್ರತೆಯನ್ನು ಹೆಚ್ಚಿಸಿತು.
ದೆಹಲಿ ಭೇಟಿಯ ಸಮಯದಲ್ಲಿ, ಫಾರೂಕ್ ಅವರು ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತು ಜಂಟಿ ಸಂಸದೀಯ ಸಮಿತಿಗೆ ಮನವಿ ಸಲ್ಲಿಸಿದರು ಮತ್ತು ಕಾಶ್ಮೀರಿ ಪಂಡಿತರ ಗುಂಪಿನೊಂದಿಗೆ ಸಭೆ ನಡೆಸಿದರು. ಮೂಲಗಳ ಪ್ರಕಾರ, ಅವರಿಗೆ ಈಗ ಸಿಆರ್‌ಪಿಎಫ್ ನಿಕಟ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ತೆಲಂಗಾಣ| ಸುರಂಗದ ಮೇಲ್ಛಾವಣಿ ಕುಸಿತ: ಕಾರ್ಮಿಕರನ್ನು ರಕ್ಷಿಸಲು ಕಾರ್ಯ ಮುಂದುವರಿಕೆ
ಓಮರ್ ಅಬ್ದುಲ್ಲಾ ವಿರುದ್ಧ ಟೀಕೆ
ಮಿರ್ವೈಜ್ ಉಮರ್ ಫಾರೂಕ್ ಅವರಿಗೆ ನೀಡಲಾಗಿರುವ ಸಿಪಿಆರ್‌ಎಫ್ ಭದ್ರತಾ ವ್ಯವಸ್ಥೆಯು ಕಣಿವೆಯಲ್ಲಿ ಪ್ರತ್ಯೇಕತಾವಾದಿ ರಾಜಕೀಯ ಕ್ಷೀಣಿಸುತ್ತಿರುವುದರ ಸಂಕೇತವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ನೀಡಿರುವ ಹೇಳಿಕೆ ತೀವ್ರ ಟೀಕೆಗೆ ಗುರಿಯಾಗಿದೆ.
ಅಬ್ದುಲ್ಲಾ ಅವರ ಹೇಳಿಕೆಯನ್ನು ಫಾರೂಕ್ ಅವರ ಕಚೇರಿ “ಅಸಂಬದ್ಧ” ಎಂದು ಕರೆದರೆ, ವಿರೋಧ ಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ (ಪಿಡಿಪಿ) “ಮಿರ್ವೈಜ್ ಅವರನ್ನು ಪ್ರತ್ಯೇಕಿಸುವುದರಿಂದ ಅವರಿಗೆ ಹೆಚ್ಚಿನ ಅಪಾಯ ಉಂಟಾಗುತ್ತದೆ” ಎಂದು ಹೇಳಿದೆ. ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಮತ್ತು ಶಾಸಕ ಸಜಾದ್ ಲೋನ್ ಅವರು ಸಿಎಂ ಅವರ ಹೇಳಿಕೆಯನ್ನು “ವಿಡಂಬನಾತ್ಮಕ ಮಾತು” ಎಂದು ಬಣ್ಣಿಸಿದ್ದಾರೆ.
370ನೇ ವಿಧಿ ರದ್ದತಿ
2019ರ ಆಗಸ್ಟ್ 5ರಂದು, ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಈ ವಿಶೇಷ ಸ್ಥಾನಮಾನವನ್ನು ಭಾರತೀಯ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಲಾಗಿತ್ತು. ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು. ಈ ಮೂಲಕ ಜಮ್ಮು ಮತ್ತು ಕಾಶ್ಮೀರವು ಭಾರತದ ಇತರ ರಾಜ್ಯಗಳಂತೆಯೇ ಆಯಿತು.
ಸರ್ಕಾರವು ರಾಷ್ಟ್ರಪತಿ ಆದೇಶದ ಮೂಲಕ 370ನೇ ವಿಧಿ ಮತ್ತು 35ಎ ವಿಧಿಯನ್ನು ರದ್ದುಗೊಳಿಸಿತು.ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಮಸೂದೆಯನ್ನು ರಾಜ್ಯಸಭೆಯು ಅಂಗೀಕರಿಸಿತು, ಇದು ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತು.
ಇದನ್ನೂ ನೋಡಿ: ಕೋಲಾರ :- ರಾಜ್ಯಮಟ್ಟದ ಜಾನಪದ ಉತ್ಸವಕ್ಕೆSCSP/TSP ಹಣ ದುರ್ಬಳಕೆ – ಕಾರ್ಯಕ್ರಮ ಬಹಿಷ್ಕರಿಸಿ ಹೊರ ನಡೆದ ಹೋರಾಟಗಾರರು