ಸಿಂದಗಿಯಲ್ಲಿ ಶೇ. 79.12, ಹಾನಗಲ್‌ ನಲ್ಲಿ ಶೇ. 77.76ರಷ್ಟು ಮತದಾನ

ಬೆಂಗಳೂರು: ಕರ್ನಾಟಕದ ಹಾವೇರಿ ಜಿಲ್ಲೆಯ ಹಾನಗಲ್‌, ವಿಜಯಪುರ ಜಿಲ್ಲೆಯ ಸಿಂದಗಿ ಸೇರಿ ರಾಷ್ಟ್ರಾದ್ಯಂತ ಇಂದು (ಅಕ್ಟೋಬರ್‌ 30) ಉಪಚುನಾವಣೆ ನಡೆದಿದೆ.  13 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ಸೇರಿ ಒಟ್ಟು 29 ವಿಧಾನಸಭಾ ಕ್ಷೇತ್ರಗಳು, ಮೂರು ಲೋಕಸಭಾ ಕ್ಷೇತ್ರಗಳಿಗೆ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.

ಸಂಜೆ 5.00 ಗಂಟೆಯವರೆಗಿನ ಮಾಹಿತಿಯಂತೆ….

ಸಿಂದಗಿ ವಿಧಾನಸಭಾ ಉಪಚುನಾವಣೆ ಮತದಾನ ಇಂದು  ಬೆಳಿಗ್ಗೆ 7 ರಿಂದ ಆರಂಭವಾದವು. ಮತಗಟ್ಟೆ ಎದುರು ಜನರು ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂತು.  ವೃದ್ಧರು, ಅಂಗವಿಕಲರು ಮತದಾನ ಮಾಡಲಿಕ್ಕಾಗಿ ಚುನಾವಣಾ ಆಯೋಗದಿಂದ ವಾಹನ ವ್ಯವಸ್ಥೆ ಕಲ್ಪಿಸಿತ್ತು.

ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,34,584 ಮತದಾರರು ಇದ್ದು, ಕ್ಷೇತ್ರದಲ್ಲಿ ಇದುವರೆಗೆ ಶೇಕಡಾ 79.12ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಎರಡು ‘ಸಖಿ’ ಮತದಾನ ಕೇಂದ್ರ, ಒಂದು ಅಂಗವಿಕಲರಿಗಾಗಿ ವಿಶೇಷ ಮತದಾನ ಕೇಂದ್ರಗಳು ಹಾಗೂ  26 ಹೆಚ್ಚುವರಿ ಮತದಾನ ಕೇಂದ್ರ ಸೇರಿದಂತೆ ಒಟ್ಟು 297 ಮತದಾನ ಕೇಂದ್ರಗಳಲ್ಲಿ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.

ಕ್ಷೇತ್ರದಲ್ಲಿ ಸಂಜೆ 7ರ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹಾನಗಲ್‌ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತು. ಕ್ಷೇತ್ರದಲ್ಲಿ ಒಟ್ಟು 2,04,481 ಮತದಾರರು ಇದ್ದು, ಒಟ್ಟು 263 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಇಲ್ಲಿ 33 ಸೂಕ್ಷ್ಮ ಹಾಗೂ ಎರಡು ಅತಿಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ ಒಟ್ಟು 1155 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Donate Janashakthi Media

Leave a Reply

Your email address will not be published. Required fields are marked *