SIR ರದ್ದುಪಡಿಸಿ, ಗ್ಯಾನೇಶ್‌ ಕುಮಾರ್ ವಜಾಗೊಳಿಸಿ: SIR ವಿರೋಧಿ ಒಕ್ಕೂಟ ಆಗ್ರಹ

ಬೆಂಗಳೂರು, ಸೆ.25: ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿರುವ SIR ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರನ್ನು ವಜಾಗೊಳಿಸಿ, SIR ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದೆ. SIR

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿದ್ದು, ನಾಗರಿಕ ಸಮಾಜ ಈ ಹಿಂದೆ ವ್ಯಕ್ತಪಡಿಸಿದ್ದ ಆತಂಕಗಳು ಸತ್ಯವೆಂಬುದು ಸಾಬೀತಾಗಿದೆ ಎಂದು ಒಕ್ಕೂಟದ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗ್ಯಾನೇಶ್‌ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೇಶಾದ್ಯಂತ ಧ್ವನಿ ಎದ್ದಿದೆ ಎಂದು ಹೇಳಿದೆ.

SIR ಪ್ರಕ್ರಿಯೆಯಿಂದ ಕೋಟ್ಯಂತರ ಅರ್ಹ ಮತದಾರರು, ಅದರಲ್ಲೂ ಶೋಷಿತ ಸಮುದಾಯಗಳಿಗೆ ಸೇರಿದ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಒಕ್ಕೂಟ ಆರೋಪಿಸಿದೆ. ಚುನಾವಣಾ ಆಯೋಗವು SIR ಅನ್ನು ಜಾರಿಗೊಳಿಸಿದ ರೀತಿಯಲ್ಲಿಯೇ ಅದರ ನಿರ್ಧಾರಗಳನ್ನು ಕೈಗೊಂಡಿರುವ ವಿಧಾನದಲ್ಲೂ ಅಕ್ರಮ ನಡೆದಿದೆ ಎಂದು ಹೇಳಿದೆ.

ಚುನಾವಣಾ ಆಯೋಗದಲ್ಲಿ ಮೂವರು ಆಯುಕ್ತರು ಸಮಾನರಾಗಿದ್ದು, ಸಾಮಾನ್ಯವಾಗಿ ಸರ್ವಸಮ್ಮತಿಯ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬೇಕು. ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಹುಮತದ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬಹುದು. ಆದರೆ, ಆಯೋಗದೊಳಗೆ ಸರ್ವಸಮ್ಮತಿ ಇಲ್ಲದಿದ್ದರೂ ಹಾಗೂ ಬಹುಮತದ ಅಭಿಪ್ರಾಯವನ್ನೂ ಕಡೆಗಣಿಸಿ ಏಕವ್ಯಕ್ತಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಒಕ್ಕೂಟ ಆರೋಪಿಸಿದೆ.

ಈ ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗ್ಯಾನೇಶ್‌ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಿರುವ ಒಕ್ಕೂಟ, ಗ್ಯಾನೇಶ್‌ ಕುಮಾರ್ ಅವರನ್ನು ವಜಾಗೊಳಿಸಿ SIR ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದೆ. SIR

ಇದನ್ನೂ ಓದಿ : ಸೆ.28ರಿಂದ ಬ್ಯಾಂಕ್‌ ನೌಕರರ ಮುಷ್ಕರ – ವಾರಕ್ಕೆ 5 ದಿನ ಕೆಲಸಕ್ಕೆ ಆಗ್ರಹ

ಅ.1ರಿಂದ ರಾಷ್ಟ್ರವ್ಯಾಪಿ ಆಂದೋಲನದ ಎಚ್ಚರಿಕೆ

ಗ್ಯಾನೇಶ್‌ ಕುಮಾರ್ ಅವರು ಸೆಪ್ಟೆಂಬರ್ 30ರೊಳಗೆ ರಾಜೀನಾಮೆ ನೀಡದಿದ್ದರೆ ಹಾಗೂ SIR ಪ್ರಕ್ರಿಯೆಯನ್ನು ಸ್ಥಗಿತಗೊಳಿಸದಿದ್ದರೆ, ಅಕ್ಟೋಬರ್ 1ರಿಂದ ಸಹಮನಸ್ಕ ಸಂಘಟನೆಗಳೊಂದಿಗೆ ರಾಷ್ಟ್ರವ್ಯಾಪಿ ಆಂದೋಲನ ಆರಂಭಿಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ.

ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಪ್ಟೆಂಬರ್ 26ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಡ ಹಾಗೂ ಪ್ರಜಾತಾಂತ್ರಿಕ ಪಕ್ಷಗಳು ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.

SIR ವಿರೋಧಿ ಒಕ್ಕೂಟದ ಪರವಾಗಿ ಕೆ. ಮಹಾಂತೇಶ್‌, ಸೀತಾರಾಂ ಗುಂಡಪ್ಪ, ತಾಹೀರ್‌ ಹುಸೇನ್‌, ಕೆ.ವಿ. ಭಟ್‌, ಅಬ್ದುಲ್‌ ಮಜೀದ್‌, ಚಾಮರಸ ಮಾಲಿ ಪಾಟೀಲ್‌, ನೂರ್‌ಶ್ರೀಧರ್‌, ಅರುಣ್‌ ಲೂಯಿಸ್‌, ಯೂಸೂಫ್‌ ಕನ್ನಿ, ಕೆ.ಎಸ್. ವಿಮಲ, ಹೆಣ್ಣೂರು ಶ್ರೀನಿವಾಸ್‌ ಹಾಗೂ ಅಂಬಣ್ಣ ಆರೋಲಿಕರ್‌ ಸೇರಿದಂತೆ ಹಲವು ಮುಖಂಡರು ಹೇಳಿಕೆ ನೀಡಿದ್ದಾರೆ. SIR

ಇದನ್ನೂ ನೋಡಿ : ಎಸ್‌ಐಆರ್‌ ಎಡವಟ್ಟು | ಬಯಲಾಯ್ತು ಅಸಲಿ ಗುಟ್ಟು – ಜನಪರ ನಟ ಕಿಶೋರ್‌ ಕುಮಾರ್‌ ಜೊತೆ ಕೆ.ಎಸ್‌ ವಿಮಲಾ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *