ಬೆಂಗಳೂರು: ಜುಲೈ 1 ರಿಂದ ಶೈಕ್ಷಣಿಕ ವರ್ಷದ ತರಗತಿಗಳು ಆರಂಭವಾಗದೆ ಹಾಗೂ ಇದೇ 15ರಿಂದಲೇ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ. ಆದರೆ, ಶುಲ್ಕ ವಸೂಲಿ ಬಗ್ಗೆ ಇಲಾಖೆ ಯಾವುದೇ ಸ್ಪಷ್ಟ ಸೂಚನೆ ನೀಡಿಲ್ಲ. ಹೀಗಾಗಿ, ಕಳೆದ ವರ್ಷದಂತೆಯೇ ಈ ಶೈಕ್ಷಣಿಕ ವರ್ಷದಲ್ಲೂ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.
ಶೈಕ್ಷಣಿಕ ಶುಲ್ಕ ವಿಚಾರವಾಗಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಉಂಟಾಗಿರುವ ಸಂಘರ್ಷವನ್ನು ತಕ್ಷಣ ನಿವಾರಿಸಬೇಕು. ಪೋಷಕರು ಪಾವತಿಸಬೇಕಾದ ರಿಯಾಯಿತಿ ಶುಲ್ಕವನ್ನು ಸರ್ಕಾರವೇ ನಿರ್ಧರಿಸಬೇಕು. ಇದಕ್ಕಾಗಿ ಸರ್ಕಾರ ಕಟ್ಟುನಿಟ್ಟಾಗಿ ನಿರ್ಧಾರ ಕೈಗೊಳ್ಳಬೇಕು. ಅದರೊಂದಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತಡೆಹಿಡಿದಿರುವ ವೇತನ ನೀಡಬೇಕು’ ಎಂದೂ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇದನ್ನು ಓದಿ: ಶುಲ್ಕ ಕಟ್ಟಿಸಿಕೊಳ್ಳಲು ಬಡ್ಡಿ ವ್ಯವಹಾರ ಮಾಡುವ ಖಾಸಗಿ ಶಾಲೆಗಳ ಮಾನ್ಯತೆ ರದ್ದತಿಗೆ ಎಸ್.ಎಫ್. ಐ ಆಗ್ರಹ
‘ಖಾಸಗಿ ಶಾಲಾ ಆಡಳಿತ ಮಂಡಳಿಗಳು ಬ್ಯಾಂಕ್‍ಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿಯು, ಅವರಿಗೆ ಹೊರೆಯಾಗದಂತೆ ತಗ್ಗಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೊರೊನಾ ಕಾರಣದಿಂದಾಗಿ ಕಳೆದ ವರ್ಷದಿಂದ ಮಕ್ಕಳು ಶಾಲೆಗಳಿಗೆ ಹೋಗಲು ಸಾಧ್ಯವಾಗಿಲ್ಲ. ತರಗತಿಗಳು ನಡೆಯಲಿಲ್ಲವೆಂದು ಖಾಸಗಿ ಶಾಲೆ-ಕಾಲೇಜುಗಳು ಶಿಕ್ಷಕರಿಗೆ ಸಂಬಳವನ್ನು ನೀಡಿಲ್ಲ. ಸಂಬಳವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರು ನರೇಗಾ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಹಣ್ಣು, ತರಕಾರಿ ವ್ಯಾಪಾರಿಗಳಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆ ಕಾಲೇಜುಗಳು ವಿದ್ಯಾರ್ಥಿಗಳ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಪೋಷಕರ ಒತ್ತಾಯಕ್ಕೆ ಮಣಿದ ಸರ್ಕಾರ ಕಳೆದ ವರ್ಷ ಬೋಧನಾ ಶುಲ್ಕದಲ್ಲಿ ಶೇ 30ರಷ್ಟು ವಿನಾಯಿತಿ ನೀಡಿ ಆದೇಶ ಹೊರಡಿಸಿತ್ತು. ಆದರೆ, ಈ ಆದೇಶ ಜಾರಿಗೆ ಬರಲಿಲ್ಲ’ ಎಂದಿದ್ದಾರೆ.
ಇದನ್ನು ಓದಿ: ಶುಲ್ಕ ಪಾವತಿಸಿಲ್ಲವೆಂದು ತರಗತಿ ನಡೆಸದಿದ್ದರೆ ಕಾನೂನು ಕ್ರಮ: ಸುರೇಶ್ ಕುಮಾರ್
‘ವಾಹನ ಶುಲ್ಕ ಸೇರಿ ಇತರೆ ಶುಲ್ಕವನ್ನೂ ಕಟ್ಟಿಸಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ನಿಷ್ಕ್ರಿಯವಾಗಿ ಕೂರುವುದು ಅಸಾಮರ್ಥ್ಯದ, ಲಾಬಿಗೆ ಮಣಿದಿರುವುದರ ಲಕ್ಷಣ. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಕುರಿತು ಯಾವ ಕ್ರಮ ವಹಿಸಲಾಗಿದೆ. ಪೂರ್ತಿ ಶುಲ್ಕವನ್ನು ಕಟ್ಟಲಾಗದ ಮಕ್ಕಳಿಗೆ ಮುಂದಿನ ತರಗತಿಗಳಿಗೆ ಪ್ರವೇಶ ನೀಡದೆ ಶೋಷಿಸುತ್ತಿರುವ ಶಾಲೆಗಳ ವಿಚಾರದಲ್ಲಿ ಯಾವ ಕ್ರಮ ವಹಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಕಳೆದ ವರ್ಷ ಶಾಲೆಗೆ ಮಕ್ಕಳು ಕಾಲಿಡಲು ಸಾಧ್ಯವಾಗದಿದ್ದರೂ ಬಸ್ ಶುಲ್ಕ ವಸೂಲಿ ಮಾಡಿದ ಶಾಲೆಗಳೂ ಇವೆ. ಈ ವರ್ಷವೂ ಇದೇ ಪರಿಸ್ಥಿತಿ ಮುಂದುವರೆದಿದೆ. ಸಾಲದ್ದಕ್ಕೆ ಸರ್ಕಾರ ಶೇ 30ರಷ್ಟು ಶುಲ್ಕ ಕಡಿತ ಮಾಡಿದ್ದು ಹಿಂದಿನ ವರ್ಷಕ್ಕೆ ಮಾತ್ರ, ಈ ವರ್ಷ ಸರ್ಕಾರವೇ ಪೂರ್ಣ ಶುಲ್ಕ ವಸೂಲಿ ಮಾಡಲು ಒಪ್ಪಿಗೆ ಕೊಟ್ಟಿದೆ ಎಂದು ಆಡಳಿತ ಮಂಡಳಿಗಳು ಪೋಷಕರಿಗೆ ಹೇಳುತ್ತಿವೆ. ಹೀಗಾಗಿ, ತಕ್ಷಣ ಸರ್ಕಾರ ಈ ವಿಚಾರದಲ್ಲಿ ತನ್ನ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.