ಸಿಟಲ್ಕುಚಿ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಸಿಟಲ್ಕುಚಿ ಮತದಾನ ಕೇಂದ್ರದ ಬಳಿ ಗುಂಡಿನ ದಾಳಿಯಲ್ಲಿ ಯುವ ಮತದಾರನೊಬ್ಬನ ಹತ್ಯೆ ಗಂಭೀರ ಸ್ವರೂಪ ಪಡೆದುಕೊಂಡು ಗಲಭೆ ನಡೆದಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸಿಐಎಸ್ಎಫ್ ನಡೆಸಿದ ಗುಂಡಿನ ದಾಳಿಗೆ ಶನಿವಾರ ಮತ್ತೆ ನಾಲ್ವರು ಬಲಿಯಾಗಿದ್ದಾರೆ.
ಘಟನೆಯ ನಂತರ ಚುನಾವಣಾ ಆಯೋಗವು ಮತದಾನ ಕೇಂದ್ರ 125 ರ ಮತದಾನವನ್ನು ಮುಂದೂಡಿದೆ. ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನದ ಸಂದರ್ಭದಲ್ಲಿ ಸಿಟಲ್ಕುಚಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ : ಕೆಂಪುಕೋಟೆ ಸಿಖ್ ಧ್ವಜ ಪ್ರಕರಣ : ಜಾಮೀನಿಗಾಗಿ ಉಲ್ಟಾ ಹೊಡೆದ ದೀಪ್ ಸಿಧು
‘ಮತದಾನ ನಡೆಯುತ್ತಿರುವ ಈ ಹಳ್ಳಿಯಲ್ಲಿ ಗಲಾಟೆ ನಡೆಯಿತು. ಈ ವೇಳೆ ಸ್ಥಳೀಯರು ಸಿಐಎಸ್ಎಫ್ ಸಿಬ್ಬಂದಿಗೆ ಘೇರಾವ್ ಹಾಕಿ, ಬಂದೂಕುಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಆಗ ಕೇಂದ್ರೀಯ ಪಡೆಗಳು ಗುಂಡಿನ ಧಾಳಿ ನಡೆಸಿದ್ದಾರೆ. ಇದರಿಂದಾಗಿ ನಾಲ್ವರು ಹತ್ಯೆಗೀಡಾಗಿದ್ದಾರೆ. ಹತ್ಯೆಗೀಡಾದವರು ತಮ್ಮ ಬೆಂಬಲಿಗರು ಎಂದು ಟಿಎಂಸಿ ಹೇಳುತ್ತಿದೆ. ಇನ್ನು ಕಸ್ಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇಂದ್ರಾಣಿ ಖಾನ್ ಅವರ ಮೇಲೆಯೂ ರಜ್ಡಂಗದಲ್ಲಿ ಹಲ್ಲೆ ನಡೆದಿರುವ ವರದಿ ಬಂದಿದೆ.
ರಾಜ್ಯದಲ್ಲಿ ಇಂದು 5 ಜಿಲ್ಲೆಗಳ 44 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 373 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧ ಚುನಾವಣಾ ಆಯೋಗವು ವಿಶೇಷ ಪೊಲೀಸ್ ವೀಕ್ಷಕರು ಮತ್ತು ಜಿಲ್ಲಾಧಿಕಾರಿಗಳ ಬಳಿ ಮಾಹಿತಿಯನ್ನು ಕೇಳಿದೆ.
ಈ ಬಗ್ಗೆ ಮಾಹಿತಿ ನೀಡಿದ ಟಿಎಂಸಿಯ ಡೊಲಾ ಸೇನ್, ಕೇಂದ್ರ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದಾರೆ. ಕೂಚ್ ಬೆಹಾರ್ ನ ಬ್ಲಾಕ್ 1ರಲ್ಲಿ ಒಬ್ಬರು ಮೃತಪಟ್ಟು ಮೂವರು ಗಾಯಗೊಂಡರು. ಸಿಟಲ್ಕುಚಿ ಬ್ಲಾಕ್ ನಲ್ಲಿ ಮೂವರು ಹತ್ಯೆಯಾಗಿ ಒಬ್ಬರು ಗಾಯಗೊಂಡಿದ್ದಾರೆ. ಕೇಂದ್ರ ಭದ್ರತಾ ಪಡೆ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.