ಸಿಂಗಾಪುರ: ಸಿಂಗಾಪುರ ಓಪನ್ ಬ್ಯಾಡ್ಮಿಂಟನ್-2022 ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಭರ್ಜರಿ ಗೆಲುವು ಸಾಧಿಸಿದ್ದು, ಮೊದಲ ಸೂಪರ್-500 ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು 27 ವರ್ಷದ ಪಿವಿ ಸಿಂಧು 2022ನೇ ಸಾಲಿನ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್-2022 ಸೈಯದ್ ಮೋದಿ ಇಂಟರ್‌ನ್ಯಾಷನಲ್ ಹಾಗೂ ಸ್ವಿಸ್ ಓಪನ್ ಬಿಡಬ್ಲ್ಯೂಎಫ್ ಸೂಪರ್ -300 ಪ್ರಶಸ್ತಿ ಪಡೆದುಕೊಂಡಿದ್ದು, ಇದು ಪಿವಿ ಸಿಂಧುಗೆ ಮೊದಲ ಸಿಂಗಾಪುರ ಓಪನ್ ಪ್ರಶಸ್ತಿಯಾಗಿದೆ.
ಚೀನಾದ ವಾಂಗ್ ಝಿ ಯಿ ವಿರುದ್ದ 21-9, 11-21, 21-15 ಗೇಮ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದ ಪಿ ವಿ ಸಿಂಧು ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಚಾಂಪಿಯನ್ ಆಗುವ ಮೂಲಕ 2022ರಲ್ಲಿ ಮೊದಲ ಸೂಪರ್ 500 ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷದಲ್ಲಿ ಸಯ್ಯದ್ ಮೋದಿ ಹಾಗೂ ಸ್ವಿಸ್ ಓಪನ್ ಪ್ರಶಸ್ತಿ ಜಯಿಸಿದ ಪಿ ವಿ ಸಿಂಧುಗೆ ಇದು ಮೂರನೇ ಪ್ರಶಸ್ತಿಯಾಗಿದೆ.
ಚೀನಾದ ವಾಂಗ್ ಝಿ ಯಿ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಂಧು, ಆರಂಭದಲ್ಲೇ ವಾಂಗ್ ವಿರುದ್ಧ ಮೇಲುಗೈ ಸಾಧಿಸಿದರು. ಮೊದಲ ಸೆಟ್ 21-9 ಅಂತರದಿಂದ ಗೆಲ್ಲುವುದರೊಂದಿಗೆ, 2ನೇ ಸೆಟ್‌ನಲ್ಲಿ ವಾಂಗ್ ಝಿ ಯಿ ಮೇಲುಗೈ ಪಡೆದುಕೊಂಡರು. 2ನೇ ಸುತ್ತಿನ ಆರಂಭದಲ್ಲೇ ಅತ್ಯುತ್ತಮ ಸ್ಮ್ಯಾಶ್ ಮೂಲಕ 6 ಪಾಯಿಂಟ್ ಗಳಿಸಿ ಸಿಂಧು ಅವರನ್ನು ಸ್ವಲ್ಪ ಇಕ್ಕಟ್ಟಿಗೆ ಸಿಲುಕಿಸಿದ್ದರು. ಪರಿಣಾಮ 2ನೇ ಸುತ್ತಿನಲ್ಲಿ ಸಿಂಧು 11-21 ಅಂತರದಲ್ಲಿ ಸೋತರು.
ಮೊದಲೆರಡು ಸುತ್ತಿನಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದರಿಂದ ಅಂತಿಮ ಸುತ್ತಿನ ಪಂದ್ಯ ರೋಚಕತೆಯಿಂದ ಕೂಡಿತ್ತು. ಅದರಂತೆ ಮೊದಲ 5 ಪಾಯಿಂಟ್‌ವರೆಗೂ ಜಿದ್ದಾ-ಜಿದ್ದಿನ ಹೋರಾಟ ಕಂಡು ಬಂದಿತು. ಈ ಹಂತದಲ್ಲಿ ಪಿ ವಿ ಸಿಂಧು ಭರ್ಜರಿ ಸ್ಮ್ಯಾಶ್‌ಗಳ ಮೂಲಕ ವಾಂಗ್ ಅವರನ್ನು ಹಿಂದಿಕ್ಕಿದ್ದರು. ಇದರಿಂದ ವಾಂಗ್ ಝಿ ಯಿ ಅವರ ಪಾಯಿಂಟ್ 6 ಇದ್ದಾಗಲೇ ಸಿಂಧು ಅವರ ಪಾಯಿಂಟ್ 11ಕ್ಕೆ ಏರಿತ್ತು.
ಮಧ್ಯಂತರದಲ್ಲಿ ಮತ್ತೊಮ್ಮೆ ಅದ್ಭುತವಾಗಿ ಪ್ರತಿದಾಳಿ ಮಾಡಿದ ಚೀನಿ ಆಟಗಾರ್ತಿ ತೀವ್ರ ಪೈಪೋಟಿ ನೀಡಿದರು. ಪಿ ವಿ ಸಿಂಧು 12 ಪಾಯಿಂಟ್ ಕಲೆಹಾಕುವಷ್ಟರಲ್ಲಿ ವಾಂಗ್ ಝಿ 11ಕ್ಕೆ ಬಂದು ನಿಂತರು. ಇದಾಗ್ಯೂ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದ ಸಿಂಧು ಅವರು ಮತ್ತೊಮ್ಮೆ ಅಬ್ಬರಿಸಿ ಮೇಲುಗೈ ಸಾಧಿಸಿದರು. ಅಂತಿಮವಾಗಿ 21-15ರ ಅಂತರದಲ್ಲಿ ಗೆಲ್ಲುವ ಮೂಲಕ ಪಿ ವಿ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಈ ಮೊದಲು ಶನಿವಾರ(ಜುಲೈ 16) ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದ 3ನೇ ಶ್ರೇಯಾಂಕಿತ ಪಿ ವಿ ಸಿಂಧು ಜಪಾನಿನ ಸೆನಾ ಕವಾಕಮಿ ವಿರುದ್ಧ 21-15, 21-7 ನೇರ ಪೈಪೋಟಿ ಮೂಲಕ ಸುಲಭ ಜಯ ಸಾಧಿಸಿದರು. ಇತ್ತೀಚೆಗೆ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ನಂ.11 ವಾಂಗ್‌ರನ್ನು ಸೋಲಿಸಿದ್ದ ಪಿ ವಿ ಸಿಂಧು, ಮತ್ತೊಮ್ಮೆ ಅವರನ್ನು ಮಣಿಸಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗಾಪುರ ಓಪನ್‌ನಲ್ಲಿ ಈವರೆಗೆ ಭಾರತೀಯರ ಪೈಕಿ ಸೈನಾ ನೆಹ್ವಾಲ್(2010) ಹಾಗೂ ಸಾಯಿ ಪ್ರಣೀತ್(2017) ಮಾತ್ರ ಚಿನ್ನ ಗೆದ್ದಿದ್ದರು.