ಶೈಲಜಾ ಟೀಚರ್ ಪ್ರತಿಷ್ಠಿತ ಮ್ಯಾಗ್ಸೆಸೆ ಪುರಸ್ಕಾರವನ್ನು ನಿರಾಕರಿಸಿರುವುದೇಕೆ?

ಕೇರಳದ ಮಾಜಿ ಆರೋಗ್ಯ ಮಂತ್ರಿ ಮತ್ತು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯೆ ಕೆ.ಕೆ.ಶೈಲಜಾ  ರವರಿಗೆ ಏಷ್ಯಾಖಂಡದ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದಕ್ಕಿಂತ ಹೆಚ್ಚಾಗಿ ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ ಅವರ ನಡೆಯೇ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಕೆಲವು ಪತ್ರಿಕೆಗಳು ಇದು ಸಿಪಿಐ(ಎಂ)ನ ಎರಡನೇ “ಚಾರಿತ್ರಿಕ ಪ್ರಮಾದ” ಎನ್ನುವ ಮಟ್ಟಕ್ಕೆ ಹೋಗಿವೆ.

ಮಾಧ್ಯಮಗಳವರು ಆಗಲೇ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸುತ್ತ ಯೆಚುರಿಯವರು ಶೈಲಜಾರವರು ಪ್ರಶಸ್ತಿ ನಿರಾಕರಿಸಲು ಮೂರು ಕಾರಣಗಳಿವೆ ಎಂದಿದ್ದಾರೆ- ಮೊದ¯ನೆಯದಾಗಿ, ಈ ಪ್ರಶಸ್ತಿ ನೀಡಿರುವುದು ಕೇರಳದ ಎಲ್‌ಡಿಎಫ್ ಸರಕಾರ ಕೊವಿಡ್ ಮಹಾಸೋಂಕಿನ ಸಮಯದಲ್ಲಿ ಆರೋಗ್ಯ ಮೂಲರಚನೆಗಳನ್ನು ನಿರ್ವಹಿಸಿದ ರೀತಿಗಾಗಿ, ಇದು ಒಬ್ಬರು ವ್ಯಕ್ತಿಯ ಸಾಧನೆಯಲ್ಲ, ಸಾಮೂಹಿಕ ಸಾಧನೆ; ಎರಡನೆಯದಾಗಿ, ಈ ಪ್ರಶಸ್ತಿಯನ್ನು ಯಾವುದೇ ಸಕ್ರಿಯ ರಾಜಕೀಯ ಮುಖಂಡರಿಗೆ ಕೊಡಲಾಗುತ್ತಿಲ್ಲ, ಆದರೆ ಶೈಲಜಾ ಸಿಪಿಐ(ಎಂ)ನ ಅತ್ಯುನ್ನತ ಅಂಗವಾದ ಕೇಂದ್ರ ಸಮಿತಿಯ ಸದಸ್ಯರು ಮತ್ತು ಮೂರನೆಯದಾಗಿ ಮ್ಯಾಗ್ಸೆಸೆ ಫಿಲಿಪೈನ್ಸ್ ದೇಶದಲ್ಲಿ ಕಮ್ಯುನಿಸ್ಟರನ್ನು ಕ್ರೂರವಾಗಿ ದಮನ ಮಾಡಿದ ಚರಿತ್ರೆ ಉಳ್ಳವರು.

ಮ್ಯಾಗ್ಸೆಸೆ ದಮನದ ಚರಿತ್ರೆ

ಇಲ್ಲಿ ಚರಿತ್ರೆಯ ಪ್ರಸ್ತಾಪ ಮಾಧ್ಯಮಗಳಲ್ಲೂ ಬಂದಿರುವುದರಿಂದ, ಸಹಜವಾಗಿ ಈ ಪ್ರಶಸ್ತಿಯ ಹಿನ್ನೆಲೆಯಲ್ಲಿರುವ ಚರಿತ್ರೆಯನ್ನು ನೆನಪಿಸಿಕೊಳ್ಳುವುದು ಅಗತ್ಯವಾಗಿದೆ.

ಇದು ನ್ಯೂಯಾರ್ಕಿನ 1957ರಲ್ಲಿ ನ್ಯೂಯಾರ್ಕಿನ ರಾಕ್‌ಫೆಲ್ಲರ್ ಬ್ರದರ್ಸ್ ಫಂಡ್ 1954-57ರ ಅವಧಿಯಲಿ ಫಿಲಿಪೈನ್ಸ್ ಅಧ್ಯಕ್ಷರಾಗಿದ್ದ ರೆಮೊನ್ ಮ್ಯಾಗ್ಸೆಸೆ ನೆನಪಿನಲ್ಲಿ ಫಿಲಿಪೈನ್ಸ್ ಸರಕಾರದ ಒಪ್ಪಿಗೆಯೊಂದಿಗೆ ಆರಂಭಿಸಿದ ಟ್ರಸ್ಟ್ ಕೊಡುವ ಪ್ರಶಸ್ತಿ.

ರಮೊನ್ ಮ್ಯಾಗ್ಸೆಸೆ 1950ರಲ್ಲಿ ಫಿಲಿಪೈನ್ಸ್ ದೇಶದ ರಕ್ಷಣಾ ಕಾರ್ಯದರ್ಶಿಯಾಗಿದ್ದವರು ಮತ್ತು 1953ರಲ್ಲಿ ಅಲ್ಲಿಯ ಅಧ್ಯಕ್ಷರಾಗಿ ಚುನಾಯಿತರಾಗಿ 1957 ರಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು. 1953ರಲ್ಲಿ ಅವರು ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದಾಗ ಅಮೆರಿಕಾದ ಟೈಮ್ ಪತ್ರಿಕೆ “ಹಲವು ರೀತಿಗಳಲ್ಲಿ.. ಮ್ಯಾಗ್ಸೆಸೆ ವಿಜಯ ಒಂದು ಅಮೆರಿಕನ್ ವಿಜಯ.. ರಮೊನ್ ಮ್ಯಾಗ್ಸೆಸೆ ಒಬ್ಬ ಅಮೆರಿಕಾದ ಹುಡುಗ ಎಂಬುದು ಗುಟ್ಟೇನಲ್ಲ” ಎಂದಿತ್ತು.

ಹೌದು, ಅದು ಎಲ್ಲರಿಗೂ ತಿಳಿದಿದ್ದ ಗುಟ್ಟು.

ಪೂರ್ವ ಏಷ್ಯಾದಲ್ಲಿ ಕಮ್ಯುನಿಸ್ಟ್ ಅಲೆ ಅಡಗಿಸಲು…

ಎರಡನೇ ಮಹಾಯುದ್ಧದ ವೇಳೆಯಲ್ಲಿ ಮತ್ತು ನಂತರ ಫಿಲಿಪೈನ್ಸ್ ಸೇರಿದಂತೆ ಪೂರ್ವ ಏಷ್ಯಾದಲ್ಲಿ ಒಂದು ಕಮ್ಯುನಿಸ್ಟ್ ಪರ ಅಲೆ ಎದ್ದು ಬಂದಿತ್ತು. ಇದು ಬಹುಪಾಲು ಜಪಾನೀ ಅತಿಕ್ರಮಣಕ್ಕೆ ರೈತಾಪಿ ಜನಗಳ ಪ್ರತಿರೋಧವಾಗಿ ಆರಂಭವಾಗಿ ಮುಂದೆ ಸ್ಥಳೀಯ ಭೂಮಾಲಕರ ವಿರುದ್ಧ ಮತ್ತು ಅವರಿಗೆ ಬೆಂಬಲವಾಗಿ ನಿಂತ ಅಮೆರಿಕನ್ ಆಳರಸರ ವಿರುದ್ಧ ರೈತರ ಗೆರಿಲ್ಲಾ ಹೋರಾಟವಾಗಿ ಮಾರ್ಪಟ್ಟುದರ ಪರಿಣಾಮವಾಗಿತ್ತು.

ಫಿಲಿಪೈನ್ಸ್ ನಲ್ಲಿ 1942ರಲ್ಲಿ ಆರಂಭವಾದ ಹುಕ್ಬಲಹಾಪ್ (ಅಂದರೆ ‘ಜಪಾನೀಯರ ವಿರುದ್ಧ ಜನತಾ ಸೇನೆ’) ಅಥವ ಸಂಕ್ಷಿಪ್ತವಾಗಿ ಹುಕ್ ಬಂಡಾಯ 1954ರಲ್ಲಿ ಮ್ಯಾಗ್ಸೆಸೆ ಅಧ್ಯಕ್ಷ ಹುದ್ದೆಯನ್ನು ವಹಿಸುವ ವೇಳೆಗೆ ಹತ್ತಿಕ್ಕಲ್ಪಟ್ಟಿತು. ಬಹುಪಾಲು ರೈತ ಗೆರಿಲ್ಲಾಗಳೇ  ಇದ್ದ ಈ ಜನತಾ ಸೇನೆಗೆ ನೇತೃತ್ವ ನೀಡುತ್ತಿದ್ದವರು ಕಮ್ಯುನಿಸ್ಟರು. ಈ ಪ್ರತಿರೋಧವನ್ನು ಹತ್ತಿಕ್ಕುವುದಕ್ಕಾಗಿಯೇ ನೇಮಿಸಲ್ಪಟ್ಟಿದ್ದ ಈ ಪ್ರದೇಶದ ಸಿಐಎ ಮುಖ್ಯಸ್ಥ  ಎಡ್ವರ್ಡ್ ಲಾನ್ಸ್ ಡೇಲ್ ಈ ಕೆಲಸಕ್ಕೆ ಮ್ಯಾಗ್ಸೆಸೆಯವರನ್ನು ಆರಿಸಿಕೊಂಡರು, 1950ರಲ್ಲಿ ಮ್ಯಾಗ್ಸೆಸೆಯವರನ್ನು ಅಮೆರಿಕನ್ ಒತ್ತಡಕ್ಕೆ ಒಳಗಾಗಿ ಆಗಿನ ಅಧ್ಯಕ್ಷ ಕ್ವಿರಿನೊ ರಾಷ್ಟ್ರೀಯ ರಕ್ಷಣಾ ಕಾರ್ಯದರ್ಶಿಯ ಹುದ್ದೆಗೆ ನೇಮಿಸಿದರು. ಮ್ಯಾಗ್ಸೆಸೆ ಅಮೆರಿಕನ್ ಆಳುವ ಮಂದಿಗಾಗಿ ತನ್ನ ದೇಶದ ರೈತರ ಬಂಡಾಯವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾದರು. ಇದಕ್ಕಾಗಿ ಅವರು ತನ್ನ ಪಡೆಗಳಿಗೆ ನೀಡಿದ ಕುಖ್ಯಾತ ಧ್ಯೇಯವಾಕ್ಯ ನಾಲ್ಕು ‘ಎಫ್’ಗಳು- ಫೈಂಡ್ ದೆಮ್-ಫೂಲ್ ದೆಮ್-ಫೈಟ್ ದೆಮ್-ಫಿನಿಶ್ ದೆಮ್ . ಇಲ್ಲಿ ದೆಮ್ ಅಥವ ಅವರು ಎಂದರೆ ಹುಕ್ ಬಂಡಾಯಗಾರರು, ಮುಖ್ಯವಾಗಿ ನೇತೃತ್ವ ನೀಡುತ್ತಿದ್ದ ಕಮ್ಯುನಿಸ್ಟರು. 1951ರ ವೇಳೆಗಾಗಲೇ 1363 ಹುಕ್‌ಗಳನ್ನು ಸಾಯಿಸಲಾಯಿತು, ಇನ್ನೂ ಸಾವಿರಾರು ಮಂದಿಯನ್ನು ಜೈಲಿಗಟ್ಟಲಾಯಿತು, ಇಲ್ಲವೇ ದಾಖಲೆ ಸಿಗದಂತೆ ಕೊಂದು ಹಾಕಲಾಯಿತು ಎನ್ನಲಾಗಿದೆ. ಇಂತಹ ವ್ಯಕ್ತಿ ಪಾಶ್ಚಿಮಾತ್ಯ, ಅದರಲ್ಲೂ ಅಮೆರಿಕನ್  ಮಾಧ್ಯಮಗಳ ಮತ್ತು ಆಳುವ ವರ್ಗಗಳ ಕಣ್ಮಣಿಯಾದುದರಲ್ಲಿ ಆಶ್ಚರ್ಯವೇನು?

ಈ ಸಿಐಎ ಏಜೆಂಟ್ ಎಡ್ವರ್ಡ್ ಲಾನ್ಸ್ ಡೇಲನನ್ನು ಮುಂದೆ 1960ರ ದಶಕದಲ್ಲಿ ವಿಯೆಟ್ನಾಂನಲ್ಲಿ ಅದೇ ಕೆಲಸ ಮಾಡಲು ಸೈಗಾನಿಗೆ ಕಳಿಸಲಾಯಿತು. ಆದರೆ ಅಲ್ಲಿ ಆತನಿಗೆ ಇನ್ನೊಬ್ಬ ಮ್ಯಾಗ್ಸೆಸೆ ಸಿಗಲಿಲ್ಲ ಎಂಬುದು ಈಗ ಚರಿತ್ರೆ.

ಈ ಚರಿತ್ರೆ ತಿಳಿದಿರುವವರಿಗೆ ಈಗ ಶೈಲಜಾ ಟೀಚರ್ ಆತನ ಹೆಸರಿನ ಪ್ರಶಸ್ತಿಯನ್ನು ನಿರಾಕರಿಸಿರುವ ಬಗ್ಗೆ ಆಶ್ವರ್ಯವೇನೂ ಆಗಿಲ್ಲ.

ಒಂದು ವೇಳೆ ಶೈಲಜಾ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದರೆ ಏನಾಗುತ್ತಿತ್ತು?

ಮಾಧ್ಯಮಗಳಲ್ಲಿನ ಈ ಚರಿತ್ರೆ ತಿಳಿದಿದ್ದ ಮಂದಿ ಸಿಪಿಐ(ಎಂ) ಮೇಲೆ ಮುಗಿ ಬೀಳುತ್ತಿದ್ದರು ಎನ್ನುತ್ತಾರೆ ಅರ್ಥಶಾಸ್ತçಜ್ಞ ಪ್ರೊ.ಆರ್.ರಾಮ್‌ಕುಮಾರ್. ಸಿಪಿಐ(ಎಂ) ಫಿಲಿಪೈನ್ಸ್ ಕಮ್ಯುನಿಸ್ಟರ ನೆನಪಿಗೆ ಅಪಚಾರ, ವಿಶ್ವಾಸಘಾತ ಬಗೆದಿದೆ ಎಂದೆಲ್ಲಾ ಹೇಳುತ್ತಿದ್ದರು. ಮಲೆಯಾಳಂ ಪತ್ರಿಕೆಗಳವರು ಫಿಲಿಪೈನ್ಸ್ಗೂ ಹೋಗಿ ಅಲ್ಲಿ ಆ ಕಮ್ಯುನಿಸ್ಟರ ಮೊಮಕ್ಕಳನ್ನು ಭೇಟಿ ಮಾಡಿ ಸಂದರ್ಶನಗಳನ್ನೂ ಪ್ರಕಟಿಸುತ್ತಿದ್ದರು ಎನ್ನುತ್ತಾರೆ ಪ್ರೊ.ರಾಮ್ ಕುಮಾರ್.

Donate Janashakthi Media

Leave a Reply

Your email address will not be published. Required fields are marked *