ಮೈಸೂರು: ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸುವುದಕ್ಕಾಗಿಯೇ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಚಾಮುಂಡಿ ಬೆಟ್ಟದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, 2018ರ ಚುನಾವಣೆಯಲ್ಲಿ ಇದೇ ಸಿದ್ಧರಾಮಯ್ಯ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎನ್ನುವ ಮೂಲಕ ಆ ಸಮಾಜದ ನಡುವೆ ಕಂದಕ ಸೃಷ್ಟಿಸುವ ಕೀಳು ರಾಜಕೀಯ ಮಾಡಿದರು. ಅದನ್ನು ಸರಿಪಡಿಸಿಕೊಂಡು ಕಾಂಗ್ರೆಸ್ ಗೆ ಅಲ್ಲ ಸಿದ್ಧರಾಮಯ್ಯ ಅವರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಎರಡು ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದರು.
ಮಂಡ್ಯದಲ್ಲಿ ರೈತ ಸಂಘ, ಕಾಂಗ್ರೆಸ್ ಪಕ್ಷ ಎಲ್ಲರೂ ಒಂದೂಗೂಡಿ ಮಹಾಭಾರತದ ಚಕ್ರ ವ್ಯೂಹದಲ್ಲಿ ಸಿಲುಕಿಸಿಕೊಂಡು ನಿಖಿಲ್ ಸೋಲಾಯಿತು ಎಂದಿದ್ದೇನೆ. ಎಲ್ಲಿಯೂ ಸಿದ್ಧರಾಮಯ್ಯರಿಂದ ಸೋಲಾಯಿತು ಎಂದಿಲ್ಲ. ಕುತಂತ್ರದಿಂದ ಸೋಲಾಗಿದೆ. ಆದರೆ, ಮುಖ್ಯಮಂತ್ರಿಯಾಗಿ ನಮ್ಮ ವಿರೋಧ ಟೀಕೆ ಮಾಡುತ್ತಾ 110 ಮಂದಿ ಇದ್ದ ಕಾಂಗ್ರೆಸ್‌ನ ಇವರ ನಾಯಕತ್ವದಲ್ಲಿ 70ಕ್ಕೆ ಬಂದಿಳಿದರು. ಇಲ್ಲಿಯೂ ಇವರ ಸಾಮರ್ಥ್ಯ ನೋಡಿದಂತಾಗಿದೆ. ಚಾಮುಂಡೇಶ್ವರಿಯಲ್ಲಿ ಮುಖ್ಯಮಂತ್ರಿಯಾಗಿಯೂ ಸೋಲು ಅನಭವಿಸಬೇಕಾದರೆ ಜೆಡಿಎಸ್ ಎಷ್ಟು ಬಲಿಷ್ಠವಾಗಿದೆ ಎಂದು ಅರ್ಥ ಮಾಡಿಕೊಳ್ಳಲಿ.
ಸಿಂದಗಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಹೈಜಾಕ್ ಮಾಡಿರುವ ಕಾಂಗ್ರೆಸ್ ನಾವೇ ಅಭ್ಯರ್ಥಿ ಹುಡುಕುತ್ತಿದ್ದೇವೆ ಎನ್ನುತ್ತಿದೆ. ಆದರೆ ಕಳೆದ 15 ವರ್ಷಗಳಿಂದ ಜಾತ್ಯತೀತ ಜನತಾ ದಳ, ಬಿಜೆಪಿ ಆ ಕ್ಷೇತ್ರದಲ್ಲಿದ್ದು, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಅಲ್ಲಿ ನಮ್ಮ ಹಾಗೂ ಬಿಜೆಪಿ ನಡುವೆ ನೇರಹಣಾಹಣಿ ನಡೆಯಲಿದೆ ಎಂದು ಹೇಳಿದರು.