ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು: ಖಾಸಗಿ ಶಾಲೆಗಳ ಪರವಾನಗಿಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೇ ಯಾವ ಕೆಲಸವು ಆಗದ ವಾತಾವರಣ ಇದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು  ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ,  ಬಿ.ಸಿ ನಾಗೇಶ್ ಅವರು ತಮ್ಮ ಇಲಾಖೆಯ ಲಂಚಾವತಾರದ ಕಡೆಗಿನ ಜನರ ಗಮನ ಬೇರೆಕಡೆ ಸೆಳೆಯಲಿಕ್ಕಾಗಿಯೇ ಪಠ್ಯಪುಸ್ತಕ, ಭಗವದ್ಗೀತೆ, ಮದರಸಾಕ್ಕೆ ಸಂಬಂಧಿಸಿದ ವಿವಾದ ಹುಟ್ಟುಹಾಕುತ್ತಿದ್ದಾರೆ. ಲಂಚಕೋರರಿಗೆ ಮುಖ ಮರೆಸಿಕೊಳ್ಳಲು ಹಿಂದುತ್ವ ಒಂದು ಮುಖವಾಡ. ಇದು ಶಿಕ್ಷಣವೋ? ಭಕ್ಷಣೆಯೋ? ಎಂದು ಪ್ರಶ್ನಿಸಿದ್ದಾರೆ.

ಪ್ರಾರಂಭದಿಂದಲೇ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ದ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಈಗ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಪುರಾವೆಗಳನ್ನು ನೀಡಿದೆ. ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿ ವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೆ ಯಾವ ಕೆಲಸವೂ ಆಗುತ್ತಿಲ್ಲ, ಲಂಚ ಪಡೆದು ಖಾಸಗಿ ಶಾಲೆಗಳಿಗೆ ಅಕ್ರಮವಾಗಿ ಅನುಮತಿ ನೀಡುವ ಶಿಕ್ಷಣ ಇಲಾಖೆಯೇ, ಮತ್ತೆ ಅಕ್ರಮ ಎಸಗಿದ ಆರೋಪದ ಮೇಲೆ ದುಡ್ಡು ವಸೂಲಿ ಮಾಡುತ್ತಿದೆ ಎಂದು ಸಿದ್ದಾರಾಮಯ್ಯ ಆರೋಪಿಸಿದ್ದಾರೆ.

ಶಿಕ್ಷಣದ ಹಕ್ಕು ಕಾಯ್ದೆಯೂ ಹಳ್ಳ ಹಿಡಿಸಿದೆ. 2012ರಲ್ಲಿ ಆರ್‌ಟಿಇ ಫಲಾನುಭವಿ ವಿದ್ಯಾರ್ಥಿಗಳು 1.20 ಲಕ್ಷ, ಈಗ ಈ ವಿದ್ಯಾರ್ಥಿಗಳ ಸಂಖ್ಯೆ 7 ಸಾವಿರಕ್ಕೆ ಇಳಿದಿದೆ. ಖಾಸಗಿ ಶಾಲೆಗಳಿಗೆ ಸರ್ಕಾರವೇ ಬೆಂಬಲಸುತ್ತಿದೆ. ಆರ್ ಟಿ ಇ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಸರ್ಕಾರ ಸುಮಾರು ರೂ.900 ಕೋಟಿ ಬಾಕಿ ಪಾವತಿಸಬೇಕಿದ್ದು,  40% ಕಮಿಷನ್ ಲೆಕ್ಕ ಹಾಕಿರುವ  ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಮ್ಮ ಇಲಾಖೆಯ ಲಂಚಾವತಾರದ ಕಡೆಗಿನ ಜನರ ಗಮನ ಬೇರೆಕಡೆ ಸೆಳೆಯಲಿಕ್ಕಾಗಿಯೇ ಪಠ್ಯಪುಸ್ತಕ, ಭಗವದ್ಗೀತೆ, ಮದರಸಾಕ್ಕೆ ಸಂಬಂಧಿಸಿದ ವಿವಾದ ಹುಟ್ಟುಹಾಕುತ್ತಿದ್ದಾರೆ. ಲಂಚಕೋರರಿಗೆ ಮುಖ ಮರೆಸಿಕೊಳ್ಳಲು ಹಿಂದುತ್ವ ಒಂದು ಮುಖವಾಡ ಎಂದು ಆರೋಪಿಸಿದ್ದಾರೆ.

ಗುತ್ತಿಗೆದಾರರು ಸರ್ಕಾರದ 40% ಕಮಿಷನ್ ಬಗ್ಗೆ ಪ್ರಧಾನಿಗೆ ಬರೆದ ಪತ್ರಗಳಿಗೆ ಉತ್ತರ ಸಿಕ್ಕಿಲ್ಲ. ಈಗ ಖಾಸಗಿ ಶಾಲೆಗಳ ಆಡಳಿತವೂ ಪ್ರಧಾನಿಗೆ ಪತ್ರ ಬರೆದಿದೆಯಂತೆ.  ಈ ಎಲ್ಲ ಪತ್ರಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನಿಗಾವಣೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *