ಎಸ್.ಐ.ಆರ್ ರದ್ದುಪಡಿಸಲು ಆಗ್ರಹ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ 48 ಗಂಟೆಗಳ ಗಡುವು

ಹೊಸಪೇಟೆ: ಎಸ್.ಐ.ಆರ್ (SIR) ಪ್ರಕ್ರಿಯೆಯ ಗಡುವನ್ನು ವಿಸ್ತರಿಸಬೇಕು ಎಂದು ಈ ಹಿಂದೆ ಆಗ್ರಹಿಸುತ್ತಿದ್ದ ನಾವು, ಇದೀಗ ಎಸ್.ಐ.ಆರ್ ಪ್ರಕ್ರಿಯೆಯನ್ನೇ ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿದರು.

ಹೊಸಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಎಸ್.ಐ.ಆರ್ ಪರಿಶೋಧನ ಹಾಗೂ ಪ್ರತಿರೋಧ ಪ್ರವಾಸದ ಸಭೆಯಲ್ಲಿ ಮಾತನಾಡಿದ ಅವರು, ಯುವ ಮತದಾರರ ನೋಂದಣಿ ಹಾಗೂ ಮತದಾನದ ಹಕ್ಕಿನ ಕುರಿತು ಕಳವಳ ವ್ಯಕ್ತಪಡಿಸಿದರು.

“ಈ ದೇಶವನ್ನು ಆಳುತ್ತಿರುವ ಸರ್ಕಾರಕ್ಕೆ ಯುವ ಪೀಳಿಗೆಯ ಬಗ್ಗೆ ಭಯ ಹುಟ್ಟಿದೆ. ಆದ್ದರಿಂದ ಹೊಸದಾಗಿ ನೋಂದಣಿಯಾಗುವ ಯುವ ಮತದಾರರಿಗೆ ಹಲವು ಮಾರ್ಗಗಳ ಮೂಲಕ ಮತದಾನದ ಹಕ್ಕು ನಿರಾಕರಿಸಲಾಗುತ್ತಿದೆ,” ಎಂದು ಪ್ರಕಾಶ್ ರಾಜ್ ಆರೋಪಿಸಿದರು.

ಎಸ್.ಐ.ಆರ್ ಪ್ರಕ್ರಿಯೆ ಹಾಗೂ ಚುನಾವಣಾ ವ್ಯವಸ್ಥೆಯ ಕುರಿತು ಪ್ರತಿರೋಧ ವ್ಯಕ್ತಪಡಿಸುವ ನಿಟ್ಟಿನಲ್ಲಿ ಸಿಜೆಪಿ (CJP) ವತಿಯಿಂದ ಜಂತರ್ ಮಂತರ್‌ನಲ್ಲಿ ಹೋರಾಟ ಆರಂಭಿಸಲು ಪತ್ರಿಕಾಗೋಷ್ಠಿ ನಡೆಸಲಾಗಿದೆ. ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 48 ಗಂಟೆಗಳ ಒಳಗಾಗಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಬೇಡಿಕೆ ಈಡೇರದಿದ್ದರೆ ಜೆನ್-ಝಡ್ (Gen Z) ಪ್ರತಿಭಟನೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ಪ್ರಕಾಶ್ ರಾಜ್ ಸಭೆಯಲ್ಲಿ ಹೇಳಿದರು.

ಸಭೆಯಲ್ಲಿ ತಿಮ್ಮಯ್ಯ ನಾಯಕ, ಪೀರ್ ಭಾಷ, ಬಣ್ಣದಮನೆ ಸೋಮಶೇಖರ್, ವೀರ ಸಂಗಯ್ಯ, ಜಂಬಯ್ಯ ನಾಯಕ್, ಕರಿಯಪ್ಪ ಗುಡಿಮನೆ, ಕರುಣಾನಿಧಿ, ಕುಮಾರ್ ಸಮತಲ ಸೇರಿದಂತೆ ಕಾರ್ಮಿಕ ಸಂಘಟನೆಗಳ ಹೋರಾಟಗಾರರು, ಪತ್ರಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *