ಹಾನಗಲ್, ಸಿಂದಗಿ ಫಲಿತಾಂಶ : ಕಾಂಗ್ರೆಸ್‌ಗೆ ಪ್ರತಿಷ್ಠೆ! ಬಿಜೆಪಿಗೆ ನಾಯಕತ್ವದ ನಿರ್ಧಾರ?

ಗುರುರಾಜ ದೇಸಾಯಿ

ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಹಾಗೂ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವಿನ ನಗೆ ಬೀರಿದ್ದಾರೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದು ಕೊಂಡಿದ್ದ ಕಾಂಗ್ರೆಸ್‌ಗೆ ಈ ಫಲಿತಾಂಶ ಸಮಾಧಾನ ತಂದಿದೆ.  ಆದರೆ ಸಿಎಂ ತವರೂರಲ್ಲಿ ಪಕ್ಷದ ಅಭ್ಯರ್ಥಿ ಸೋತಿರುವುದು ಬಿಜೆಪಿಯೊಳಗೆ ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆ ಗರಿಗೆದರುವ ಸಾಧ್ಯತೆ ಇದೆ. ಇನ್ನೂ ಜೆಡಿಎಸ್‌ ತಂತ್ರಗಾರಿಕೆ ಫಲ ನೀಡದೆ ಎರಡು ಕ್ಷೇತ್ರದಲ್ಲೂ ಠೇವಣಿ ಕಳೆದುಕೊಂಡಿದೆ.

ಉಪಚುನಾವಣೆ ಆರಂಭಗೊಂಡಾಗಿನಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಬಂದಿದ್ದವು. ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಬಿಜೆಪಿಗೆ ಲಾಭವಾಗಬಹುದು ಎಂದು ಲೆಕ್ಕ ಹಾಕಲಾಗಿತ್ತು. ಒಂದರ್ಥದಲ್ಲಿ ಉಪಚುನಾವಣೆ ʻಬಯ್ಯೋ ಎಲೆಕ್ಷನ್‌ʼ ಆಗಿ ಪರಿವರ್ತನೆಯಾಗಿತ್ತು. ವಿರೋಧ ಪಕ್ಷಗಳು ಉರುಳಿಸಿದ ʻಬೀಟ್ ಕಾಯಿನ್‌ʼಗೆ ಬಿಜೆಪಿ ಥರಗುಟ್ಟಿದೆ.

ಈ ಉಪಚುನಾವಣೆಯ ಫಲಿತಾಂಶ ಸರಕಾರದ ಮೇಲೆ ಯಾವುದೆ ಪರಿಣಾಮ ಬೀರದಿದ್ದರೂ, ಮುಂದಿನ ರಾಜಕೀಯ ಲೆಕ್ಕಾಚಾರಕ್ಕೆ  ಹಾಗೂ ಕಾರ್ಯತಂತ್ರ ರೂಪಿಸಲು ಮೂರು ಪಕ್ಷಗಳಿಗೆ ಸಹಾಯವಾಗಬಹುದು ಎಂದು ಹೇಳಲಾಗಿತ್ತು.  ಎರಡು ಕ್ಷೇತ್ರಗಳಲ್ಲೂ ಗೆಲ್ಲುವುದಾಗಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ವಿಶ್ವಾಸವನ್ನು ಹೊಂದಿದ್ದವು. ಸೋಲು ಗೆಲುವಿನ ಆಟದಲ್ಲಿ ಜೆಡಿಎಸ್‌ ಪಾತ್ರವಹಿಸಬಹುದು ಎಂದು ಚರ್ಚಿಸಲಾಗಿತ್ತು. ಆದರೆ ಜೆಡಿಎಸ್‌ ಆಟ ನಡೆಯಲಿಲ್ಲ. ಕಳೆದ ಬಾರಿ ಗೆದ್ದ ಕ್ಷೇತ್ರದಲ್ಲಿ ಅದು ಠೇವಣಿ ಕಳೆದುಕೊಂಡಿದೆ.  ಬಿಜೆಪಿ ಒಂದು ಕಡೆ ಸೋತು, ಇನ್ನೊಂದು ಕಡೆ ಗೆದ್ದು ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕಾಂಗ್ರೆಸ್‌ ಒಂದು ಕಡೆ ಗಲವು ಸಾಧಿಸಿ ಶಾಸಕರ ಸ್ಥಾನವನ್ನು ಒಂದು ಸಂಖ್ಯೆ ಹೆಚ್ಚಿಸಿಕೊಂಡಿದೆ. ಹಾನಗಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವ ಮೂಲಕ ಸಿಎಂಗೆ ಮುಖಭಂಗವಾಗಿದೆ.

ಶ್ರೀನಿವಾಸ ಮಾನೆ 87, 490 ಮತಗಳನ್ನು ಪಡೆದರೆ, ಶಿವರಾಜ್ ಸಜ್ಜನರಗೆ  80, 117  ಮತಗಳು ಸಿಕ್ಕಿವೆ. ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ 927 ಮತಗಳನ್ನು ಪಡೆದಿದ್ದಾರೆ.

ಹಾನಗಲ್‌ ಮತದಾರ ಮಾನೆ  ಕೈ ಹಿಡಿದಿದ್ದು ಯಾಕೆ?: ಹಾನಗಲ್ ಕ್ಷೇತ್ರವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತಿಷ್ಠೆಯ ಕಣವನ್ನಾಗಿ ಸ್ವೀಕರಿಸಿತ್ತು. ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರವಾಗಿದ್ದರಿಂದ ಈ ಚುನಾವಣೆ ಅವರಿಗೂ ಪ್ರತಿಷ್ಠೆಯ ಕಣವಾಗಿತ್ತು.‌ ಆದರೆ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಹಾನಗಲ್ ನಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಹಾನಗಲ್ ನಲ್ಲಿ ಶ್ರೀನಿವಾಸ್ ಮಾನೆ ಗೆಲುವಿಗೆ ಕಾರಣವಾದ ಅಂಶಗಳೇನು ಎಂಬುದು ಬಹಳ ಮುಖ್ಯವಾದ ವಿಚಾರವಾಗಿದೆ.

ಶ್ರೀನಿವಾಸ್‌ ಮಾನೆಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ಹಾವೇರಿ ಕಾಂಗ್ರೆಸ್‌ ನಲ್ಲಿ ಅಸಮಧಾನ ಭುಗಿಲೆದ್ದಿತ್ತು.  ಸಾಲು ಸಾಲು ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಅದರನ್ನು ರಾಜ್ಯ ಕಾಂಗ್ರೆಸ್‌ ಹಾಗೂ ಶ್ರೀನಿವಾಸ ಮಾನೆ, ಚಾಣಕ್ಷತೆಯಿಂದ ಅಸಮಾಧಾನವನ್ನು ಹೋಗಲಾಡಿಸಿದರು.  ಟಿಕೆಟ್‌ ಆಕಾಂಕ್ಷಿಯಾಗಿದ್ದ ಮನೋಹರ್‌ ತಹಶೀಲ್ದಾರ್‌ರನ್ನು ಮನವೋಲಿಸಲು ಕಾಂಗ್ರೆಸ್‌ ನಾಯಕರು ಯಶಸ್ವಿಯಾದರು.  ಕೋವಿಡ್‌ ಸಂದರ್ಭದಲ್ಲಿ ಶ್ರೀನಿವಾಸ ಮಾನೆ ಹಳ್ಳಿ ಹಳ್ಳಿಗೆ ತಿರುಗಿ ಜನರ ಸಂಕಷ್ಟಕ್ಕೆ ಜೊತೆಯಾಗಿದ್ದರು. ಹಾನಗಲ್​ನಿಂದ ಹುಬ್ಬಳ್ಳಿಗೆ ತೆರಳುವ ಪ್ರತಿ ರೋಗಿಗೂ ವೈದ್ಯಕೀಯ ನೆರವು ನೀಡಿದ್ದರು.  ಜೊತೆಗೆ ಕ್ಷೇತ್ರದಲ್ಲಿ ಶ್ರೀನಿವಾಸ್ ಮಾನೆ ವೈಯಕ್ತಿಕ ವರ್ಚಸ್ಸೂ ಕೂಡಾ ಫಲ ಕೊಟ್ಟಿದೆ. ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಶ್ರೀನಿವಾಸ್ ಮಾನೆ ಸೋಲು ಕಂಡಿದ್ದರು. ಇದಾದ ಬಳಿಕ ಹಾನಗಲ್ ಕ್ಷೇತ್ರದಲ್ಲಿ ಮಾನೆ ನೆಲೆ ನಿಂತರು. ಅಲ್ಲಿಯೇ ಮನೆ ಮಾಡುವ ಮೂಲಕ ಕೆಲಸ ಕಾರ್ಯ‌‌ ಆರಂಭ ಮಾಡಿದರು. ಇದು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರಿಗೆ ಗೆಲುವಿನ ನಗೆಬೀರಲು ಸಹಾಯ ಮಾಡಿದೆ.

ಹಾನಗಲ್ ಶಾಸಕರಾಗಿದ್ದ ಸಿಎಂ ಉದಾಸಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಹೀಗಾಗಿ, ಕ್ಷೇತ್ರದಲ್ಲಿ ಅವರ ಸಂಪರ್ಕ ಕಡಿತವಾಗಿತ್ತು. ಈ ಸನ್ನಿವೇಶವನ್ನು ಸದುಪಯೋಗ ಮಾಡಿಸಿಕೊಳ್ಳುವಲ್ಲಿ ಶ್ರೀನಿವಾಸ ಮಾನೆ ಯಶಸ್ವಿಯಾದರು. ಉಪ ಚುನಾವಣೆ ಘೋಷಣೆಯಾದ ಬಳಿಕ ಉದಾಸಿ ಕುಟುಂಬ ಬಿಜೆಪಿ ಟಿಕೆಟ್‌ಗಾಗಿ ಹಂಬಲಿಸಿತು. ಆದ್ರೆ, ಟಿಕೆಟ್ ಅವರ ಕೈ ತಪ್ಪಿತು. ಈ ಕಾರಣದಿಂದ ಉದಾಸಿ ಅವರ ಕುಟುಂಬ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗದೆ ದೂರ ಉಳಿಯಿತು. ಒಂದೆಡೆ ಉದಾಸಿ ಕುಟುಂಬ ಬಿಜೆಪಿಯಿಂದ ದೂರವಾದ್ರೆ, ಮತ್ತೊಂದೆಡೆ, ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಾಯಕರು ಉಪ ಚುನಾವಣೆ ಪ್ರಚಾರ ಕಣದಲ್ಲಿ ಅಬ್ಬರಿಸಿದರು. ಮನೆ ಮನೆಗೂ ತಲುಪಿದ ಶ್ರೀನಿವಾಸ್ ಮಾನೆ ಹಾಗೂ ಕಾಂಗ್ರೆಸ್ ನಾಯಕರು ಪಕ್ಷವನ್ನು ಗೆಲುವಿನ ದಡ ಮುಟ್ಟಿಸಿದರು.

ಕೈ ಪಕ್ಷವನ್ನು ಮುಸ್ಲಿಂ ಮತ್ತು ದಲಿತ ಸಮುದಾಯ ಸಂಪೂರ್ಣವಾಗಿ ಕೈ ಹಿಡಿದಿದೆ ಎಂದು ಹೇಳಲಾಗುತ್ತಿದೆ. ಇತ್ತ ಶಿವಕುಮಾರ ಉದಾಸಿ ಪ್ರಚಾರದಿಂದ ದೂರ ಸರಿದ ಕಾರಣ ಬಿಜೆಪಿಗೆ ಲಿಂಗಾಯತ ಮತಗಳನ್ನು ಕ್ರೋಢೀಕರಿಸಲು ಸಾಧ್ಯವಾಗಿಲ್ಲ. 60 ಸಾವಿರಕ್ಕೂ ಹೆಚ್ಚಿರುವ ಲಿಂಗಾಯತ ಮತಗಳನ್ನ ಕ್ರೋಢೀಕರಿಸುವಲ್ಲಿ ಬಿಜೆಪಿ ಸೋತಂತೆ ಕಾಣುತ್ತಿದೆ.

ಸಿಂದಗಿಯಲ್ಲಿ ಅರಳಿದ ಕಮಲ : ಸಿಂದಗಿ ಕ್ಷೇತ್ರದ ಉಪ ಚುನಾವಣೆಯ 22 ಸುತ್ತಿನ ಮತ ಎಣಿಕೆಯಲ್ಲಿ ಎಲ್ಲಾ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿಕೊಂಡು ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ 30 ಸಾವಿರಕಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಪ್ರತಿ ಸುತ್ತಿನಲ್ಲಿಯೂ ಭೂಸನೂರ ತಮ್ಮ ನಿಕಟಸ್ಪರ್ಧಿ ಕಾಂಗ್ರೆಸ್ ನ ಅಶೋಕ್ ಮನಗುಳಿಯವರಿಗಿಂತ 2,500 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು.  ಬಿಜೆಪಿ ರಾಜ್ಯನಾಯಕತ್ವ ಹಾನಲ್‌ಗೆ ನೀಡಿದ ಮಹತ್ವವನ್ನು ಸಿಂದಗಿಗೆ ನೀಡಿರಲಿಲ್ಲ. ಆದರೂ ಬಿಜೆಪಿ ಗೆಲುವು ಸಾಧಿಸಿರುವುದರ ಹಿಂದೆ ಅನುಕಂಪದ ಅಲೆ ಕೆಲಸ ಮಾಡಿದೆ.

ಮುಖ್ಯವಾಗಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಭೂಸನೂರು ಪರ ಭಾರೀ ಅನುಕಂಪದ ಅಲೆ ಇತ್ತು. ಕಡಿಮೆ ಅಂತರದಲ್ಲಿ ಸೋತಿದ್ದ ಕಾರಣ ಗೆಲ್ಲಬೇಕು ಎಂಬ ಭಾವನೆ ಜನರಲ್ಲಿ ಗಟ್ಟಿಯಾಗಿತ್ತು. ಪ್ರತಿ ಸುತ್ತಿನಲ್ಲೂ ಅವರು ಮುನ್ನಡೆ ಕಾಯ್ದುಕೊಂಡಿದ್ದನ್ನು ಗಮನಿಸಿದರೆ ಅನುಕಂಪದ ಅಲೆ ಕೆಲಸ ಮಾಡಿರುವುದು ಗೊತ್ತಾಗುತ್ತದೆ.  ಕ್ಷೇತ್ರದಲ್ಲಿ ಯಡಿಯೂರಪ್ಪ, ಲಕ್ಷ್ಮಣ ಸವದಿ ಮತ್ತು ವಿಜಯೇಂದ್ರ ಪ್ರಚಾರ ನಡೆಸಿದ್ದು ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚು ಲಾಭವನ್ನು ತಂದುಕೊಟ್ಟಿದೆ. ಕ್ಷೇತ್ರದ ಪ್ರಮುಖ ಲಿಂಗಾಯತ ಸಮೂದಾಯದ ಮತಗಳು ವರ್ಗಾವಣೆ ಆಗದಂತೆ ತಡೆಯುವಲ್ಲಿ ಇವರ ಪ್ರಚಾರ ಬಿಜೆಪಿ ಗೆಲುವಿನ ಓಟಕ್ಕೆ ಕಾರಣವಾಗಿವೆ.

ಕಳೆದ ಬಾರಿ ಸೋತಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಭೂಸನೂರು ಪರ ಅನುಕಂಪ ಸೃಷ್ಟಿಯಾಗಿರುವುದು ಕಾಂಗ್ರೆಸ್‌ಗೆ ಈ ಬಾರಿ ಕಂಟಕವಾಗಿ ಹೊರಹೊಮ್ಮಿದೆ. ಹಾಗೂ ಜೆಡೆಎಸ್‌ ಬಿಟ್ಟು ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ಸೇರಿದ್ದು ಅಶೋಕ್ ಮನಗೂಳಿ ಸೋಲಿಗೆ ಕಾರಣವಾಗಿದೆ.

ಕಾಂಗ್ರೆಸ್‌ ಪ್ರತಿಷ್ಠೆ ಹೆಚ್ಚಿಸಿದ ಉಪಚುನಾವಣೆ : ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದೊಡ್ಡ ಲಾಬವಾಗಿದೆ.  2018 ರ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡು ಕ್ಷೇತಗಳಲ್ಲಿ ಸೋಲುಂಡಿದೆ. ಹಾನಗಲ್‌ನಲ್ಲಿ ಎರಡನೇ ಸ್ಥಾನ ಮತ್ತು ಸಿಂದಗಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. ಈ ಉಪಚುನಾವಣೆಯಲ್ಲಿ ಹಾನಗಲ್‌ನಲ್ಲಿ ಗೆಲುವಿನ ನಗೆ ಬೀರಿದೆ. ಹಾಗೂ ಸಿಂದಗಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಹಾಗಾಗಿ ಈ ಚುನಾವಣೆ ಕಾಂಗ್ರೆಸ್‌ಗೆ ಚೇತರಿಕೆ ಎಂದೆ ಹೇಳಬಹುದು.  ಈ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಟಾರ್ಗೆಟ್‌ ಮಾಡಿದ್ದೆ ಹೆಚ್ಚು, ಬಿಜೆಪಿ  ಡಿ.ಕೆ. ಶಿವಕುಮಾರ್‌ರವರನ್ನು ಟ್ರೋಲ್ ಮಾಡಿತ್ತು. ಈ ಚುನಾವಣೆಯ ಫಲಿತಾಂಶದಿಂದ ಈಗ ಕಾಂಗ್ರೆಸ್‌ ಹಾಗೂ ಈ ಇಬ್ಬರ ನಾಯಕರ ಪ್ರತಿಷ್ಟೆ ಇಮ್ಮಡಿಯಾಗಿದೆ ಎಂಬುದು ನಿಜ.

ಹಾನಗಲ್‌ ಸೋಲು ಸಿಎಂಗೆ ತೂಗುಕತ್ತಿ : ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ  ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತೀವ್ರ ಮುಖಭಂಗವಾಗಿದೆ. ಅವರು ಮುಖ್ಯಮಂತ್ರಿಯಾದ ನಂತರದಲ್ಲಿ ಎದುರಿಸಿದ ಮೊದಲ ಉಪಚುನಾವಣೆ ಇದಾಗಿದೆ. ಹಾನಗಲ್‌ ಕ್ಷೇತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ ಬೊಮ್ಮಾಯಿ ಅಲ್ಲಿಯೇ ಠೀಕಾಣಿ ಹೂಡಿದ್ದರು. ಜೊತೆಗೆ ಮಂತ್ರಿ ಮಂಡಲದ ಬಲ, ಸರಕಾರದ ಬಲ, ಹಣ ಬಲ ಎಲ್ಲವನ್ನೂ ಪ್ರಯೋಗಿಸಿದ್ದರು. ಆದರೂ ಗೆಲವು ಸಾಧಿಸಲು ಸಾಧ್ಯವಾಗಲಿಲ್ಲ.

ನಾಯಕತ್ವ ಬದಲಾವಣೆಯ ಚರ್ಚೆಯ ಸಂದರ್ಬದಲ್ಲಿಯೇ ಇವರು ಮುಖ್ಯಮಂತ್ರಿಯಾದವರು. ಇವರು ಮುಖ್ಯಮಂತ್ರಿಯಾಗುವುದಕ್ಕೆ ಹಲವರ ಸಮ್ಮತಿ ಇರದಿದ್ದರೂ ʻಹೈʼ ಸೂಚನೆಗೆ ಮೌನವಾಗಿ ಅನೇಕ ಶಾಸಕರು ಸೈ ಎಂದಿದ್ದರು. ಇತ್ತೀಚೆಗಂತು ಬೊಮ್ಮಾಯಿ ಸಂಘಪರಿವಾರದ ಮಾತಿಗೆ ಬೆಲೆ ಕೊಡುತ್ತಾರೆ ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ಶಾಸಕರು ಗೊಣಗುತ್ತಿರುವುದನ್ನು ನೋಡುತ್ತಿದ್ದೇವೆ. ಹಾಗಾಗಿ ಈ ಚುನಾವಣೆಯ ಫಲಿತಾಂಶ ಬೊಮ್ಮಾಯವರಿಗೆ ತೂಗುಕತ್ತಿಯಾಗಿ ಪರಿಣಮಿಸಲಿದೆ. ಸದ್ದಿಲ್ಲದೆ ನಾಯಕತ್ವ ಬದಲಾವಣೆಯ ಚರ್ಚೆ  ಗರಿಗೆದರಿದರು ಅಚ್ಚರಿ ಪಡಬೇಕಿಲ್ಲ.

ಮತದಾರ ವಿಶ್ವಾಸ ಕಳೆದುಕೊಂಡ ಜೆಡಿಎಸ್ : ರಾಜ್ಯದ ಎರಡೂ ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲೂ ಜೆಡಿಎಸ್ ಮತದಾರರ​ ವಿಶ್ವಾಸ ಕಳೆದುಕೊಂಡಿದೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಹಾನಗಲ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಕೇವಲ 921 ಮತಗಳನ್ನಷ್ಟೇ ಪಡೆದಿದ್ದಾರೆ. ಸಿಂದಗಿಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಕೇವಲ 4,321 ಮತಗಳನ್ನು ಗಳಿಸಲು ಶಕ್ತರಾಗಿದ್ದಾರೆ.  ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ಅತ್ಯಲ್ಪ ಮತ ಪಡೆಯುವುದರೊಂದಿಗೆ ಠೇವಣಿ ಕಳೆದುಕೊಂಡಿದೆ. ಒಟ್ಟಾರೆ ಜೆಡಿಎಸ್‌ ತಂತ್ರಗಾರಿಕೆ ಪ್ಲಾಫ್‌ ಆಗಿದೆ.

Donate Janashakthi Media

Leave a Reply

Your email address will not be published. Required fields are marked *