ಬೆಂಗಳೂರು: ಸುಮಾರು 200 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗದ ಡಿನೋಟಿಫೈ ಆರೋಪದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.
ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಹಾಗೂ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಪ್ರಭಾವಿ ಬಿಲ್ಡರ್‌ಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಸ್ವತ್ತನ್ನು ಡಿನೋಟಿಫಿಕೇಷನ್ ಮಾಡಿದ ಆರೋಪವಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭೂ ಸ್ವಾಧೀನಪಡಿಸಿಕೊಂಡು “ಉದ್ಯಾನವನ ಮತ್ತು ಸಾರ್ವಜನಿಕರ ಬಳಕೆ”ಗೆಂದು ಮೀಸಲಿಟ್ಟಿದ್ದ ಸ್ವತ್ತು ಮತ್ತು ಅದರೊಂದಿಗೆ ಸುತ್ತಮುತ್ತ ಇದ್ದ ನರ್ಸರಿಗಳನ್ನೂ ಬಿಲ್ಡರ್ ಒಬ್ಬರಿಗೆ ಅನುಕೂಲ ಮಾಡಿಕೊಡಲು ಕಾನೂನುಬಾಹಿರ ಕೃತ್ಯವೆಸಗಲಾಗಿದೆ.
ನಿಯಮಗಳಿಗನುಸಾರ ಈ ಮೀಸಲು ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯಗಳು ನಡೆಸುವಂತಿಲ್ಲ. ಅಲ್ಲದೇ ಈ ಸ್ವತ್ತಿನ ಅಕ್ಕಪಕ್ಕದ ನರ್ಸರಿ ಸ್ವತ್ತುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ಭಾಗದ ಉಳಿದ ಜಮೀನುಗಳನ್ನು ಮತ್ತು ಪ್ರಸ್ತುತ ಹಗರಣಕ್ಕೆ ಸಂಬಂಧಿಸಿದ ಸ್ವತ್ತನ್ನು ಭೂ ಸ್ವಾಧೀನ ಪಡಿಸಿಕೊಂಡಿತ್ತು.
ಲಾಲ್ಬಾಗ್ ಸಿದ್ಧಾಪುರದ 2 ಎಕರೆ 36.5 ಗುಂಟೆ ಬಿಡಿಎ ಜಾಗವನ್ನು ಬಿಲ್ಡರ್ ಒಬ್ಬರಿಗೆ ಡಿನೋಟಿಫೈ ಮಾಡಿರುವ ಆರೋಪವಿದೆ. ಸರ್ಕಾರಿ ಜಾಗವನ್ನು ಅಶೋಕ್ ಧಾರಿವಾಲ್ ಎಂಬ ಬಿಲ್ಡರ್‌ಗೆ ಅನುಕೂಲ ಮಾಡಿಕೊಡಲು ಡಿನೋಟಿಫೈ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಕರಣವೊಂದರ ಆದೇಶದಂತೆ ಉದ್ಯಾನವನಗಳು ಮತ್ತು ಸಾರ್ವಜನಿಕ ಬಳಕೆಗೆಂದು ಮೀಸಲಿಟ್ಟ ಸ್ಥಳಗಳನ್ನು ಡಿನೋಟಿಫೈ ಮಾಡುವ ಮುನ್ನ ಬೆಂಗಳೂರು ಮಹಾನಗರ ಯೋಜನಾ ಸಮಿತಿ(ಬಿಎಂಪಿಸಿ) ಮುಂದೆ ಮಂಡಿಸಿ ಒಪ್ಪಿಗೆ ಪಡೆದುಕೊಳ್ಳಬೇಕು ಸ್ಪಷ್ಟಪಡಿಸಿದೆ. ಆದರೆ, ಆಗ ತಾನೇ ರಚನೆಯಾಗಿದ್ದ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಬಿಎಂಪಿಸಿಯು ಒಂದು ಬಾರಿಯೂ ಸಭೆಯನ್ನು ಸೇರಿರಲಿಲ್ಲ. ಉಚ್ಛ ನ್ಯಾಯಾಲಯದ ಆದೇಶದಂತೆ ಬಿಎಂಪಿಸಿಯ ಮುಂದೆ ಮಂಡಿಸಿ, ಸಮಿತಿಯ ಎಲ್ಲ ಸದಸ್ಯರಿಂದ ಒಪ್ಪಿಗೆಯ ನಿರ್ಣಯಕ್ಕೆ ಸಹಿ ಹಾಕಿಸಿಕೊಂಡ ನಂತರವಷ್ಟೇ ಜಮೀನನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫೈ ಮಾಡಬೇಕಿತ್ತು. ಇವೆಲ್ಲ ನಿಯಮಗಳನ್ನು ಸಿದ್ದರಾಮಯ್ಯ ಅವರು ಪಾಲಿಸಿ ಎಂದು ಉಲ್ಲೇಖಿಸಲಾಗಿದೆ.
ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಸೇರಿ, ಅಂದಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಶ್ಯಾಂಭಟ್ ಮತ್ತು ಅಶೋಕ್ ಧಾರಿವಾಲ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಮತ್ತು ಸರ್ಕಾರಿ ಭೂ ಕಬಳಿಕೆ ಸಂಚು ಪ್ರಕರಣಗಳನ್ನು ದಾಖಲಿಸಿಕೊಂಡು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಲೋಕಾಯುಕ್ತಕ್ಕೆ ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದಾರೆ.